Friday, 1 October 2021

ಮುಕ್ತರ ಸ್ಥಿತಿಯನ್ನು gopala vittala ankita suladi ಪ್ರಮೇಯ ಸುಳಾದಿ MUKTARA STITIYANNU PRAMEYA SULADI

Audio by Mrs. Nandini Sripad

 

ಶ್ರೀಗೋಪಾಲದಾಸಾರ್ಯ ವಿರಚಿತ 


 ಪ್ರಮೇಯ ಮುಕ್ತರ ಪ್ರಕರಣ ಸುಳಾದಿ 


(ಮುಕ್ತಾವಸ್ಥಾ ವಿವರ ಪೂರ್ವಕ , ಸಂತತ ಮುಕ್ತರು ಶ್ರೀಹರಿಯಾಧೀನ , 

ಮುಕ್ತಿಯಲ್ಲಿ ಶ್ರೀಹರಿಯ ಅಷ್ಟಕರ್ತೃತ್ವ ವರ್ಣನೆ) 


 ರಾಗ ತೋಡಿ 


 ಧ್ರುವತಾಳ 


ಮುಕ್ತರ ಸ್ಥಿತಿಯನ್ನು ವರ್ನಿಸಿ ಪೇಳುವದಕ್ಕೆ

ಶಕ್ತರಾರಿನ್ನು ಎನ್ನ ಶಕ್ತ್ಯಾನುಸಾರ ಪೇಳ್ವೆ

ಉತ್ತಮ ಮಧ್ಯಮ ಅಧಮ ತರತಮ್ಯದಿಂದ ಜೀವರು

ಮುಕ್ತಿಲಿ ಇಪ್ಪುವರು ಬಿಡದೆಂದೆಂದು

ಮತ್ತೆ ತ್ರಿಗುಣಾತ್ಮಕ ಲಿಂಗ ರಹಿತರಾಗಿ

ಚಿತ್ಸ್ವರೂಪದಿಂದಲೇ ಸಂಚರಿಸುತ್ತ

ಮತ್ತೆ ಸಾಕಾರ ಸರ್ವ ಅಂಗಾಭರಣ ಭೂಷಿತ

ವಸ್ತ್ರಮಾಲಿಕೆ ಗಂಧ ಪರಿಮಳದಿ

ಎತ್ತಿ ಪಿಡಿದ ಶಂಖ ಚಕ್ರ ಆಯುಧ ಧರಿಸಿ

ನಿತ್ಯ ಆನಂದ ಆನಂದ ಅನುಭೋಗಿಸುತ್ತಾ

ಅತ್ಯಂತಾಭೇದ ಎಲ್ಲ ಸ್ವರೂಪ ಭೂತವಿನ್ನು 

ಎತ್ತಲಾದರ ನಿತ್ಯವೆಂಬುದಿಲ್ಲ

ನಿತ್ಯ ಸೇವಿಯು ತಮಗಿಂದುತ್ತಮರಾದವರಿಗೆ

ಛತ್ರ ಚಾಮರ ನಾನಾ ಮುಂತಾದದು

ಭೃತ್ಯ ಕೆಲಸಕಿನ್ನು ಕೈ ಜೋಡಿಸಿಕೊಂಡು

ಜತ್ತಾಗಿ ನಿಂತಿಪ್ಪರು ಕೆಡಕಿಲ್ಲದೆ

ಚಿತ್ತ ಶುದ್ಧರೆ ಎಲ್ಲ ಚಂಚಲೀರಿಷಗಳಿಲ್ಲ

ಮತ್ತೆ ಕವಲ ಬುದ್ಧಿಮಾಂದ್ಯವಿಲ್ಲಾ

