ಸಾಹಿತ್ಯ – ಸುಬ್ರಾಯ ಚೊಕ್ಕಾಡಿ
ಮುನಿಸು ತರವೇ ಮುಗುದೆ
ಹಿತವಾಗಿ ನಗಲೂ ಬಾರದೆ ||
ಕರಿಮುಗಿಲ ಬಾನಿನಲ್ಲಿ ಮಿಂಚರಳಲು
ತಾರೆಗಳು ಮೈಯ ಬಳಸಿ ಜುಮ್ಮೆನ್ನಲು |
ನವ ಭಾವ ತುಂಬಿ ತುಂಬಿ ಮನ ಹಾಡಲು
ತೆರದಂತಿದೆ ಭಾಗ್ಯದ ಬಾಗಿಲು ||ಮುನಿಸು||
ಎಷ್ಟೊಂದು ಕಾಲದಿಂದ ಹಂಬಲಿಸಿದೆ
ನೀ ಬಂದು ಸೇರಿ ನನ್ನ ಮುದಗೊಳಿಸಿದೆ |
ಜೀವನದ ನೂರು ಕನಸು ನನಸಾಗಿದೆ
ಮುನಿಸೇತಕೆ ಈ ಬಗೆ ಮೂಡಿದೆ ||ಮುನಿಸು||
ಹೊಸ ಬಾಳ ಬಾಗಿಲಲ್ಲಿ ನಾವೀದಿನ
ನಿಂತಿರುವ ವೇಳೆಯಲ್ಲಿ ಏಕೀ ಮನ |
ವಾಗರ್ಥದಂತೆ ನಮ್ಮ ಈ ಮೈಮನ
ಜತೆ ಸೇರಲು ಜೀವನ ಪಾವನ ||ಮುನಿಸು||
***
No comments:
Post a Comment