ದಾಸ ಸಾಹಿತ್ಯದಲ್ಲಿ ಅಂಕಿತನಾಮಗಳು-ವ್ಯಾಖ್ಯಾನ : ಶ್ರೀಮತಿ. ಪದ್ಮ ಶಿರೀಷ
ದಾಸ ಸಾಹಿತ್ಯದ ಹಿರಿಯ ದಾಸರಿಂದ ಮೊದಲಾಗಿ ಈಗಿನ ದಾಸರ ವರೆಗೂ ನಾವು ಅವರ ಪದಗಳ ಕೊನೆಯಲ್ಲಿ ಬರುವ ಹೆಸರನ್ನು ಯಾರದು ಮುದ್ರಿಕೆ, ಯಾರ ಅಂಕಿತ ಅಂತ ತಿಳಿದು ಆ ದಾಸರ ಸ್ಮರಣೆಯ ಮುಖಾಂತರ ಆ ಹಾಡಿನಲ್ಲಿನ ಪರಮಾತ್ಮನ ಸ್ಮರಣೆ ಮಾಡುತ್ತೇವೆ.. ಅಲ್ಲವೇ? ಮೊದಲಿಗೆ ಅಂಕಿತ ಎಂದರೇನು? ಅದರ ಉದ್ದೇಶವೇನು ಎಂದು ನೋಡೋಣ.... ನನಗೆ ತಿಳಿದ ಅಲ್ಪ ಸ್ವಲ್ಪ ವಿಷಯ ತಿಳಿಸಲು ಸಣ್ಣ ಪ್ರಯತ್ನ.....
ನಾವಾಗಿ ಇಟ್ಟುಕೊಂಡ ಹೆಸರು ಅಂದರೇ ನಮ್ಮ ತಂದೆತಾಯಿಯರು , ಈ ಜನ್ಮದ ಈ ಕಾಯಕ್ಕೆ ಇಟ್ಟ ಹೆಸರು ಲೌಕಿಕವಾದರೇ... ಗುರುಗಳ ಅನುಗ್ರಹದಿಂದ ಬಂದದ್ದು ಅಂಕಿತನಾಮ ಎನಿಸಿಕೊಳ್ತದೆ.. ಅಂಕಿತ ಎನ್ನುವ ಪದಕ್ಕೆ ಸಮರ್ಪಣೆ ಹಾಗೂ ವಿಶೇಷ ಅಂತ ಅರ್ಥಗಳು ಇವೆ.
ಗುರುಮುಖೇನಾ ಭಗವತ್ ತತ್ವದ ಉಪದೇಶವನ್ನು ಪಡೆದು ಅವರವರ ಬಿಂಬರೂಪೀ ಪರಮಾತ್ಮನ ಹೆಸರನ್ನು ಸ್ಮರಣಾ ರೂಪಕವಾಗಿ ಅಂಕಿತ ಎಂದು ಪಡೆಯೋದಾಗಿರುತ್ತದೆ..
ಅಂಕಿತವನ್ನು ಪಡೆದ ದಾಸರು ಲೌಕಿಕ ಇಚ್ಛಾ ಕಾಂಕ್ಷಗಳನ್ನೆಲ್ಲಾ ತೊರೆದು ಇನ್ಮೇಲೆ ಪರಮಾತ್ಮನ ಕುರಿತಾಗಿಯೇ ನನ್ನ ಜೀವನ ಅಂತ ದೀಕ್ಷೆ ಯ ಸ್ವೀಕಾರ ಮಾಡುವುದನ್ನೇ ಅಂಕಿತೋಪದೇಶ, ಅಂತಲೂ... ಅಂಕಿತಸ್ವೀಕಾರ ಅಂತಲೂ ಕರೀತಾರೆ..... ಇನ್ನೂ...
