ಶ್ರೀ ಅಭಿನವ ಪ್ರಾಣೇಶವಿಠಲದಾಸಾರ್ಯ ವಿರಚಿತ
ಶ್ರೀಸರಸ್ವತಿದೇವಿಯರ ಸುಳಾದಿ
ರಾಗ ಸಾರಂಗ
ಧ್ರುವತಾಳ
ಸಿರಿದೇವಿಯರಸನ ಹಿರಿಯ ಸೊಸೆಯೇ ವಾಣಿ
ಸಿರಿದೇವಿ ಉಳಿದನ್ಯ ನಾರಿ ಶಿರೋಮಣಿ
ಸರಸಿಜ ಸಂಭವ ಬ್ರಹ್ಮದೇವನ ರಾಣಿ
ಸ್ಮರಿಪ ಸದ್ಭಕ್ತರ ಸುರಧೇನು ಚಿಂತಾಮಣಿ
ಶರಣರ ಈಪ್ಸಿತ ಸಲಿಸುವ ಕಲ್ಯಾಣಿ
ಪರಮ ಸುಂದರ ಶ್ರೇಣಿ ಶುಕವಾಣಿ ಫಣಿವೇಣಿ
ತಿರೋಹಿತವಾಗದ ವಿಮಲ ಸುಜ್ಞಾನಿ
ಪರಗತಿ ಸಾಧಕ ಸದ್ವಿದ್ಯಾದಾಯಿನಿ
ಸರ್ವ ವೇದಾಭಿಮಾನಿ ವೀಣಾಪಾಣಿ
ಸಿರಿಯರಸಭಿನವ ಪ್ರಾಣೇಶವಿಟ್ಠಲನ
ಸ್ಮರಿಪ ಸನ್ಮತಿ ನೀಡು ಸಿರಿ ಶಾರದಾಂಬಾ ॥ 1 ॥
ಮಟ್ಟತಾಳ
ಪುಂಡರೀಕ ನಯನೆ ಪುಂಡರೀಕಗಮನೆ
ಪುಂಡರೀಕ ವಾಣಿ ಪುಂಡರೀಕ ಪಾಣಿ
ಅಂಡಜ ಶಿಖರಥಳೆ ಅಂಡಜ ಸುತವಹಳೆ
ಪಂಢರ ಅಭಿನವ ಪ್ರಾಣೇಶವಿಟ್ಠಲನ
ಬಂಡುಣಿ ಎನಿಸು ಮದ್ವದನದೊಳು ನೆಲೆಸು ॥ 2 ॥
ತ್ರಿವಿಡಿತಾಳ
ಎರಡನೆ ಯುಗದಲ್ಲಿ ಖರಕ್ರವ್ಯಾದನು
ಕರಿಕರ್ಣನು ಘೋರ ತಪವಗೈದು
ಸರಸಿಜ ಸಂಭವನೊಲಿಸಿ ಮೆಚ್ಚಿಸಿ ತಾನು
ವರವ ಯಾಚಿಪ ಸಮಯದಿಯವನ
ಅರಿಯಾಳು ಮಾಡಿದೆ ಮತಿಭ್ರಂಶ ಗೈಸಿದೆ
ನಿರುತ ನಿದ್ರೆಯ ಬೇಡ್ವ ತೆರ ಮಾಡಿದೆ
ಸುರ ಸಜ್ಜನರಿಗೆಲ್ಲಾ ಹರುಷವ ಬೀರಿದೆ
ಪರಮ ಸಮರ್ಥಳೆ ಶರಣು ಶರಣು
ಸುರವಂದ್ಯಭಿನವ ಪ್ರಾಣೇಶವಿಟ್ಠಲನ
ಚರಣ ವಾರಿಜ ಭೃಂಗೆ ದೀನ ದಯಾಪಾಂಗೆ ॥ 3 ॥
ಅಟ್ಟತಾಳ
ಧರಿಭಾರ ವಿಳುಹಲು ಶಿರಿಯರಸನು ತಾನು
ವರ ರಘುರಾಮ ನಾಮದಿ ಧರೆಯೊಳು ಪುಟ್ಟಿ
ಹರಿ ಪೀಠ ಯುವರಾಜ್ಯವೇರುವ ಸಮಯದಿ
ಸುರರ ಮೊರೆಯ ಕೇಳಿ ಹರಿ ಇಚ್ಛೆಯರಿತು ಮಂ -
ಥರಿಗೆ ದುರ್ಮತಿ ಇತ್ತು ಸುರಕಾರ್ಯ ಮಾಡಿದೆ
ಹರಿ ಶಿರಿ ರಾಮರು ವನವಾಸ ಕೈಕೊಂಡು
ಖರ ಕ್ರವ್ಯಾದರ ತರಿದು ಪುರಕೆ ಬಂದು
ಹರಿ ವಿಷ್ಠರೇರಲು ಪರಮಾನಂದವು
ಸರುವರಿಗಾಗುವ ತೆರ ಮಾಡಿದೆ ತಾಯೇ
ಕರುಣ ಮಹಾರ್ಣವೇಚಾರಂತೆ ನಮೋ ನಮೋ
ಕರುಣಾಳು ಅಭಿನವ ಪ್ರಾಣೇಶವಿಟ್ಠಲನ
ಚರಣ ದಾಸ್ಯವನಿತ್ತು ಪರಿಪಾಲಿಸಮ್ಮ ॥ 5 ॥
ಆದಿತಾಳ
ಹರಿಸರ್ವೋತ್ತಮನೆಂಬ ಸ್ಥಿರಜ್ಞಾನವಿರಲಮ್ಮ
ಮರುತ ಜೀವೋತ್ತಮನೆಂಬ ಬುದ್ಧಿಯಿರಲಮ್ಮ
ಹರ ತಾರಕ ಗುರುವೆಂಬ ಮತಿಯಿರಲಮ್ಮ
ಗುರು ಮಧ್ವಮತದಲ್ಲಿ ಧೃಢ ಭಕ್ತಿಯಿರಲಮ್ಮ
ಸಿರಿಯರಸಭಿನವ ಪ್ರಾಣೇಶವಿಟ್ಠಲನ
ಹಿರಿಯ ಸೊಸೆಯೇ ನಿನ್ನ ಕರುಣವಿರಲಮ್ಮ ॥ 5 ॥
ಜತೆ
ವೇದಗಮ್ಯಭಿನವ ಪ್ರಾಣೇಶವಿಟ್ಠಲನ
ಪಾದ ಧ್ಯಾನವನಿತ್ತು ಮೋದ ಕೊಡು ನಿತ್ಯ ॥
****
No comments:
Post a Comment