Wednesday 1 September 2021

ಭಾರಿಶ್ರೀಮಂತನ ಮನೆಯಲಿ ಹಬ್ಬವು ಮೀರಿದುತ್ಸಾಹದಿ ಜರುಗುತಿರೆ ankita karigirisha ಸಾಂಗತ್ಯ sangatya

 ಸಾಂಗತ್ಯ 

[ಉಗಾಭೋಗದಂತೆ ಅನಿಬದ್ಧ ಶೈಲಿಯಲ್ಲಿ ಹಾಡುವ ಪರಿಪಾಠವಿದೆ]


ಭಾರಿಶ್ರೀಮಂತನ ಮನೆಯಲಿ ಹಬ್ಬವು

ಮೀರಿದುತ್ಸಾಹದಿ ಜರುಗುತಿರೆ

ಗೌರವದಿಂದ ಆಹ್ವಾನಪಡೆದಿದ್ದ

ಧಾರುಣಿ ಸುರರನೇಕರು ಸೇರಿರೆ 1

ಧೀಮಂತ ಪರಿಮಳಾಚಾರ್ಯರಿಗಾಹ್ವಾನ

ಶ್ರೀಮಂತ ಕೊಟ್ಟಿರಲಾದರದಿ 

ಆ ಮಹಾಮಹಿಮರು ಪೋಗಿ ಒಂದೆಡೆಯೊಳು

ಸಾಮಾನ್ಯರಂತೆ ಕುಳಿತುನೇಮದಿ 2

ವೇದಸೂಕ್ತಗಳ ಪಾರಾಯಣಮಾಡುತ

ಬೂದಿಮುಚ್ಚಿದ ಕೆಂಡದಂತಿರಲು

ಸಾಧಾರಣ ಜನಕೆಂತು ಸಾಧ್ಯವು ಇವರ-

ಗಾಧ ಮಹಿಮೆಯನು ತಿಳಿಯಲು 3

ಬಂದಿದ್ದ ಭೂಸುರವೃಂದಕ್ಕೆ ತಕ್ಕಷ್ಟು

ಗಂಧವ ತೆಗೆಯಲು ತಕ್ಕವರ

ಮಂದಿಯೊಳರಸುತ ಗೃಹಸ್ಥನ ಪುರೋಹಿತ

ಬಂದು ನೋಡಿದ ನಮ್ಮ ಆಚಾರ್ಯರ 4

ತಕ್ಕವರಿವರೆಂದು ಫಕ್ಕನೆ ಪೇಳಿದ

ತಕ್ಕಷ್ಟು ಗಂಧವ ತೆಗೆಯಿರೆಂದು

ತಕ್ಕ ಸಾಣೆಯಕಲ್ಲು ಗಂಧದ ತುಂಡನು

ಸೊಕ್ಕಿನಿಂ ತಂದಿರಿಸಿದನಂದು 5

ಹರಿಇಚ್ಛೆಯಿಂದಲಿ ಆಚಾರ್ಯರಾದಿನ

ವರ ಅಗ್ನಿಸೂಕ್ತವ ಪಠಿಸುತ್ತಿಹ

ಸರಿಸಮಯಕೆ ಪುರೋಹಿತ ಬಂದವರನು

ಸಿರಿಗಂಧ ತೆಗೆಯಲು ನೇಮಿಸಿದ 6

ಪರಮಶಾಂತತೆಯಿಂದ ಪರಿಮಳಾಚಾರ್ಯರು

ಧರಣಿಸುರರ ಲೇಪನಕೆ ಗಂಧವ

ಅರೆಯುತ ಪಾರಾಯಣ ಮಾಡುತ್ತಿದ್ದರು

ಅರಿಯಲೊಶವೆ ಹರಿಯ ಸಂಕಲ್ಪವ 7

ತೆಗೆದ ಗಂಧವಾಗ ಪುರೋಹಿತನೊಂದೆಡೆ

ತೆಗೆದಿಟ್ಟು ಭೋಜನಪೂರ್ವದಲಿ

ಮಿಗಿಲಾಗಿ ದ್ವಿಜರಿಗೆ ಕೊಡಲವರುಲೇಪಿಸೆ

ಧಗಧಗವೆನಿಸಿತು ತಾಪದಲಿ 8

ಭೂಮಿಸುರರ ತಾಪವ ನೋಡಿ ಸಂತಾಪದ-

ಲಾ ಮಹಾ ಪರಿಮಳಾಚಾರ್ಯರಾಗ

ಸ್ವಾಮಿ ಶ್ರೀಕರಿಗಿರೀಶನ ಸ್ಮರಿಸಿ ಪಠಿಸಿದರ್

ನೇಮದಿ ವರುಣಸೂಕ್ತವ ಬೇಗ 9

***


No comments:

Post a Comment