ಅಂಕಿತ ಅನ್ನೋದು ಮೂಲ ಸಂಸ್ಕೃತ ಶಬ್ದ , ಅಂಕಿತ ಅಂದರೆ ಗುರುತು ಮಾಡಲ್ಪಟ್ಟ, ಗುರ್ತಿಸಲ್ಪಟ್ಟ, ಅಂತ ಅರ್ಥ ..
ಯಾವುದೇ ಒಂದು ಕೃತಿ ರಚನೆ ಮಾಡಿದಾಗ ಅದಕ್ಕೆ ಸ್ವತಃ ಪರಮಾತ್ಮನೇ ಅವರ ಭಕ್ತಿಗೆ ಪ್ರಸನ್ನನಾಗಿ ನೀನು ನನ್ನ ಪ್ರಸಾದಕ್ಕೆ ಅರ್ಹನಾದವನು ಎನ್ನುವದನ್ನು ಸೂಚಿಸಲಂತೆಯೇ, ಅವರ ಕೃತಿಗಳಿಗೆ ತನ್ನ ನಾಮವನ್ನು ಅನುಗ್ರಹಪೂರ್ವಕವಾಗಿ ದಯಪಾಲಿಸ್ತಾನೆ . ಇದರಲ್ಲಿ ಈಶ-ದಾಸ ಭಾವನೆ ಜಾಗೃತವಾಗಿರುತ್ತದೆ. ನಾನು ಪರಮಾತ್ಮನ ದಾಸಾನುದಾಸ ಎನ್ನುವದಕ್ಕೆ ಸ್ವತಃ ಪರಮಾತ್ಮನೇ ಪ್ರಧಾನ ಮಾಡಿದ ಮುದ್ರಿಕೆಗೆ ಅಂಕಿತ ಅಂತ ಹೆಸರು.
ಕೆಲವೊಂದು ಸರ್ತಿ ಪರಮಾತ್ಮನಿಂದ ಅಂಕಿತ ದೊರಕಿಸಿಕೊಂಡ ಮಹನುಭಾವರು ತಮ್ಮ ತಮ್ಮ ಶಿಷ್ಯರ ಯೋಗ್ಯತೆಯನ್ನು ಪರೀಕ್ಷಿಸಿ, ಪರಮಾತ್ಮನಲ್ಲಿ ಪ್ರಾರ್ಥನೆ ಮಾಡಿದಾಗ ಆ ಪರಮಾತ್ಮನ ಸೂಚನೆಯ ಪ್ರಕಾರ ತಮ್ಮ ತಮ್ಮ ಶಿಷ್ಯರಿಗೆ ಅಂಕಿತ ಪ್ರದಾನ ಮಾಡಿದ ಅನೇಕ ನಿದರ್ಶನಗಳಿದ್ದವೆ ಅಲ್ವಾ .. ಅಂತಹಾ ಅಪರೋಕ್ಷ ಜ್ಞಾನಿಗಳಿಂದ ಸ್ವೀಕಾರ ಮಾಡಿದ ಅಂಕಿತಧಾರಿಗಳ ಕೃತಿಗಳು ಪರಮಾದರಕ್ಕೆ ಸದಾ ಸದಾ ಅತ್ಯಂತ ಅರ್ಹವಾದವುಗಳು..
ಅಂತಹವರ ಕೃತಿಗಳು ಹಾಡುವುದಕ್ಕೆ ನಮ್ಮ ಜನ್ಮ ಸಾಲದು ಅಂದಮೇಲೆ ಅವರ ಕೃತಿಗಳ ಒಳಾರ್ಥ ತಿಳಿಯಲು ಅದೆಷ್ಟು ಜನ್ಮಗಳು ಎತ್ತಿ ಬರಬೇಕೋ ಏನೋ?
