ankita ರಮಾಕಾಂತವಿಠಲ
ಶ್ರೀ ರಾಯರ ಸ್ತೋತ್ರ (ಭಾಮಿನಿ ಷಟ್ಪದಿ)
ಶ್ರೀದ ಹರಿ ಸರ್ವೋತ್ತಮತ್ವವ
ವಾದಿಸುತ ಪಿತ ಕನಲಿ ಬಾಧಿಸಿ
ಕ್ರೋಧದಿಂದಲಿ ಸರ್ವವ್ಯಾಪ್ತನ ತೋರು ಎನಲಾಗ
ಛೇದಿಸುತ ಕಂಭವನು ನರಹರಿ
ಆದರದಿ ರಕ್ಷಿಸಿದ ವರ ಪ್ರ-
ಹ್ಲಾದರಾಜರು ಪೊರೆಯಲೆಮ್ಮನು ಸತತ ಕರುಣದಲಿ 1
ಶಿಶುತನದಿ ಬ್ರಹ್ಮಣ್ಯತೀರ್ಥರ
ವಶದಿ ಬೆಳೆಯುತ ಬ್ರಹ್ಮ ವಿದ್ಯೆಗೆ
ಅಸಮ ಯತಿ ಶ್ರೀಪಾದರಾಜರ ಶಿಷ್ಯರೆಂದೆನಿಸಿ
ಎಸೆವ ಗ್ರಂಥತ್ರಯದಿ ಮಧ್ವರ
ಕುಶಲಮತ ಉದ್ಧರಿಸಿ ಮೆರೆದರು
ಬಿಸಲಜಸಖ ಪ್ರತಿವಾದಿ ತಿಮಿರಕೆ ವ್ಯಾಸಮುನಿವರ್ಯ 2
ಕ್ಷೋಣಿಯೊಳಗಪ್ರತಿಮ ಯತಿವರ
ಜ್ಞಾನಿಗಳ ಸನ್ಮಾನ್ಯ ಮುನಿಸುರ-
ಧೇನು ಸುಮನಸ ತರುವು ಚಿಂತಾಮಣಿಯು ದೀನರಿಗೆ
ಆನತರ ಸಂತೈಸಿ ಸಲಹುವ
ಗಾನ ಕೋವಿದ ಮಂತ್ರಮನೆಯಲಿ
ಸಾನುರಾಗದಿ ನೆಲೆಸಿರುವ ಗುರು ರಾಘವೇಂದ್ರಾರ್ಯ 3
ಪ್ರಥಮದಲಿ ಪ್ರಹ್ಲಾದರಾಜರೆ
ದ್ವಿತಿಯದಲಿ ಶ್ರೀ ವ್ಯಾಸತೀರ್ಥರು
ತೃತೀಯದಲಿ ಗುರು ರಾಘವೇಂದ್ರರ ನಾಮದಿಂ ಮೆರೆವ
ಸತತ ಹೃದಯಾವಾಸ ಸೀತಾ-
ಪತಿಯು ನರಹರಿ ಕೃಷ್ಣ ವ್ಯಾಸರ
ಅತಿಶಯಾನಂದದಲಿ ನೋಳ್ಪರ ಕೃಪೆಯು ನಮಗಿರಲಿ 4
ರಾಘವೇಂದ್ರರ ಖ್ಯಾತಿ ಅಗಣಿತ
ಬಾಗಿ ಭಕ್ತಿಲಿ ವಂದಿಪರ ತನು-
ರೋಗ ಬಾಧೆಯ ಬಿಡಿಸಿ ಕಾಮಿತವಿತ್ತು ಸಲಹುವರು
ಯೋಗಿ ತಾರಾಗಣಕೆ ಶಶಿಧರ-
ರಾಗಿ ಶ್ರೀ ರಮಾಕಾಂತವಿಠಲನ
ಸಾಗರೋಪಮ ಕೃಪೆಲಿ ವರ್ಧಿಪ ಯತಿಗೆ ಆನಮಿಪೆ 5
***
No comments:
Post a Comment