Sunday, 5 September 2021

ಹರಿಯೇ ಸರ್ವೋತ್ತಮ ಹರಿ vijaya vittala ankita suladi ಹರಿ ಸ್ವತಂತ್ರ ಸುಳಾದಿ HARIYE SARVOTTAMA HARI HARI SWATANTRA SULADI

Audio by Mrs. Nandini Sripad


 ..ಶ್ರೀವಿಜಯದಾಸಾರ್ಯ ವಿರಚಿತ 


 ಶ್ರೀಹರಿ ಸ್ವತಂತ್ರ ಪ್ರಮೇಯ ಸುಳಾದಿ 


(ಶ್ರೀಹರಿ ಸ್ವತಂತ್ರ , ಜೀವ ಪಾರತಂತ್ರ , ಶ್ರೀಹರಿಯೇ ಜಗಕೆ ಕರ್ತ, ಶ್ರೀಹರಿಯೇ ಜಗಕೆ ಭರ್ತ ಇತ್ಯಾದಿ ವಿಷಯಗಳು.) 


 ರಾಗ ಶಂಕರಾಭರಣ 


 ಧ್ರುವತಾಳ 


ಹರಿಯೇ ಸರ್ವೋತ್ತಮ ಹರಿ ಪರ ದೇವತಿ

ಹರಿ ಗುಣಪರಿಪೂರ್ಣಂತರ ಬಾಹಿರ ವ್ಯಾಪ್ತಾ

ಹರಿ ಪರ ತತ್ವ ಸಿರಿಯರಸಾ ಪರಮೇಷ್ಠಿ ಜನಕಾ

ಹರ ಸುರ ಮುಖ್ಯ ಭೂಸುರರ ಪರಿಪಾಲಾ

ಹರಿ ಇಲ್ಲವೆಂದವ ದುರುಳ ಮೂರ್ಖನು ಪೇಳೆ

ಸರಿ ಎಂದು ಸುಮ್ಮನೆ ಇರಲಾಗದು ವೀರಾ

ಪರಮ ಡಿಂಗರಿಗರು ಹಿರಿದಾಗಿ ಕೂಗಿ ಡಂ -

ಗುರವ ಹೊಯ್ದು ಅಬ್ಬರ ವಚನದಿಂದಾ

ಸರಿ ಮಿಗಿಲಿಲ್ಲೆಂದು ಹರಿ ಹರಿದಾಡುತ್ತ

ವರ ಅಟ್ಟಹಾಸದಲ್ಲಿ ಕರಗಳ ಹೊಯ್ದು ಚ -

ಪ್ಪರಿಸಿ ಎರಡು ಭುಜಾ ಭರದಾ ಸಿಡಿಲು 

ಧರೆಗೆರಗಿದಂತೆ ಬೊಬ್ಬಿರಿದು ನಾದವ ಮಾಡಿ 

ಅರೆ ಮನರಾಗದೆ ಹರಣ ಬಿಚ್ಚಿಡದಲೆ

ಹರಿ ಸರ್ವೇಶ್ವರ ವಿಜಯವಿಟ್ಠಲ ನಿತ್ಯಾ

ಶರಣರಿಗೊಜ್ರ ಪಂಜರವಾಗಿ ಪೊರೆವಾ ॥ 1 ॥ 


 ಮಟ್ಟತಾಳ 


ವರಣಾಶ್ರಮದಲ್ಲಿ ಹಿರಿದು ಭೂಸುರ ಜನ್ಮಾ -

ಬರಲದರ ವಳಗೆ ಮರುತ ಮತಕೆ ಬಂದು

ಚರಿಸುವ ಸುಕೃತವು ಸುರರೆಣಿಸಲಳವೆ

ಹರಿ ವಿಷಯಕೆ ನಿಮ್ಮ ಹರಣವಿಪ್ಪದನಕಾ

ಹರಿ ಭಕ್ತರ ಪದಕೆ ಶರಣಾಗತರಾಗಿ

ನಿರುತ ಧರ್ಮಾಧ್ಯಕ್ಷಾ ವಿಜಯವಿಟ್ಠಲನ್ನ 

ಚರಣಾಂಗುಟದ ರಜ ಸುರರ ಮುಕುಟವೆನ್ನಿ ॥ 2 ॥ 