ಇನ್ನೂ ಹೇಳಬೇಕೆಂದರೆ ಹಿಂದಿನ ಜೀವನ ಒಂದು ಕರ್ತವ್ಯದಂತೆ ಮಾಡಿಕೊಂಡು, ಅಂಕಿತೋಪದೇಶದನಂತರದ ದಾಸ ದೀಕ್ಷೆಯ ಜೀವನ ಮತ್ತಷ್ಟು ಹೆಚ್ಚಿನ ಭಕವತ್ಪ್ರೀತಿಕರವಾದ ಕಾರ್ಯಗಳನ್ನು ಮಾಡಲು ಪೂರಕವಾಗ್ತದೆ...
ಉದಾಹರಣೆಗೆ ಯತಿಗಳು ಪೂರ್ವಾಶ್ರಮವನ್ನು ಪೂರ್ತಿಯಾಗಿ ಬಿಟ್ಟಹಾಗೇ... ದಾಸರಾದವರು ಅಷ್ಟು ಪೂರ್ತಿಯಾಗಿ ಬಿಡುವುದಿಲ್ಲ... ಆದರೇ, ಅವರು ಗೃಹಸ್ಥಾಶ್ರಮದಲ್ಲಿದ್ದರೂ... ತಾವರೆ ಎಲೆಯ ಮೇಲಿನ ನೀರಿನ ಬಿಂದುವಿನಂತೆ ಲೌಕಿಕದಲ್ಲಿದ್ದಂತೆ ಇದ್ದು, ಪರಮಾತ್ಮನ ಸ್ಮರಣೆಯೇ, ಆತನ ಗುಣಗಾನವೇ ಜೀವನದ ಲಕ್ಷ್ಯವಾಗಿ ಮಾಡಿಕೊಳ್ಳುವುದು ಅಂಕಿತೋಪದೇಶದ ಉದ್ದೇಶ.... ಹೇಗೆ ಮದುವೆಯಾದ ಹೆಣ್ಣು ಮಗಳು ಅತ್ತೆ ಮನೆಯ ಹೊಸ ವಂಶದ ಹೆಸರಿನಿಂದ ಕರಿಯಲ್ಪಡ್ತಾಳೋ , ಹೇಗೆ ದತ್ತು ಹೋದ ಮಗು ಹೊಸ ಗೋತ್ರನಾಮಗಳಿಂದ ಜೀವನವನ್ನು ಮುಂದೆವರಿಸುತ್ತಾನೋ ಹಾಗೇ ಗುರುಮುಖೇನಾ ಅಂಕಿತವನ್ನು ಪಡೆದ ದಾಸರು ದೀಕ್ಷಾ ಬದ್ಧರಾಗಿ ಹಿಂದಿನ ಹೆಸರನ್ನ ಮರೆತು... ಪರಮಾತ್ಮನ ಬಿಂಬರೂಪದ ಚಿಂತನೆಯನ್ನು ಮಾಡ್ತಾ.. ಅಂಕಿತನಾಮದಿಂದಲೇ ಪ್ರಸಿದ್ಧರಾಗ್ತಾರೆ....
ನೋಡಿ ಈಗ ನಾವು ತುಂಬಾ ಪದಗಳು ತಿಳಿದಿರ್ತೇವೆ.. ಆ ಪದ ಯಾರದು ಅಂತ ಅಂಕಿತನಾಮದಿಂದ ಗೊತ್ತಾಗ್ತದೆ.. ಆದರೇ ಅವರ ವ್ಯವಹಾರ ನಾಮದ ಅರಿವು ಸುಮಾರು ಜನಕ್ಕೆ ಇರುವುದಿಲ್ಲ ಹೀಗೇ...