ಪತ್ನಿ ಉಳ್ಳವರು ಕೆಲರು ಪತ್ನಿ ರಹಿತರು ಕೆಲರು

ಅತ್ಯಂತ ಸುಖಿಗಳನ್ಯಪೇಕ್ಷವಿಲ್ಲಾ

ಪತ್ನಿ ವುಳ್ಳವರು ತಮ್ಮ ಸತಿಯರಿಂದಲಿ ಕ್ರೀಡಿ

ನಿತ್ಯ ಮಾಳ್ಪರು ನೀತವಾಗಿ ಇನ್ನು

ಪತ್ನಿ ರಹಿತರಾದವರು ಅತ್ಯಂತ ಸ್ವರೂಪ

ಚಿತ್ತನಿಂದೆವೇ ತಜ್ಜನ್ಯ ಸುಖ

ಮತ್ತೆ ಆಗದು ರೇತೋಸ್ಖಲನೆ

ಮುಕ್ತರಿಗೆ ಅಭಿವ್ಯಕ್ತ ತಜ್ಜನ್ಯಾನಂದಾ

ಚಿತ್ತಿನೊಳಗೆ ನಿತ್ಯ ಒದಗಿಸುವಾನಂದ ಗೋಪಾಲವಿಟ್ಠಲ 

ಉತ್ತಮ ಪುರುಷ ಬಿಂಬನಾಗಿ ಯಿದ್ದು ॥ 1 ॥ 


 ಮಟ್ಟತಾಳ 


ಉದರ ಹಸಿವಿ ಯಿಲ್ಲ  ಮೆಲುವರು ಫಲಗಳು

ಒದಗೊದು ತಜ್ಜನ್ಯ ಆನಂದವು ವಳಗೆ

ಮಧು ಫಲಾದಿಗಳು ಮೆದುವ ಮನಸಿಲ್ಲಾ

ಮುದದಿ ತಾವಿದ್ದಲ್ಲಿ ಬಂದು ಸೇರುವವು

ಉದಕ ಕುಡುವರಿಗೆ ಒಂದೆರಡೆನಸಲ್ಲಾ

ಕ್ಷುಧೆ ಪಿಪಾಸ ನಿದ್ರಿ ದಶ ಇಂದ್ರಿಯಗಳಿಂದ

ಒದಗಿ ಬಾಹುವ ಸುಖಯೆಲ್ಲ ಆನಂದವು

ವಿಧಿಸೆ ಜೀವನಿಗೆ ಸ್ವರೂಪದೊಳಗೆ

ಒದಗಿ ಇಪ್ಪುವದೆಲ್ಲ ಎಲ್ಲ ಅಭೇದವಾಗಿ

ವಿಧಿಸಿ ಹೀಗೆ ಒಂದೇ ಜೀವಕ್ಕೆ ಎನಸಲ್ಲಾ

ವಿಧಿ ಆದಿ ತೃಣ ಅಂತ್ಯ ಎಲ್ಲ ಜೀವನಕೆ ಹೀಗೆ

ಮದನನಯ್ಯಾ ಚಲುವ ಗೋಪಾಲವಿಟ್ಠಲ 

ಒದಗಿಸುವಾನಂದ ತಾರತಮ್ಯದಿಂದ ॥ 2 ॥ 


 ರೂಪಕತಾಳ 


ಚಿತ್ತಿನಿಂದಲಿ ಹೀಗೆ ಭೋಗ ಬಡುವರು ಸತತ

ಮತ್ತೆ ಶುದ್ಧ ಸತ್ವದಿಂದ ಕ್ರೀಡೆ

ನಿತ್ಯ ತಮ್ಮಿಂದಲಿ ಭಿನ್ನವಾದದರಿಂದ

ಅರ್ಥಿ ಬಡುವರು ನಾನಾ ರೂಪವ ತೆಗೆದುಕೊಂಡು

ಹಸ್ತಿ ತುರಗ ನಾನಾ ವಸ್ತ್ರ ವಾಹನಗಳು

