..
ಖಾದಿ ಧರಿಸುವ ಜನಕೆ ಕ್ರೋಧವುಂಟೇ ಪ
ಕ್ರೋಧ ಜೈಸಿದ ನರಗೆ ಕಲಹಗಳುಂಟೇ
ಪಥ್ಯದಿಂದಿರುವವಗೆ ವ್ಯಾಧಿ ಭಯವೇ
ನಿತ್ಯ ಉಪವಾಸಿಗೆ ಭತ್ತದಾ ವ್ಯಥೆಯುಂಟೇ
ಚಿತ್ತ ಶುದ್ಧಿದ್ದವಗೆ ಮೈಲಿಗೆಯ ಪರವೇ 1
ಆಶೆ ಬಿಟ್ಟವನಿಗೆ ಅರಸರಾಭಯವುಂಟೆ
ದಾಸನಾದವನಿಗೆ ದೋಷವುಂಟೆ |
ದೇಶ ಉದ್ಧಾರಕಗೆ ಸೆರೆಮನೆಯ ಭಯವುಂಡೆ
ಪೂಶರನ ಗೆದ್ದವಗೆ ಕಾಮಿನಿಯ ಭಯವೇ 2
ಗೀತಾರ್ಥ ತಿಳಿದವಗೆ ಪಾತಕದ ಭಯವುಂಟೆ
ಶೀತೋಷ್ಣ ಸಹಿಸುವವಗೆ ಛಳಿ ಬಿಸಿಲು ಭಯವೆ |
ನೀತಿ ಕೋವಿದರಿಗೆ ಜಾತಿ ಪಕ್ಷಗಳುಂಟೆÉ
ದಾತನಿಗೆ ದುರ್ಭಿಕ್ಷು ಭೀತಿ ತಾವುಂಟೆ 3
ವಿದ್ಯಾಭಿಲಾಶೆಗೆ ತೇರ್ಗಡೆಯ ಭಯವುಂಡೆ
ಉದ್ಯೋಗವಿದ್ದವಗೆ ಉದರ ಭಯವೇ
ಯುದ್ಧ ಶೂರರಿಗೆಲ್ಲ ಮದ್ದುಗುಂಡಿನ ಭಯವೇ
ಬುದ್ಧಿವಂತರಿಗೆಂದಿಗಪಮಾನ ಭಯವೇ 4
ನೇಮದಿಂದಲಿ ನಡೆವವಗೆ ಸೋಮಾರಿತನವುಂಟೆ
ಭೂಮಾತೆ ಮಕ್ಕಳಿಗೆ ಕ್ಷಾಮವುಂಟೆ
ಸಾಮಗಾನವಿಲೋಲ ಶಾಮಸುಂದರವಿಠಲ
ನಾಮ ನೆನವವಗೆ ಯಮಧಾಮದಂಜಿಕೆಯೇ 5
***
No comments:
Post a Comment