ಈ ರೀತಿ ಶ್ರೀಹರಿವಾಯುಗುರುಗಳ ಪರಮಾನುಗ್ರಹದಿಂದ ಪಡೆದ ಅಂಕಿತನಾಮವುಳ್ಳ ಮಹಾನುಭಾವರ ಕೃತಿಗಳು ಮಾತ್ರ ಕೀರ್ತನೆಗೆ ಯೋಗ್ಯವಾದವುಗಳು ಎನ್ನುವುದರಲ್ಲಿ ಈಷಣ್ಮಾತ್ರವೂ ಸಂದೇಹವಿಲ್ಲ, ಪರಮಸತ್ಯವೂ ಹೌದು, ಹೊರತಾಗಿ, ಲೌಕಿಕದ ಪ್ರತಿಷ್ಠೆಗೋಸ್ಕರ, ಏನೋ ಒತ್ತಾಯಪೂರ್ವಕವಾಗಿ ಅಂಕಿತ ಪಡೆದು ತಮಗೆ ತೋಚಿದಂತೆ, ಅನುಗ್ರಹವಾಗದೇ ಇದ್ದರೂ (ಅಂದರೆ ರಚನೆ ಆಗುವ ಪ್ರತಿಯೊಂದು ಅಕ್ಷರ ಪರಮಾತ್ಮನ ಅನುಗ್ರಹದಿಂದ automatically ಬರೆದುಕೊಂಡು ಹೋಗುವಂತಾಗಬೇಕು ಹೊರತು) ಕೂತು, ಪದಗಳು, ಛಂದಸ್ಸು, ಜೋಡಿಸಿ, ಕೃತಿಗಳನ್ನು ರಚನೆಮಾಡಿದವರ ಕೃತಿಗಳು ಕೀರ್ತನೆಗೆ ಖಂಡಿತಾ ಯೋಗ್ಯವಲ್ಲ... ಪರಮಾತ್ಮನಿಗೆ ಪ್ರೀತಿಕರವೂ ಅಲ್ಲ..
ಸಂಶಯ ಬರಬಹುದು ಆ ರೀತಿ ಕೂತು ಬರಿಯೋದೂ ಪರಮಾತ್ಮನ ಪ್ರೇರಣದಿಂದಲೇ ಅಲ್ವಾ ಅಂತ ?
ಅಂದರೆ ತರಕಾರಿ ದೇವರ ಸೃಷ್ಟಿ, ಮಾಂಸಾಹಾರವೂ ದೇವರ ಸೃಷ್ಟಿ ಅಂತ ಮಾಂಸ ತಿನ್ನೋದು ಎಷ್ಟು ಮಹಾಪರಾಧವೋ ? ಹಾಗೆಯೇ ಇದೂನೂ.. ಹೀಗಾಗಿ
ಅಂಕಿತ ನಾಮಕನಾದ ಪರಮಾತ್ಮನ ದಾಸರ ದಾಸಾನುದಾಸರ ಅಂಕದಲ್ಲಿರುವವರು ನಾವು, ಶ್ರೀಹರಿವಾಯುಗುರುಗಳ ಪರಮ ಪ್ರಸಾದವಾಗಬೇಕು ಅಂದರೇ ಪರಮಾತ್ಮನಿಂದ ಹಾಗೂ ಅಪರೋಕ್ಷ ಜ್ಞಾನಿಗಳಿಂದ, ಮಹಾನುಭಾವರಿಂದ ಅಂಕಿತ ಪಡೆದಿದ್ದರೆ ಮಾತ್ರ ಕೃತಿಗಳ ರಚನೆಗೆ ಅಧಿಕಾರವೂ... ಅನುಗ್ರಹಪೂರ್ವಕವಾಗಿ ಅಂಕಿತ ಸಿಗದಿರುವ ತಮ್ಮಷ್ಟಕ್ಕೆ ತಾವೇ ಅಂಕಿತವನ್ನು(ಭಗವತ್ ಪ್ರೇರಣೆಯಾಗದೆ) ಇಟ್ಟುಕೊಂಡು ರಚನೆಮಾಡಿದ ಕೃತಿಗಳು, ಅಥವಾ ಅಪರೋಕ್ಷಜ್ಞಾನಿಗಳ ಕೃತಿಗಳಲ್ಲಿನ ಸಾಲುಗಳನ್ನು ತೆಗೆದುಕೊಂಡು ತಮ್ಮ ಸಾಲುಗಳನ್ನು ಸೇರಿಸಿ ಅದಕ್ಕೆ ತಮ್ಮ ಶಾಸ್ತ್ರ ಸಮ್ಮತವಲ್ಲದ ಅಂಕಿತ ಹಾಕೋದು, ಅಥವಾ ತಮ್ಮ ಕೃತಿಗಳಿಗೆ ಅಪರೋಕ್ಷಜ್ಞಾನಿಗಳ ಅಂಕಿತ ಹಾಕೋದು ಇವೆಲ್ಲವೂ, ಬ್ರಹ್ಮಹತ್ಯೆ, ಸುರಾಪಾನ, ಮಾತೃಗಮನ, ವೃಷಲೀಗಮನ, ಮುಂತಾದ ಮಹಪಾಪಗಳನ್ನು ತಂದುಕೊಡುವ ಕೃತಿಗಳು.ಆದ್ದರಿಂದ, ನಮ್ಮ ದಾಸ ಶ್ರೇಷ್ಠರಾದ ಅಪರೋಕ್ಷಜ್ಞಾನಿಗಳು ಶ್ರೀಹರಿವಾಯುಗುರುಗಳ ಪರಮಾನುಗ್ರಹದಿಂದ ಅಂಕಿತ ಪಡೆದು ರಚಿಸಿದ ಕೃತಿಗಳನ್ನೇ ಹಾಡಿ ಅವುಗಳ ಅರ್ಥಚಿಂತನೆಯಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುವದರಿಂದ ಸಮಸ್ತ ದಾಸಾರ್ಯರ ಹಾಗೂ ಶ್ರೀಹರಿವಾಯುಗುರುಗಳ ಪರಮಪ್ರಸಾದ ಲಭಿಸಲು ಸಾಧ್ಯ ಅನ್ನೋದು ಸತ್ಯಮ್ ಸತ್ಯಮ್ ಪುನಃ ಸತ್ಯಮ್...
ಇತ್ತೀಚಿನ ದಿನಗಳಲ್ಲಿ ಸಂಶೋಧನೆಯ ಎಂಬುವ ಮಾತಿನಲ್ಲಿ ಅಪರೋಕ್ಷಜ್ಞಾನಿಗಳ ಹೆಸರಿನಿಂದ ಅಪ್ರಕಟಿತ ಕೃತಿಗಳು ಎಂದು ಜನರ ಮಧ್ಯ ತರ್ತಿದ್ದಾರೆ. ಅದು ಸಾಮಾನ್ಯ ಜನರಿಗೆ ಗೊತ್ತಾಗಲ್ಲ. ಪುಸ್ತಕ ಬಂತಾ ಓದೋಣ, ಹಾಡೋಣ ಅಂತಲೇ ಮಾಡಿಬಿಡ್ತಾರೆ . ಆದರೆ ಆ ಸಾಹಿತ್ಯ ಓದುವ ಮುನ್ನ ಒಮ್ಮೆ ಯೋಚನೆ ಮಾಡಿ - ಅದು ನಿಜವಾಯಿಗೂ ಆ ಆ ದಾಸರ ಸಾಹಿತ್ಯಕ್ಕೆ ಹೋಲಿದೆಯಾ? ಅವರ ಭಾಷೆ. ಅವರು ಬಳಸಿದ ಪದ ಪ್ರಯೋಗವಾ? ಆ ಕಾಲದಲ್ಲಿನ ವಿಶೇಷವಾ ಅವರು ಬರೆದದ್ದು ಮತ್ಯಾರಾದರೂ ಅಪರೋಕ್ಷಜ್ಞಾನಿಗಳ ಕೃತಿಗಳಲ್ಲಿ ಕಂಡಿದ್ದಿವಾ? ಇಷ್ಟು ಯೋಚನೆ ಮಾಡಿ. ನಮಗೇ ಅರ್ಥವಾಗುತ್ತದೆ ಅದು ತಪ್ಪು ಸಂಶೋಧನೆ ಅಂತ..
