Wednesday, 13 November 2019

ನರಜನ್ಮ ಬಂದುದಕೆ ಇಪ್ಪತ್ತು ಆರುಕಳೆ ankita pranesha vittala

by ಪ್ರಾಣೇಶದಾಸರು
ನರಜನ್ಮ ಬಂದುದಕೆ ಇಪ್ಪತ್ತು ಆರುಕಳೆ|ವರದೊಳಿಹ ಹರಿರೂಪ ಚಿಂತಿಸುವದೂ ಪ

ಎರಡನಂತದ ಮ್ಯಾಲೆ ಒಂಬತ್ತಧಿಕ ನೂರು |ಸ್ವರುಪದೊಳಗಿಹವು ಆಮ್ಯಾಲೆ ಇಚ್ಛಾ ||ವರಣದಲಿ ಒಂದು ಲಿಂಗದಲಿ ಆರೊಂದಧಿಕ |ಅರುವತ್ತು ರೂಪಗಳು ಉಂಟು ಕೇಳೀ 1

ಎಪ್ಪತ್ತರೊಂಬತ್ತಧಿಕ ನೂರು ಅವ್ಯಕ್ತ- |ಕಿಪ್ಪವು ಅವಿದ್ಯದೊಳು ಯೇಳು ಅಧಿಕಾ ||ಇಪ್ಪತ್ತುಕರ್ಮಕಾಮಾವರಣದಲಿ ಮೂರು |ಇಪ್ಪತ್ತು ಮೂರು ಅರುವತ್ತು ಎಂಟೂ 2

ಮಾರಮಣ ಜೀವ ಪರಮಾಚ್ಚಾದಿಕೆರಡರೊಳು |ಬ್ಯಾರೆ ಬ್ಯಾರಿಪ್ಪ ಒಂಬತ್ತು ರೂಪಾ ||ನಾರಾಯಣಾದಿ ಐದರೊಳಗೊಂದೊಂದೇವೆ |ತೋರುತಿಹವಜಪಿತನ ವಿಮಲ ಮೂರ್ತೀ 3

ಎರಡು ಲಕ್ಷೆರಡು ಸಾವಿರದ ನಾನೂರು ಈ- |ರೆರಡಧಿಕ ತೊಂಬತ್ತು ಅನಿರುದ್ಧದೀ ||ಮೆರವ ಶ್ರೀವಾಸುದೇವನಾರಾಯಣ ಕವಚದಿ |ಇರುವ ಒಂದೊಂದು ಆನಂದಮಯದೀ 4

ಇನ್ನುವಿಜ್ಞಾನಮನವಾಙುï ಶ್ರೋತೃ ಚಕ್ಷು ಪ್ರಾ- |ಣನ್ನಮಯ ಹೀಗೆ ಯೇಳೊಂದರೊಳಗೇ ||ವನ್ನಜಾಕ್ಷನರೂಪಒಂದೊಂದೆ ಇಹವೆಂದು |ಚೆನ್ನಾಗಿ ಭಕ್ತಿಪೂರ್ವಕ ತಿಳಿವದೂ5

ಸ್ಥೂಲವಾದಂಗದಲಿ ಮೂವತ್ತೆರಡು ಕೋಟಿ |ಯೇಳೂ ಲಕ್ಷದ ಮೇಲೆ ರಮ್ಯವಾಗೀ ||ಶ್ರೀಲೋಲ ತೊಂಬತ್ತು ಮೂರು ಸಾವಿರದ ಹದಿ- |ನೇಳಧಿಕ ಎಂಟು ಶತರೂಪದಲಿಹಾ 6

ಈರನಂತ ಮೂವತ್ತೆರಡು ಕೋಟಿ ನವಲಕ್ಷ |ಆರಧಿಕ ತೊಂಬತ್ತು ಸಾವಿರೆಂಟೂ ||ನೂರು ಐವತ್ತೆಂಟು ರೂಪಗಳು ಸ್ತಂಭಾದಿ |ವಾರಿಜಭವಾಂತ ದೇಹಗಳೊಳೀಹವೂ 7

ಮೋದತೀರ್ಥರ ಮತವ ಪೊಂದಿದವರೀರೂಪ|ಸಾದರದಿ ಚಿಂತಿಸುವದೇ ಮೋಕ್ಷಕೇ ||ಸಾಧನವಿದು ಸಾತ್ವಿಕರಿಗಲ್ಲದಲೆ ಅನ್ಯ- |ವಾದಿಗಳಿಗುಪದೇಶ ಮಾಡಸಲ್ಲಾ8

ಪ್ರಾಣೇಶ ವಿಠ್ಠಲನ ಸುಮೂರ್ತಿ ಈ ಪರಿಯಿಂದ |ಧ್ಯಾನಕ್ಕೆ ತಂದು ಹಿಗ್ಗದಲೆ ಬರಿದೇ ||ಏನು ಓದಿದರು ಕೇಳಿದರು ತಪ ಮಾಡಿದರು |ಆನಿ ತಿಂದಕಪಿತ್ಥದಂತೆರಿವದೂ 9
*********

No comments:

Post a Comment