ankita ತಂದೆವೆಂಕಟೇಶವಿಠಲ
ರಾಗ: ವಸಂತ/ಪೀಲು ತಾಳ: ಆದಿ
ಬಾರೊ ದ್ವೈತಸಾರಶರಧಿ ಪೂರ್ಣಚಂದ್ರ ಉ-
ದ್ಧಾರ ಮಾಡೊ ಎನ್ನ ಗುರು ರಾಘವೇಂದ್ರ ಪ
ಸಾಧಕರೆಲ್ಲರ ಸಕಲಮನದಾಭೀಷ್ಟ ಸುರ-
ಪಾದಪಾದಿಗಳ ಮೀರಿ ಕೊಡುವ ನಿಷ್ಠ
ಪಾದಾವಲಂಬಿಗಳಿಗೆ ಉಪದೇಷ್ಠನಾಗಿ
ಬೋಧಿಸುವೆಯೋ ದ್ವೈತತ್ತ್ವದ ಗುಟ್ಟ 1
ಧಾತಾಂಡದೊಳು ಯುಗಯುಗದಲ್ಲಿ ಸಂ-
ಭೂತನಾಗುವೆ ಹರಿಪ್ರೀತಿಯಲ್ಲಿ
ಮಾತರಿಶ್ವನ ಮತವನಧಿಯಲ್ಲಿ ಪ್ರ-
ಖ್ಯಾತಶಫರ ಕಾಯೊ ವಹಿಲದಲ್ಲಿ 2
ಮಾಯಾವಾದಿಗಳನೆಲ್ಲ ಖಂಡಿಸಿ ಸ-
ನ್ಯಾಯಸುಧೆಗೆ ಪರಿಮಳ ರಚಿಸಿ
ಕಾಯವಾಙ್ಮನೋಮಯನನು ತಿಳಿಸಿ ಪಾಪ
ಭೂಯಿಷ್ಠನನು ಪೊರೆ ಪತಿಕರಿಸಿ 3
ದುರ್ಮದಾಂಧರನೆಲ್ಲ ನಿಗ್ರಹಿಸಿ ನೀತ
ಧರ್ಮ ಕರ್ಮಂಗಳನಾಚರಿಸಿ
ಕರ್ಮಂದಿಜನಶಿರೋಮಣಿಯೆನಿಸಿ ಮೋಕ್ಷ
ಮರ್ಮತಿಳಿಸೊ ಸಾಧನೆ ಬಲಿಸೀ 4
ಭೂತ ಬೇತಾಳ ಪ್ರೇತಜಾತಬಾಧ ಸನ್ನಿ
ಪಾತ ಅಶುಭಗ್ರಹ ಸರಿಸೃಪದ-
ಘಾತ ದಾರಿದ್ರ್ಯಭಯ ವಿಷಮಿಸಿದದೋಷ
ವ್ರಾತ ಹಿಂಗಿಸುವದೊ ತವಪಾದ 5
ಹೃದ್ರೋಗ ಹರಿಸಿ ಪೊರೆಯನವರತಾ ತುಂಗ-
ಭದ್ರಾತೀರಗ ನಿರ್ಗತದುರಿತ
ರುದ್ರಾಂತರ್ಗತನಂಘ್ರಿಮಧುಪವ್ರತ ಶ್ರೀ-
ಮದ್ರಾಘವೇಂದ್ರಯತಿ ಶುಭಚರಿತ 6
ಪೊಂದಿರುವೆ ನಿಮ್ಮ ಪಾದಕಮಲಂಗಳ ದಯ-
ದಿಂದ ಕೇಳು ಬಾಲಕನ ವಚನಂಗಳ
ತಂದೆವೆಂಕಟೇಶವಿಠಲನೆಮ್ಮ ಕಂಗಳ ಮುಂದೆ
ತಂದು ಸಲಿಸೊ ಇಂದೆ ನಮಗೆ ಸರ್ವಮಂಗಳ 7
***
ಸುರಪಾದಪಾದಿಗಳ=ಕಲ್ಪವೃಕ್ಷ;
ಕಾಯವಾಙ್ಮನೋಮಯನನು=ಕಾಯಾ,
ವಾಚಾ ಮನಸ್ಸಿನಲ್ಲಿ ವ್ಯಕ್ತನಾದ;
ಭೂಯಿಷ್ಠ=ತುಂಬಿದ, ಭರಿತವಾದ;
ಸರಿಸೃಪದಘಾತ=ಹಾವಿನಿಂದ ಆಗುವ ತೊಂದರೆ;
No comments:
Post a Comment