ಮತ್ತೊಂದು ದುರಂತ ಅಂದರೆ...
ಅಪರೋಕ್ಷಜ್ಞಾನಿಗಳಾದ ಶ್ರೀ ಶ್ರೀಪಾದರಾಜರ, ಶ್ರೀಮತ್ಪುರಂದರದಾಸಾರ್ಯರ, ಶ್ರೀ ಪ್ರಸನ್ನವೇಂಕಟ ದಾಸರ, ಶ್ರೀ ಮಾನವಿ ಪ್ರಭುಗಳ ಮತ್ತಿತರ ಮಹಾನುಭಾವರ ಕೃತಿಗಳನ್ನು ಅವರವರ ಮಾತುಗಳಲ್ಲಿ ಸ್ವಂತವಾಗಿ ಭಾಷಾಂತರಣೆ ಮಾಡಿ ಅವರವರಿಗೆ ಅವರ ಭಾಷೆಯಲ್ಲಿ ಅನುಕೂಲವಾಗುವಂತೆ ಬರೆದು ಅದಕ್ಕ ಅವರ ಹೆಸರಿನ ಮುದ್ರಿಕೆ ಹಾಕೋದು. ಎಷ್ಟು ಅಪರಾಧವಿದು? ಕನ್ನಡ ಕಲಿರಪ್ಪಾ , ಇಂಗ್ಲೀಷಿಗಿಂತ ಕಷ್ಟವೇನಲ್ಲ ಕನ್ನಡ. ಮಾಧ್ವರಿದ್ದಿವಿ. ಕನ್ನಡ ಕಲಿಯೋಣ. ಹೀಗೆ ಭಾಷಾಂತರ ಮಾಡಿದ್ದನ್ನು ಹಾಡೋದು ಬೇಡ. ಮತ್ತೆ ಅಪರೋಕ್ಷಜ್ಞಾನಿಗಳಾದ ದಾಸಾರ್ಯರ ಕೃತಿಗಳಲ್ಲಿ ತತ್ವಾಭಿಮಾನಿ ದೇವತೆಗಳ, ಭಾರತೀರಮಣ ಮುಖ್ಯಪ್ರಾಣಾಂತರ್ಗತ ಲಕ್ಷ್ಮೀನಾರಾಯಣರ ಸನ್ನಿಧಾನ ಅದೆಷ್ಟು ಇರ್ತದ. ಅದನ್ನ ಬದಲಾಯಿಸಿ ನಮ್ಮ ಭಾಷೆಯಲ್ಲಿ ಬರೆಯೋದು ಎಷ್ಟರ ಮಟ್ಟಿಗೆ ಸರಿ.
ಇವೆಲ್ಲದಕ್ಕೂ ನಾವು ಮರುಳಾಗೋದು ಬೇಡ. ಅಪರೋಕ್ಷಜ್ಞಾನಿಗಳ , ಮತ್ತೆ ಮಹಾನುಭಾವರಾದ ದಾಸರ ಪದಗಳು ಮಾತ್ರ ಗ್ರಾಹ್ಯ ಅಂತಲೇ ತಿಳಿದು ಪಾಡೋಣ....
