Friday, 27 December 2019

ಪೊಗಳಲೆನ್ನೊಶವಲ್ಲ ಶಿತಿಕಂಠನಿಗೆ ankita balakrishna


ಮಾತೋಶ್ರೀ ರಂಗಮ್ಮನವರ ರಚನೆ  ( ಬಾಲಕೃಷ್ಣ  ಅಂಕಿತ)
ರಾಗ ಮಧ್ಯಮಾವತಿ       ಖಂಡಛಾಪುತಾಳ 

ಪೊಗಳಲೆನ್ನೊಶವಲ್ಲ ಶಿತಿಕಂಠನಿಗೆ । ಸರಿಸುಗುಣ
ಪೃಥುವಿಯೊಳಿಲ್ಲ ಪೇಳುವುದಕಾಶ್ಚರ್ಯ
ಅಗಣಿತ ಮಹಿಮೆಲ್ಲ । ಜಗದೊಳಗಿಲ್ಲ ॥ ಪ ॥
ಸುಗುಣರನು ರಕ್ಷಿಸುವೆನೆನುತಲಿ ।
ನಗಪತಿಸುತೆ ಸಹಿತಬಂದೀ ।
ಮಿಗಿಲು ಕಪಿಲ ಕೌಂಡಿನ್ಯಕ್ಷೇತ್ರದಿ ।
ಬಗೆಬಗೆಯ ವರ ಕೊಡುತ ಮೆರೆವನ ॥ ಅ ಪ ॥

ಅಂಧಕಾಸುರ ಮಥನಾ । ವಿಶ್ವೇಶ ಶಂಕರ ।
ನಂದಿವಾಹನ ಸುಗುಣಾ । ಪಾರ್ವತೀರಮಣ ದಶ - ।
ಕಂಧರನ ಮದಹರಣಾ । ಭಕ್ತರಾಭರಣ ॥
ಚಂದ್ರಶೇಖರ ತ್ರಿಜಟ ಸನಕ ಸ - ।
ನಂದನಾದಿ ಮುನಿವಿನುತ ಪದ ।
ಇಂದಿರೇಶನ ಪದಕಮಲ ಮಕ - ।
ರಂಧ ಕಳಿಯಂದದಲಿ ರಮಿಪನ ॥ 1 ॥

ಮಾರಹರ ತ್ರಿಪುರಾರಿ । ನಿಟಿಲಾಕ್ಷ ಭುವನಾ - ।
ಧಾರಿ ನಿಗಮವಿಹಾರಿ । ನೆರೆನಂಬಿದವರಿಗೆ ।
ತೋರುವನು ಶುಭದಾರಿ । ಪರಮ ಉದಾರಿ ॥
ಚಾರುಕ್ಷೇತ್ರವಿದೆನುತ ನಿಜ ಪರಿ - ।
ವಾರದಿಂದಲಿ ಬಂದು ತನ್ನಯ ।
ಸಾರಸಾಂಬಕಿ ಕೂಡಿ ಮೋದದಿ ।
ತೇರನೇರಿ ಮೆರೆದು ಬರುವನ ॥ 2 ॥

ಜಾಹ್ನವಿಯ ಧರಿಸ್ಯಾನು । ಶೋಭಿಸುವ ರುಂಡ - ।
ಮಾಲೆ ಮಣಿಭೂಷಿತನು । ದಾನವರ ವಂಚಿಸಿ ।
ಹಾನಿಗೈಸುವ ತಾನು । ಪೇಳಲಿನ್ನೇನು ॥
ನಾನಾಪರಿ ಕುಷ್ಠಾದಿ ರೋಗವ ।
ಹಾನಿಗೈಸುವ ಸ್ಮರಣೆ ಮಾತ್ರದಿ ।
ದೀನರಕ್ಷಕ ಬಾಲಕೃಷ್ಣನ ।
ಸಾನುರಾಗದಿ ಭಜಿಸಿ ಮೆರೆವನ ॥ 3 ॥
********

No comments:

Post a Comment