ಮತ್ತೆ ಆಗುವರು ಮಹಾ ಮಹಾ ವಿಚಿತ್ರ

ವರ್ತಮಾನವು ಕೇಳಿ ಇದರೊಳಗಿನ್ನು ವಿ -

ಚಿತ್ರವಾಗುವದುಂಟು ಜೀವರ ಸ್ಥಿತಿಗಳು

ಉತ್ತಮ ಸಾಂಶ ಜೀವರು ಇಲ್ಲಿ

ಮತ್ತೇಕ ಕಾಲದಿ ತಮ್ಮ ಅಂಶಗಳಿಂದ

ಸತ್ವ ಪ್ರಕೃತಿಗೊಂಡು ಚಿತ್ತ ಬಂದಂತೆ ತಾವು

ಹತ್ತೆಂಟು ಇಪ್ಪತ್ತು ನೂರಾರು ಸಾಸಿರ

ಮತ್ತೆ ನಾನಾ ರೂಪ ಛತ್ರ ಚ್ಯಾಮರ ಸರ್ವ

ವಸ್ತ್ರಾಭರಣ ಫಲ ಪುಷ್ಫ ಗಂಧ ಮಾಲೆ

ಹತ್ತೆಂಟು ಪರಿ ವಾಹನರಾಗಿ ತಮಗಿಂದಲು

ಉತ್ತಮರಾದವರ ಹೊತ್ತಾಡುವರು ಕ್ರೀಡಾ

ಮತ್ತೆ ಈ ಪರಿ ಹರಿಯ ಸೇವಿಸಿ ಪುನಹ

ಮತ್ತೆ ತಮ್ಮ ಸ್ವರೂಪ ಚಿತ್ತಿನೊಳು ಕೂಡುವರು

ಅತ್ಯಾಯಾಸವು ಸಲ್ಲ ಎಲ್ಲ ಸುಲಭವು ನೋಡಿ

ಬತ್ತಿಗಿಂದಲಿ ಜ್ಯೋತಿ ಬತ್ತಿಗ್ಹಚ್ಚಿದಂತೆ

ವ್ಯಕ್ತವೆಲ್ಲವು ಅವರ ಸಾಧನಗಳು

ಇತ್ತ ಕೇಳಿನ್ನು ನಿರಂಶ ಜೀವರ ಗತಿಯು

ಪ್ರತ್ಯೇಕ ಒಂದೊಂದು ಅಂಶದಿಂದ

ಸತ್ವ ಪ್ರಕೃತಿಗೊಂಡು ಒಂದೊಂದೆ ರೂಪದಿ

ಮತ್ತೆ ಸೇವಿಸುವರು ಸಿರಿ ಹರಿಯ

ಎತ್ತ ನೋಡಿದರು ಬಲು ರೂಪವಾಗುವ ಶಕ್ತಿ

ಮತ್ತಿಲ್ಲಾ ನಿರಂಶ ಜೀವರಿಗೆ

ಮುಕ್ತರೊಳಗಿರುತಿಪ್ಪ ಗೋಪಾಲವಿಟ್ಠಲನ್ನ 

ಭಕ್ತರಾನಂದ ಬಲ್ಲವರು ಯಾರೊ ॥ 3 ॥ 


 ಝಂಪಿತಾಳ 


ಜ್ಞಾನಭಕ್ತಿ ವಿರಕ್ತಿ ಮೂರು ಮುಕುತರಿಗೆ

ನ್ಯೂನವಿಲ್ಲವು ನೋಡು ಒಂದು ಕ್ಷಣವಾದರೂ

ಜ್ಞಾನಕೆ ಎಲ್ಲವು ಕಾಣಿಸುವದೆ ಫಲವು

ಏನು ಬೇಡಿದ್ದು ಒದಗುವದೆ ಭಕ್ತಿಯ ಫಲ

ಕಾಣದೆ ಆಧಿಕ್ಯ ಇಚ್ಛೈಸದಿಪ್ಪುವದೆ

