Friday 27 December 2019

ಗೌರಿ ಗಜಮುಖನ ಮಾತೆ ಗುಣಗಣಭರಿತೆ ankita jayesha vittala


ಶ್ರೀ ಜಯೇಶವಿಠಲರ ಕೃತಿ
ರಾಗ ನವರೋಜ್      ಆದಿತಾಳ 

ಗೌರಿ ಗಜಮುಖನ ಮಾತೆ ಗುಣಗಣಭರಿತೆ ।
ಶೌರಿಯ ಸಖನಂಗ ಸಂಗಿ ಸಂಪೂರ್ತೇ || ಪ ||
ಸೌರಭ ಶುಭತನು ವಾರಿಜನೇತ್ರಳೆ
ವೀರಸತಿಯೆ ದಯವಾರಿಧಿ ರಕ್ಷಿಸು || ಅ.ಪ. ||

ತುಂಗಮಂಗಳೇ ದೇವಿ | ಕಲಿಗೆ ಭೈರವೀ ।
ರಂಗನ ಸಖನಂಗಸಂಗ ನೀಡುವಿ ।
ಹಿಂಗದೆ ಪೊರೆಯೆ ತಾಯೇ | ಭಕ್ತ ಸಂಜೀವೇ ।
ತಿಂಗಳಮುಖಿ ವರಗರೆವೆ | ನಮ್ಮ ಶಾಂಭವೇ ॥
ಭಂಗವ ಪಟ್ಟೆನು ನುಂಗುವ ಭವದೊಳು
ಮಂಗಳೆ ಕರುಣಾಪಾಂಗದಿ ನೋಡೆನ್ನ
ಹಿಂಗಿಸು ಭವ ಭಯ ಗಂಗೆಯಧರನಂಘ್ರಿ 
ಭೃಂಗಳಭೋದಯ ಕಂಗಳೆ ಕರುಣಿಸು || 1 ||

ಇಂದ್ರಾದಿ ಸುರಗುರುವೆ | ದೇವತರುವೇ
ನೊಂದು ನಾನಾ ಪರಿ ನಿನ್ನ ಬೇಡುವೆ
ಕುಂದೆಣಿಸದಲೆ ಶಿವ ಶಂಕರಿ ಕಾವೆ
ಸಂದೇಹ ಕಳಿ ವಿಭುವೆ | ವಿರಾಜತನುವೆ ॥
ವಂದಿಪೆ ತತ್ಪದ ದ್ವಂದ್ವಕೆ ಪರಿಪರಿ 
ನೊಂದವನಾ ಮ್ಯಾಲ್ಹೊಂದಿಸು ಕರುಣವ
ಮಂದಸ್ಮಿತೆ ಮುಕುಂದನ 
ವಂದಿಸು ಅನಿಮಿತ್ತಬಂಧುವೆ ರಕ್ಷಿಸು || 2 ||

ಕಸ್ತೂರಿ ಕುಂಕುಮ ಫಾಲೆ | ರನ್ನಾದ ಓಲೆ
ವಸ್ತ್ರಗಳಿಟ್ಟ ಹಿಮವಂತನ ಬಾಲೆ
ಶಿಸ್ತಿನ ಶುಭ್ರಾಂಬರಧಾರೆ ವನಮಾಲೆ
ಮಸ್ತಕದ ಕಿರೀಟ ವದನತಾಂಬೂಲೆ
ಮಸ್ತಕದಲಿ ಸಿರಿಹಸ್ತಗಳಿಟ್ಟೆನ್ನ
ದುಸ್ತರಾದಿಗಳಸ್ತವ ಮಾಳ್ಪುದು
ವಿಸ್ತಾರಮಹಿಮ ಶ್ರೀಜಯೇಶವಿಠಲ
ವಸ್ತುವ ನೀಡಮ್ಮ ಹಸ್ತಿಯಗಮನೆ || 3 ||
********

No comments:

Post a Comment