ಶ್ರೀ ಪುರಂದರದಾಸಾರ್ಯ ವಿರಚಿತ ಅಭಿಶ್ರವಣ ಸುಳಾದಿ
ರಾಗ : ಕಲ್ಯಾಣಿ
ಧೃವತಾಳ
ವರಗಿರಿಯಿಂದ ತಿಮ್ಮೊಪ್ಪ ಬಂದ ಹಸ್ತಿ
ಗಿರಿಯಿಂದ ವರದರಾಜ ಬಂದ ಯದು
ಗಿರಿಯಿಂದ ಶ್ರೀ ನಾರಾಯಣ ಬಂದ ಕಾವೇರಿ
ಶ್ರೀರಂಗನಾಥ ಬಂದ
ಶ್ರೀಮುಷ್ಣದಿಂದ ಶ್ವೇತ ವರಹ ಬಂದ
ಪಂಡರಪುರದಿಂದ ಎನ್ನ ಮನಿಗೆ ಮನ್ನಿಸಿ
ಪುರಂದರವಿಠ್ಠಲರೇಯ ಬಂದ ॥೧॥
ಮಟ್ಟತಾಳ
ಬದರಿಕಾಶ್ರಮದಿಂದ ಬಾದರಾಯಣ ಬಂದ
ಕಿಂಪುರುಷಖಂಡದಿಂದ ಹನುಮನೊಡಿಯಾ ರಾಮ
ಚಂದ್ರ ಬಂದ ಕ್ಷೀರವಾರುಧಿಯಿಂದ ಶ್ರೀಮಂತ ಪು -
ರಂದರವಿಠ್ಠಲರೇಯ ಬಂದ ॥೨॥
ತ್ರಿವಿಡಿತಾಳ
ಶ್ರೀಮದನಂತಶಯನದಿಂದ
ಶ್ರೀಮದನಂತಶಯನ ಬಂದ
ಶ್ರೀ ಮಧ್ವಾಚಾರ್ಯರ ಮನೆ ದೈವ
ಶ್ರೀಮದ್ವಾರಾವತಿಯಿಂದ ಬಂದ
ಶ್ರೀಮದುಡುಪಿನ ಕೃಷ್ಣರೇಯ ಬಂದ
ಶ್ರೀಮಧ್ವಾಚಾರ್ಯರ ಮುದುಗ
ಶ್ರೀಪತಿ ಪುರಂದರವಿಠ್ಠಲರೇಯ ಬಂದ॥೩॥
ಅಟ್ಟತಾಳ
ಪ್ರಯಾಗ ಮಾಧವ ಕಾ-
ಶೀಯಾದಿ ಕೇಶವ ಕ್ಲೇಶನಾಶನ ಬಂದ
ಗಯಾಗದಾಧರ ದಾಸರಿಗೊಲಿದು
ಪುರಂದರವಿಠ್ಠಲರೇಯ ಬಂದ॥೪॥
ಆದಿತಾಳ
ಅತಳವಿತಳದಿಂದ ಸುತಳ ತಾಳತಳ ರ-
ಸಾತಳ ಮಹಾತಳ ಪಾತಾಳದಿಂದ
ಭೂತಳದಿಂದಾನು ವಿಜನ ಮಹರ್ಲೋಕ
ಸತ್ಯಲೋಕದಿಂದ ಪರಮಪದವೀವ ಪರಿಪೂರ್ಣ
ಪುರಂದರವಿಠ್ಠಲರೇಯ ಬಂದ॥೫॥
ಜತೆ
ಲೋಕ ಸಂರಕ್ಷಣ ಅಸುರರ ಸಂಹರಣ
ಲೋಕೇಶ ಪುರಂದರವಿಠ್ಠಲರೇಯ ಬಂದ॥೬॥
****
No comments:
Post a Comment