ತಾನು ವಿರಕ್ತಿ ಎಂಬುದೆ ಇದುವೇ

ಆನಂದಮಯವೆಲ್ಲ ಆಡುವ ವಚನಗಳು

ಯೋನಿ ಎಂಭತ್ತು ನಾಲ್ಕು ಲಕ್ಷ ಜೀವರಗಳು

ಗೇಣು ಮೊಳವು ಯಿಲ್ಲ ಎಲ್ಲ ಅಣುರೂಪವು

ತಾನು ಕಿರಿದು ಯೆಂಬ ಕ್ಲೇಶವಿಲ್ಲಾ

ನಾನಾ ಜೀವರು ಪರಸ್ಪರ ವಿರೋಧಗಳಿಲ್ಲಾ

ಆನಿ ಸಿಂಹಗೆ ಅಲ್ಲಿ ವೈರವಿಲ್ಲಾ

ಹೇನು ವೃಶ್ಚಿಕಗಳು ಮೇಲೆ ಓಡಾಡಿದರೂ

ಆನಂದಮಯವೆಲ್ಲ ಅವುಗಳಿನ್ನು

ಕಾಣರೆಂಬದು ಇಲ್ಲ ಹರಿಯನ್ನ ಸರ್ವರು

ತಾನು ಸಂದಳಿ ಎಂಬ ಚಿಂತೆ ಯಿಲ್ಲಾ

ಕಾಣಿಸುವ ಹರಿ ತಾನು ಅವರ ಯೋಗ್ಯತೆ -

ಯಾನುಸಾರವಾಗಿ ತೋರುತಲಿ ಯಿನ್ನು

ಧ್ಯಾನವೆಂಬುದು ಇಲ್ಲ ತಮ್ಮ ಸ್ವರೂಪದಿ

ಧೇನಿಪರು ತಮಗಿಂತುತ್ತಮರ ಅನೇಕವಾಗಿ

ಧ್ಯಾನವ ಮಾಳ್ಪರು ಹರಿಯು

ತಾನು ದಿನದಿನ ನೂತನನಾಗಿ ಇನ್ನು

ಆನಂದಮಯಮೂರ್ತಿ ಗೋಪಾಲವಿಟ್ಠಲನ್ನ 

ಕಾಣುವರು ಪ್ರತಿಕ್ಷಣವು ಕೆಡಕ್ಕಿಲ್ಲದೆ ॥ 4 ॥ 


 ತ್ರಿವಿಡಿತಾಳ 


ಸೃಷ್ಟ್ಯಾದಿ ಅಷ್ಟಕರ್ತೃತ್ವವು  ಜೀವನ ಸ್ವರೂಪಕ್ಕೆ

ಘಟ್ಟಿಯಾಗಿಪ್ಪವು ಎಂದೆಂದಿಗು ಬಿಡದೆ

ಪುಟ್ಟಿಸಿ ಕೊಡುವ ಪ್ರತಿಕ್ಷಣಕೆ ಆನಂದ ಹರಿ

ಸ್ಪಷ್ಟದಿ ಅಭಿವ್ಯಕ್ತಿ ಸೃಷ್ಟಿ ನೋಡು

ಬಿಟ್ಟು ಜೀವನಾನೆಂದು ಪೋಗದೆ ಇಪ್ಪುವದೆ

ಘಟ್ಯಾಗಿ ಇದೆ ಪಾಲಣಿಯೊ

ನಷ್ಟ ಮಾಡಿ ಜಗವ ಮುಕ್ತ ಅಮುಕ್ತ ಜೀವ

ಪೊಟ್ಟಿಯೊಳಗೆ ಇಪ್ಪುವದೆ ಲಯವು ನೋಡು

ಅಷ್ಟು ಕಾರ್ಯಕ್ಕೆ ಜೀವವೆ ದುಡಿವದಿನ್ನು

ಘಟ್ಟಿಯಾಗಿದೆ ಹರಿ ನೇಮನ ಕಾಣೊ

