ನಾರಾಯಣ ನಾರಾಯಣ ನಾರಾಯಣ ನಾರಾಯಣ ಪ.
ದೇವರದೇವನೆ ಬಾರೊ ದೇವಕಿನಂದನ ಬಾರೊ
ದೇವೇಂದ್ರನ ಸಲಹಿದ ದೇವ ಬಾರೊ ಹರಿಯೆ ಅ.ಪ.
ಮಚ್ಚನಾಗಿ ಶ್ರುತಿಯ ತಂದಿತ್ತ ಭಕ್ತವತ್ಸಲನೆ ಭೃತ್ಯ
ಸತ್ಯವ್ರತನಿಗೊಲಿದ ಮಚ್ಚಬಾರೊ ಹರಿಯೆ 1
ಸಾರಿದ ಸುರರಿಗಾಗಿ ನೀರೊಳಗೆ ಮುಳುಗಿ
ಗಿರಿಯಬೆನ್ನಲಿ ಪೊತ್ತ ಕೂರ್ಮ ಬಾರೊ ಹರಿಯೆ 2
ಧsÀರೆಯನುದ್ಧರಿಸಲು ವರಾಹನಾದವನೆ
ಹಿರಣ್ಯಾಕ್ಷನ ಸೀಳ್ದ ಧೀರ ಬಾರೋ ಹರಿಯೆ 3
ನಂಬಿದ ಭಕ್ತರ ಕಾವ ನಂಬೆ ಕರುಣದಿ ಕಲ್ಲ-
ಕಂಬದಿಂದ ಉದಿಸಿದ ಡಿಂಬ ಬಾರೊ ಹರಿಯೆ 4
ಮಾಣವಕವೇಷನಾಗಿ ಕ್ಷೋಣಿ ಅಳೆದವನೆ
ದಾನವನ ಸೋಲಿಸಿದ ಜಾಣ ಬಾರೊ ಹರಿಯೆ5
ಕಡಿ[ದು] ದುಷ್ಟನೃಪರ ಬಿಡದೆ ಚಪ್ಪೆಕೊಡಲಿಯ
ಪಿಡಿದುಗ್ರ ಒಡೆಯ ಬಾರೊ ಹರಿಯೆ 6
ವೃಂದಾರಕವಂದ್ಯ ಸೇತುಬಂಧದಿ ದಶಕಂಧರನ
ಕೊಂದ ರಾಮಚಂದ್ರ ಬಾರೊ ಹರಿಯೆ 7
ಮಲ್ಲರ[ನೆಲ್ಲ] ಸೀಳಿ ಬಲ್ಲಿದ ಮಾವನ ಕೊಂದೆ
ಎಲ್ಲರ ವಲ್ಲಭ ಎಂಬೊ ಮಲ್ಲ ಬಾರೊ ಹರಿಯೆ 8
ಬೌದ್ಧನಾಗಿ ದೈತ್ಯರಿಗೆ ಶುದ್ಧಬುದ್ಧಿಯ ತೋರಿ
ರುದ್ರನ್ನ ಸೋಲಿಸಿದ ಸುಭದ್ರ ಬಾರೊ ಹರಿಯೆ 9
ಕರ್ಕಶದ ಖಳರನ್ನು ಕಲ್ಕಿರೂಪನಾಗಿ [ಮೂಲೆ
ಲಿಕ್ಕಿಸುವ ಸುಜನರ ಚೊಕ್ಕ ಬಾರೊ ಹರಿಯೆ 10
ವಿಜಯ ಹಯವದನ ಭಜಕರ ಭಾಗ್ಯನಿಧಿ
ಸುಜನಾಬ್ಧಿ ವಾದಿರಾಜನ ತೇಜ ಬಾರೊ ಹರಿಯೆ 11
***
No comments:
Post a Comment