 ತ್ರಿವಿಡಿತಾಳ 


ಹರಿ ಮೂರ್ತಿ ವಿರಹಿತ ಅನ್ಯಮೂರ್ತಿಯ ನೋಡೆ

ಹರುಷವಾಗದು ಕಾಣೊ ಕಣ್ಮನಕೆ

ಹರಿಪ್ರಸಾದಲ್ಲದೆ ಮತ್ತೊಂದು ದೈವದ

ಚರವು ಉಣಲೇ ಸಲ್ಲ ನಿಗಮ ವಚನ

ಹರಿ ಪಾದೋದಕವಲ್ಲದೆ ಇತರೋದಕದಿಂದ

ಪರಿಶುದ್ಧವಾಗದು ಮನುಜರಿಗೇ

ದುರುಳ ದೋಷಂಗಳು ಪರಿಹಾರವಿಲ್ಲೆಂದು

ಕರತಳದೊಳು ಒಂದು ಉರಿಯ ಗುಂಡನು ತಾಳಿ

ಉರಗನ ಪೆಡೆ ನಿರ್ಭಯವಾಗಿ ಧರಿಸಿರೊ

ಪುರುಷನಾಮ ಸಿರಿ  ವಿಜಯವಿಟ್ಠಲನ್ನ 

ಸ್ಮರಿಸಲ್ಲದೆ ಮಿಕ್ಕ ಸುರರು ಬಂದೊಲಿಯರು ॥ 3 ॥ 


 ಅಟ್ಟತಾಳ 


ಸೋಮಕನಾ ಕೊಂದು ಕಮಲಾಸನನ ಕಾಯಿದೆ

ಸೋಮಪಾನವೆರೆದಮರರ ಸಾಕಿದಾ

ಹೇಮಾಗಣ್ಣನ ಕೊಂದು ಭೂಮಿಯನುಳುಹಿದಾ

ನೃಮೃಗರೂಪವಾಗಿ ಆ ಮಗುವಿಗೊಲಿದಾ

ಭೂಮಿನಳದು ಸುತ್ರಾಮಗೆ ಪುರವಿತ್ತಾ

ಜಾಮದಗ್ನಿಯಾಗಿ ಭೀಮ ನೃಪರ ಗೆದ್ದಾ

ರಾಮ ಮೂರುತಿಯಾಗಿ ತಾಮಸರ ಮುರಿದಾ

ಕಾಮ ಜನಕನಾಗಿ ಭೂಮಿ ಭಾರನಿಳುಹಿದಾ

ವ್ಯೋಮಕೇಶನ ಸಂಗ್ರಾಮವ ಗೆಲಿಸಿದಾ

ಈ ಮಹಿಯೊಳು ಲಲಾಮ ರಾವುತನಾದಾ

ರೋಮ ರೋಮ ಕೋಟಿ ತಾಮರಸಜಾಂಡಾ

ಸೋಮಪ ನಾಮ ಸಿರಿ  ವಿಜಯವಿಟ್ಠಲ ಸಾರ್ವ -

ಭೌಮನು ಸಕಲ ಉದ್ದಾಮನು ಈಶನೊ ॥ 4 ॥ 


 ಆದಿತಾಳ 


ಏಕೋಮೇವ ಹರಿಯೆಂದು ಲೋಕದೊಳು ವೇದಂಗಳು

ವಾಕು ಪೇಳುತಿವೆ ನೋಡು ನಾಕಾದಿ ಮನುಜರಲ್ಲಿ

ನೂಕು ನೂಕು ದುರವರ್ತಿ ಸಾಕು ಸಾಕು ಕುಹಕ ಬುದ್ಧಿ

ಕಾಕನಾಗದಿರೊ ವಿವೇಕ ಮಾರ್ಗವನ್ನು ತೊರೆದು

ಏಕಪಾದಾ ನಾಮ ಪ್ರೀತ ವಿಜಯವಿಟ್ಠಲ ಸುಪ್ರ -

ಭಕ್ತ ಹೃದಯ ಕಮಲನೆಂದು ಪೊಗಳೂ ॥ 5 ॥ 


 ಜತೆ 


ಹರಿಯೆ ಜಗಕೆ ಕರ್ತಾ ಹರಿಯೆ ಜಗಕೆ ಭರ್ತಾ

ಹರಿ ಸರ್ವಸಾಹಾ ವಿಜಯವಿಟ್ಠಲನೆ ಶಕ್ತಾನೆನ್ನಿ ॥

****


No comments:

Post a Comment