ನಷ್ಟವಾಗದೆ ಜೀವ ನಿಜವಾಗಿ ಇಪ್ಪುವದೆ

ಘಟ್ಯಾಗಿ ಜ್ಞಾನ ಹರಿ ಕೊಟ್ಟದ್ದೆನ್ನಿ

ಸ್ಪಷ್ಟಾದಿ ತನದಿಂದ ಉತ್ತಮರ ಗುಣಗಳು

ಘಟ್ಯಾಗಿ ತಿಳಿಯದೆ ಅಜ್ಞಾನವೊ

ಕಟ್ಟುಮಾಡಿ ಅಧಿಕ ಆನಂದ ಕೊಡದಿಚ್ಛಾ -

ವರ್ಕ ಮಾಡಿಪ್ಪುದೆ ಬಂಧ ಕಾಣೊ

ಪುಟ್ಟಲೀಸಾದೆ ಪುನಃ ಸಂಸಾರ ಬಿಡಿಸಿದೆ

ಘಟ್ಟಿಯಾಗಿ ಇದೆ ಮೋಕ್ಷ ಕಾಣೋ

ಅಷ್ಟಕರ್ತೃತ್ವವು ಸ್ವರೂಪದೊಳಗಾಗಿ

ಘಟ್ಯಾಗಿ ನಿಂತು ಮಾಡಿಸಲು

ಇಷ್ಟರಿಂದ ಜೀವ ಮುಕ್ತರುಗಳಾನಂದಾ

ಸ್ಪಷ್ಟದಿಂದ ಹರಿಯು ಅಭಿವ್ಯಕ್ತಿ ಮಾಳ್ಪಾ

ಇಷ್ಟ ಮೂರುತಿ ರಂಗ ಗೋಪಾಲವಿಟ್ಠಲನು 

ಘಟ್ಟಿಯಾಗಿ ಮುಕ್ತರೊಡನಾಡುವಾ ॥ 5 ॥ 


 ಅಟ್ಟತಾಳ 


ವರಣಾಶ್ರಮಗಳುಂಟು ವರಣ ಬಾಹ್ಯರು ಉಂಟು

ಪರಿಪರಿ ಸ್ಥಾವರ ಜೀವರುಗಳು ಉಂಟು

ಇರುವರು ಇದ್ದಲ್ಲೆ ಸ್ಥಾವರ ಜೀವರು

ತಿರಿಗಿ ಆಡುವರಲ್ಲ ಇದ್ದಲ್ಲೆ ಆನಂದ

ಹರುಷ ಬಡುವರಿನ್ನು ಸ್ವರೂಪದಿಂದಲೆ

ತರತಮ್ಯ ಜೀವರು ಅಲ್ಲಿ ಉಂಟು

ಪರಿಪರಿ ಶುದ್ಧ ಸತ್ವಗಳನೆ ಕೊಂಡು

ಮರಗಳು ನಾನಾಕು ಲತೆಯ ರೂಪವಾಗಿ

ಪರಿವಾರ ಸುರರಿಂದ ಬೆರೆದು ಹರಿಯು ತಾನು

ಹೊರಗೆ ಪೊರಟು ತಾನು ಸಂಚರಿಸುತ್ತ

ಸಿರಿಯಿಂದ ಸುರರುಗಳಿಂದಾಡೊ ಪರಿ ಕ್ರೀಡಿಗನುಕೂಲು

ಪರಿಪರಿ ಪುಷ್ಫ ಫಲವು ರಸ ಗಂಧವು 

ಹರಿಯ ಕ್ರೀಡಿಗೆ ಅನುಕೂಲರಾಗಿ ನಾನಾ ಕುಸುಮ

ಸಿರಿ ತುಲಸಿ ಮುಂತಾದ ಮರಗಳು ಆಗಿ

ಹರಿಯ ಸೇವಿಸಿ ಪುನಃ ಇರುವರು ಇದ್ದಲ್ಲೆ

ಸಿರಿ ಶಂಖ ಚಕ್ರಧಾರಿಗಳು ಮತ್ತಿವರಲ್ಲ

