ಶ್ರೀವಿಜಯದಾಸಾರ್ಯ ವಿರಚಿತ
ಸಾಧನ ಸುಳಾದಿ
(ಇಂದ್ರಿಯ ನಿಯಾಮಕ ತಾತ್ವಿಕರ ಪ್ರಾರ್ಥನೆ)
ರಾಗ ತೋಡಿ
ಧ್ರುವತಾಳ
ಇಂದ್ರಿಯಂಗಳಿರ್ಯಾ ನಿಮಗೆ ವಂದಿಸಿ ನಮೋ ಎಂಬೆ
ಎಂದೆಂದಿಗೆ ಎನ್ನ ಪೊಂದಿಕೊಂಡು
ಸಂದೇಹಗೊಳಿಸದೆ ಸಂದಿಗೊಂದಿಗೆ ಎಳೆದು
ಮುಂದುಗೆಡಿಸಿ ಭೀತಿ ವಂದು ತೋರದಿರೀ
ಚಂದದಿಂದಲ್ಲಿ ನಿಮ್ಮಾನಂದ ಸ್ಥಾನದಲ್ಲಿ
ಬಂಧುಗಳಾಗಿ ಅಲ್ಲಿಂದ ತೊಲಗದಿರೀ
ಒಂದೇ ರೀತಿಯಲ್ಲಿ ಮುಕುಂದನ ಪಾದಾರ -
ವಿಂದದಲ್ಲಿ ಭಕುತಿ ಕುಂದದಲೆ ನಡೆಸೋದು
ಹಿಂದಾಗದಲೆ ಬೇಕೆಂದು ದೃಢವಾಗಿ
ತಂದೆ ಹೃಷೀಕೇಶ ವಿಜಯವಿಟ್ಠಲ ಹರಿಯ
ಸಂದುರುಶನಕೆಲ್ಲ ಒಂದಾಗಿ ಬಲವಾಗೀ ॥ 1 ॥
ಮಟ್ಟತಾಳ
ಯಾತ್ರಿಗೆ ನಡಿ ನಡಿ ಪಾತ್ರರ ಒಡಗೂಡಿ
ಸ್ತೋತ್ರವ ಪಠಿಸುತ್ತ ಗಾತ್ರದೊಳಗೆ ಇದ್ದ
ನೇತ್ರಾದಿಗಳೆ ಕಾಲತ್ರಯವನೆ ತಿಳಿದು
ಧಾತ್ರಿಯೊಳಗೆ ನೀವನ್ಯತ್ತರ ವಿಷಯಕ್ಕೆ
ಮಿತ್ರರಾಗದೆ ದಿವಸ ರಾತ್ರಿಯಲ್ಲಿ ಬಿಡದೆ
ಧಾತ್ರಿನಾಮಕ ವಿಜಯವಿಟ್ಠಲನ ಪದವಣು
ಮಾತ್ರ ಮರಿಯದಿರೀ ಸೂತ್ರ ತಿಳಿದು ನೋಡಿ ॥ 2 ॥
ತ್ರಿವಿಡಿತಾಳ
ಏಕಾದಶಗಳು ಕೂಡಿ ಸಂತತದಲಿ ವಿ -
ವೇಕರಾಗಿ ಶುದ್ದ ಪ್ರವರ್ತಕ
ಜೋಕೆಯಿಂದಲಿ ಚರಿಸಿ ದುರುಳ ಚೇಷ್ಟಿಗಳು ನಿ -
ರಾಕರಿಸಿ ಹತ್ತಿ ಬಂದು ಸೇರದಂತೆ
ಮಾಕಾಂತ ಮಹಾಸನ ವಿಜಯವಿಟ್ಠಲನ ಅ -
ನೇಕ ಬಗೆಯಿಂದ ನಾಮಕಥೆಯ ಕೇಳಿ ॥ 3 ॥
ಅಟ್ಟತಾಳ
ಗ್ರಾಮೇಕ ರಾತ್ರಿಯ ವ್ರತವನ್ನು ಧರಿಸುತ್ತ
ನೇಮ ನಿತ್ಯ ನೈಮಿತ್ಯ ಕರ್ಮಂಗಳು ನೀ -
ವು ಮರಿಯದಲೆ ಉಚಿತಾರ್ಥದಲ್ಲೀಗ
ಕಾಮರಾಗಗಳೆಲ್ಲ ದೂರಾಗಿ ಓಡಿಸಿ
ಧೂಮರಜ್ಞಾನವ ಗಮಕದಲ್ಲಿ ಕಳೆದು
ಕಾಮಜನಕ ಕೃತು ವಿಜಯವಿಟ್ಠಲನ್ನ
ಕಾಮಿಸಿ ಹಗಲಿರಳರ್ಚಿಸಿ ನೋಡಿ ॥ 4 ॥
ಆದಿತಾಳ
ಎತ್ತ ನೀವು ಪೋಗದಲೆ ಉತ್ತಮ ನಡವಳಿಯಲ್ಲಿ
ಹೊತ್ತು ಹೊತ್ತಿಗೆ ಹರಿಗೆ ಕೈ ಎತ್ತಿ ಕರಗಳ ಮುಗಿದು
ಅತ್ತಲಿತ್ತ ಚರಿಸದೆ ಹತ್ತೆ ಸೇರಿಕೊಂಡು ಗತಿ
ಸತ್ತಮ ವಿಜಯವಿಟ್ಠಲನ್ನ ಎತ್ತಬಿಡದೆ ಭಕುತಿಯಲ್ಲಿ
ನಿತ್ಯ ನಿತ್ಯ ನೆನೆನೆನೆದು ಉತ್ತಮ ಗತಿಗೆ ಸೇರುವದು ॥ 5 ॥
ಜತೆ
ಸಕಲೇಂದ್ರಿಯಗಳಿರಾ ಎನ್ನಲ್ಲಿ ಪೊಂದಿಕೊಂಡು
ಶಕುತನಾಮ ವಿಜಯವಿಟ್ಠಲನ್ನ ಒಲಿಸೋದು ॥
****
No comments:
Post a Comment