ಮತ್ತೆ
ವಿದ್ ಜ್ಞಾನೇ ಅಂತ ಸಂಸ್ಕೃತದಲ್ಲಿ ಧಾತು ಇದ್ದದ. ನಮಗೆ ಮೋಕ್ಷಕ್ಕೆ ಪ್ರತಿಬಂಧಕವಾದ ಅಜ್ಞಾನವನ್ನು ತೊಲಗಿಸಿ ಮೋಕ್ಷಕ್ಕೆ ಅನುಕೂಲವಾಗುವ ಜ್ಞಾನವನ್ನು ಕರುಣಿಸಿ , ಲ ಲಾಲಯತಿ ಇತಿ ಲ - ಪಾಲಿಸುವವನಾದ್ದರಿಂದ ವಿಠ್ಠಲ ಎನ್ನುವ ನಾದ ಬ್ರಹ್ಮನ ವಿಶೇಷವಾದ ಹೆಸರಿನಿಂದ ದಾಸರಿಗೆ ಅಂಕಿತಪ್ರದಾನವಾಗುವುದು. ಆದರೆ ಸುಮಾರು ಜನರಿಗೆ ವಿಠಲ ಇರುವುದೂ ಇಲ್ಲ. ಅವರವರ ಬಿಂಬನ ಚಿಂತನೆ ಕಾರುಣ್ಯ
ಉದಾಹರಣೆ -
ಆದಿಕೇಶವ
ಇಂದಿರೇಶ
ಕರಿಗಿರೀಶ
ಕದರುಂಡಲೀಶ
ಕಾರ್ಪರ ನರಹರಿ
ಶ್ರೀಶ ಹೀಗೂ..
ಮತ್ತೆ ಶ್ರೀ ವಿಜಯದಾಸಾರ್ಯರಿಗಿಂತ ಮೊದಲಿಗೆ ಆಗಿ ಹೋದ ದಾಸರು ಅವರ ಶಿಷ್ಯರಿಗೆ ಅಂಕಿತೋಪದೇಶದ ಪದ ಬರೆದು ನೀಡಿದ್ದೂ ಕಮ್ಮಿ ನೇ . ಶ್ರೀ ವಿಜಯಪ್ರಭುಗಳ ನಂತರ ಬಂದ ಎಲ್ಲರೂ ಅಂಕಿತೋಪದೇಶದ ಪದವನ್ನು ಬರೆದು ಬರ್ತಿದ್ದಾರೆ ಈಗಿನವರೆಗೂ..
ಮತ್ತೆ ಇನ್ನೂ ಅಂದರೆ...
ಸಂನ್ಯಾಸಿಗಳಾದರೆ ಸಾಕ್ಷತ್ ಪರಮಾತ್ಮನೇ ಅದೇ ಅಂಕಿತಗಳನ್ನು ಪ್ರದಾನ ಮಾಡಿರ್ತಾನೆ , ಆತನ ವಾಣಿಯಿಂದ ವಿಠ್ಠಲ ಅಂತ ಬಂದಿದ್ರೆ ಅದನ್ನೂ ಸೇರಿಸ್ತಾರೆ, ಒಟ್ಟಿನಲ್ಲಿ ಭಗವಂತನ ವಾಣಿಯಿಂದ ಏನು ಬಂದಿರ್ತದೆಯೋ ಅದನ್ನ ಇಟ್ಟಿರ್ತಾರೆ..
ಹಾಗೆಯೇ.. ವಿಠಲ ಅನ್ನೋದು ಇನ್ನೂ ಸಂಸಾರದಲ್ಲಿ ಇರುವವರಿಗೆ ಕೊಡುವ ವಿಶೇಷ ಅಂಕಿತ , ಯಾಕೆ ಅಂದ್ರೆ ಸಂಸಾರದ ಉತ್ತಾಪಗಳು ಅನೇಕ. ಅಂತಹಾ ಸಂಸಾರದ ಉತ್ತಾಪಗಳಲ್ಲಿ ಎಷ್ಟೋಸಲ ಎಷ್ಟೇ ಜ್ಞಾನಿಗಳಿದ್ರೂ ಭಗವನ್ಮಾಯೆಯಿಂದ ಅಜ್ಞಾನಾದಿಗಳಿಗೆ ಒಳಗಾಗುವ ಸಂಭವ ಇದ್ದೇ ಇರ್ತದಲ್ವಾ, ಆ ಆಜ್ಞಾನಾದಿಗಳಿಂದ ಆಧಿಭೌತಿಕ ಆಧ್ಯಾತ್ಮಿಕ ತಾಪತ್ರಯಗಳು ತಲೆದೋರುವ ಸಂಭವವೂ ಇದ್ದೇ ಇರ್ತದೆ , ಅದಕ್ಕಾಗಿ ಸಂಸಾರದಲ್ಲಿ ಅಂದರೆ ಗ್ರಹಸ್ಥಾಶ್ರಮದಲ್ಲಿ ಇರುವ ಜ್ಞಾನಿಗಳಿಗೆ ತಾವು ಸೇವೆ ಮಾಡ್ತಾಯಿರೋದು ತಮ್ಮದಲ್ಲ, ಸಂಪೂರ್ಣವಾಗಿ ಆ ಪರಮಾತ್ಮನ ownership ನಲ್ಲೇ ಮಾಡ್ತಾಯಿರೋದು ಅನ್ನೋ ಭಾವವನ್ನು ಸದಾ ಜಾಗೃತಗೊಳಿಸಲು ಆ ಆ ಭಗವನ್ನಾಮದ ಮುಂದೆ ವಿಠ್ಠಲ ಅನ್ನೋ ಅಂಕಿತ ಪ್ರದಾನ ಆಗೀರ್ತದೆ. ಸನ್ಯಾಸಿಗಳು ಸರ್ವಸಂಗ ಪರಿತ್ಯಾಗಿಗಳಾಗಿಬಿಟ್ಟಾರ್ತಾರೆ, ಆತ್ಮಶ್ರಾದ್ಧವನ್ನೇ ಮಾಡಿಕೊಂಡು ಸಂಪೂರ್ಣವಾಗಿ ತಮ್ಮನ್ನು ತಾವು ಪರಮಾತ್ಮನಿಗೆ ಅರ್ಪಿಸಿಕೊಂಡುಬಿಟ್ಟಿರ್ತಾರೆ. ಯಾವಾಗಲೂ ತಮಗೆ ಪೀಠದಿಂದ ಪ್ರಾಪ್ತವಾದ ಭಗವನ್ಮೂರ್ತಿಗಳ ಕೈಂಕರ್ಯದಲ್ಲೇ ತೊಡಿಗಿಸಿಕೊಂಡಿರೋದ್ರಿಂಧ ಅವರಿಗೆ ಭಗವನ್ನಾಮ ಮಾತ್ರ ಪ್ರಾಪ್ತ ಆಗಿರ್ತದ.. ಇಷ್ಟು ಗುರುಗಳಿಂದ ತಿಳಿದ ವ್ಯತ್ಯಾಸದ ಸಂಗತಿಗಳು ..
ಹೀಗಾಗಿ ಅದ್ಭುತ ರೀತಿಯಲ್ಲಿ ಗುರುಮುಖೇನಾ ಅಂಕಿತೋಪದೇಶವನ್ನು ಪಡೆದ, ಸ್ವಯಂ ಪ್ರೇರಿತರಾಗಿ ಪರಮಾತ್ಮನ ಅನುಗ್ರಹದಿಂದ ಪಡೆದ, ಹಿರಿಯ ದಾಸದಾಸರ ಅಂಕಿತನಾಮಗಳನ್ನು ಬದಲಾಯಿಸಿ... ಆ ಕೃತಿಗಳಿಗೆ ಮತ್ತು ಅಂತರ್ಯಾಮಿಯಾದ ಪರಮಾತ್ಮನಿಗೆ ಅವಮಾನ ಮಾಡುವವರ ವ್ಯತಿರೇಕ ಖಂಡಿತಾ ಮಾಡೋಣ. ಅದು ನಮ್ಮ ಆದ್ಯ ಕರ್ತವ್ಯ.. ಎಲ್ಲ ದಾಸರ ಸೇವೆ ಬಿಡದೆ ಸದಾ ಮಾಡುವಂತಾಗಲಿ ಎಂದು ಪ್ರಾರ್ಥನೆ ಮಾಡುತ್ತಾ ..
-Smt. Padma Sirish
ನಾದನೀರಾಜನದಿಂ ದಾಸಸುರಭಿ
***
No comments:
Post a Comment