ಮರಗಳು ನಿರುತ ತತ್ತದಾಕಾರರು

ಎರಡು ವಿಧರು ಉಂಟು ಸಾಂಶ ನಿರಂಶ

ಇರುತಿಪ್ಪರು ಸ್ಥಾವರರು ಜೀವಿಗಳೆನ್ನು

ಹರಿಯ ಸೇವಿಸುತಲಿ ತಮ್ಮ ಶಕ್ತ್ಯಾನುಸಾರ

ಪರಿಪರಿ ಆನಂದ ಅನುಭೋಗಿಸುತಲಿ

ಸಿರಿ ಮಹಾರಾಜ ಗೋಪಾಲವಿಟ್ಠಲರೇಯ 

ಪರಿಪರಿ ರೂಪನಾಗ್ಯಿವರ ಪಾಲಿಸುವ ॥ 6 ॥ 


 ಆದಿತಾಳ 


ಬಿಂಬನಾಗಿ ಪ್ರತಿಬಿಂಬಗಳಂತೆ ರೂಪ

ಎಂಭತ್ತು ನಾಲ್ಕುಲಕ್ಷ ಯೋನಿ ಜೀವರಾಶಿಗೆ

ಬಿಂಬನಾಗಿ ಶ್ರೀಹರಿ ಇಂಬಾಗಿ ತದಾಕಾರ

ಬಿಂಬನಾಗಿ ಒಳಗೆ ಇದ್ದು ಅವರು ಏನು

ಹಂಬಲಿಪರಾನಂದ ಸಂಭ್ರಮ ಒದಗಿಪ್ಪ

ಗಂಭೀರ ಗುಣಪೂರ್ಣ ಭಕ್ತರ ಪೊರೆವ ಕು -

ಟುಂಬಿ ಎನಿಪಾನಂದಾಂಬುಧಿಯು

ಡಂಬ ಜೀವರಗತಿ ಸಂಭ್ರಮವು 

ಉಂಬೊ ಅಪಾರ ಸುಖ ಜ್ಞಾನ ಮುಕ್ತರಿಗುಂಟು

ಬಿಂಬನಾದ ಶ್ರೀಹರಿ ತಿಳಿಸಿ ಕೊಡುವ

ಕಾಂಬೋದೆ ಮಾತ್ರ ಭೋಗವೆಂಬನು ಭಾವರಲ್ಲಾ

ತುಂಬಿದಾನಂದಾ ಪೂರ್ಣರಿವರು ನೋಡು

ಹೊಂಬಣ್ಣ ವಸ್ತ್ರ ಕಂಬಳಿ ಕಟ್ಟಿದಕ್ಷಣ

ಕಂಬಳಿಯ ಬಣ್ಣವು ಹೊಂಬಣ್ಣ ಸೇರುವದೆ

ಕುಂಭಿಣಿಯಲ್ಲಿ ವೃತ್ತಿ ಸುಖ ದುಃಖ ಅ -

ನುಭವವೆಂಬ ಜ್ಞಾನ ಉಂಟು ಭೋಗವು ಇಲ್ಲ

ಬಿಂಬ ಹರಿಗಿಲ್ಲ ಎಂಬೋದೇನಾಶ್ಚರ್ಯ

ಸಂಭ್ರಮಪ್ರದ ಮೂರ್ತಿ ಗೋಪಾಲವಿಟ್ಠಲ 

ಅಂಬುಜನಾಭನ ಪಾದಕ್ಕೆ ನಮೊ ನಮೊ ॥ 7 ॥ 


 ಜತೆ 


ಚಿತ್ರವಿಚಿತ್ರ ಮುಕ್ತರ ಕ್ರೀಡ್ಯಾವನು ಬಲ್ಲ

ಮುಕ್ತಿದಾಯಕ ಗೋಪಾಲವಿಟ್ಠಲ ಬಲ್ಲ ॥

***


No comments:

Post a Comment