ನಿನ್ನ ನಂಬಿದೆ ರಾಘವೇಂದ್ರನೆ ಎನ್ನ ಬಿನ್ನಪ ಲಾಲಿಸೊ
ಘನ್ನ ಮಹಿಮ ಮುನೀಂದ್ರ ಬೇಡುವೆ ನಿನ್ನ ಕರುಣೆಯ ಕರುಣಿಸೊ ಪ
ಏನು ಬೇಡುವುದಿಲ್ಲ ನಿನ್ನಯ ಪಾದ ಸ್ಮರಣೆಯ ನಿರುತವು
ಸಾನುರಾಗದಿ ಈಯುತೆನ್ನನು ಪಾರುಗಾಣಿಸೊ ಧರೆಯೊಳು 1
ಮೂಲರಾಮನ ಪಾದ ಭಜಕನೆ ಲೋಲ ನರಹರಿ ಪ್ರೀಯನೆ
ಕಾಲಕಾಲಕೆ ಹರಿಯ ಅನುದಿನ ಶೀಲನಾಮವ ನುಡಿಸೆಲೊ 2
ಬಲ್ಲಿದನು ನೀ ಶ್ರೀ ಪ್ರಹ್ಲಾದರಾಯನೆ ಖುಲ್ಲ ದೈತ್ಯನ ವಚನಕೆ
ಮೆಲ್ಲ ಶ್ರೀ ನರಹರಿಯ ಕಂಭದಿ ಅಲ್ಲೆ ತರಿಸುತ ತೋರಿದಿ 3
ಏಸು ನಿನ್ನಯ ಮಹಿಮೆ ಜಗದೊಳು ಸೂಸುತಿದೆ ಸದಾ ಕಾಲವು
ವ್ಯಾಸರಾಜ ಯತೀಂದ್ರ ನಿನ್ನಲಿ ದಾಸನಾ ಮತಿ ಬೇಡುವೆ 4
ತುಂಗತೀರ ವಿಹಾರ ರಾಜನೆ ಮಂಗಳಪ್ರದ ಮಹಿಮನೆ
ಹಿಂಗದೆನ್ನಯ ಪಾಪರಾಶಿಯ ಭಂಗ ಪಡಿಸುತ ಕರುಣಿಸು 5
ಮಂತ್ರ ತಂತ್ರ ವಿಚಾರ ಕೋವಿದ ಮಂತ್ರಧಾಮ ವಿಹಾರನೆ ಶ್ರೀ-
ಕಾಂತನನುದಿನ ಸೇವೆಗೈಯುವ ಧೀಮಂತ ರಾಘವ ಭಜಕನೆ 6
ಕಾಮವರ್ಜಿತ ಹೇಮಶಯ್ಯಜ ನೇಮದಿಂ ನಿನ್ನ ಸ್ಮರಿಪಗೆ
ಕಾಮಿತಾರ್ಥಗಳಿತ್ತು ಸಲಹುವಿ ಗುರುಶಾಮಸುಂದರ ಭಜಕನೆ 7
***
ರಾಗ: [ರೇವತಿ] ತಾಳ: [ಮಿಶ್ರನಡೆ] (raga tala may differ in audio)
No comments:
Post a Comment