Monday, 30 August 2021

ಕಡುಗ ಕಂಕಣ purandara vittala ankita suladi ಕೃಷ್ಣ ಬಾಲಲೀಲಾ ಸುಳಾದಿ KADUGA KANKANA KRISHNA BALALEELA SULADI

 ..

Audio by Vidwan Sumukh Moudgalya


ಶ್ರೀ ಪುರಂದರದಾಸರ್ಯ ವಿರಚಿತ 


 ಶ್ರೀಕೃಷ್ಣ ಬಾಲಲೀಲಾ ಸುಳಾದಿ - ೩ 


 ರಾಗ : ಮಧ್ಯಮಾವತಿ 


 ಧೃವತಾಳ 


ಕಡುಗ ಕಂಕಣ ಕಟ್ಟಿಯ ತೊಡರು ಸಮಚರಣ

ಹೇಮವರ್ಣ ಶ್ಯಾಮಕೋಮಲಾಂಗ

ಅಹೋ ಗೋಪಿಯರ ಮೋಹಿಸುತ್ತಿದೆ

ಪುರಂದರವಿಠ್ಠಲನ ಬಾಲಲೀಲೆ ॥೧॥


 ಮಟ್ಟತಾಳ 


ಪೊಂಬಟ್ಟಿಯ ಮೇಲೆ ಕಾಂಚಿಯದಾಮ ಮೇಲೆ ಗುಡಿ ಕಟ್ಟಿ

ಜಂಬೂ ಚೂತದೆಳೆ ತಳಿರುಗಳ ಮುಕುಟದ ಮೇಲ್ಕಟ್ಟಿ

ಕೊಂಬು ಕೊಳಲು ತುತ್ತೂರಿ ಮೌರಿವುಗಳು

ಭೊಂ ಭೊಂ ಭೊಂ ಭೊಂ ಝಂ ಝಂ ಝಂ ಝಂ

ಎಂಬ ರಾಮಕೃಷ್ಣ ಗೋಪರುಗಳ

ಸಂಭ್ರಮಿಸುವರ ಸೋಲಿಸಿತು

ಜಂಭಭೇದಿಸ್ವಯಂಭುವ ಮುಖ್ಯಸುರವಂದಿತ

ಕಂಬುಗ್ರೀವ ತಿರುವೆಂಗಳಪ್ಪ ಪುರಂದರವಿಠ್ಠಲರೇಯಾ ॥೨॥


 ತ್ರಿವಿಡಿತಾಳ 


ಜಯ ಜಯ ಸಿರಿನಾರಸಿಂಹ

ದುರಿತ ಭಯ ನಿವಾರಣ

ಜಯ ಜಯ ಸಿರಿ ದಿವ್ಯ ಸಿಂಹ

 ಪುರಂದರವಿಠ್ಠಲರೇಯಾ ಜಯ ಜಯ ॥೩॥


 ಅಟ್ಟತಾಳ 


ಅಹಂಕಾರ ಮಮಕಾರವನಳಿಯದೆ

ವಿಹಂಗ ಗಮನ ಸಿಲುಕುವನೆ ಮರುಳೆ

ಕಾಮ ಕ್ರೋಧ ಬಿಡದನಕ

ಹರಿಭಕ್ತರ ಪಾದ ಪದುಮಕ್ಕೆರಗದೆ

 ಪುರಂದರವಿಠ್ಠಲನು ಸುಲಭನೆ ಮರುಳೆ

ಕಾಮ ಕ್ರೋಧ ಬಿಡದನಕ ॥೪॥


 ಆದಿತಾಳ 


ವಾಮನ ವಾಸುದೇವ ಪದುಮನಾಭ ಹರಿ

ದಾಮೋದರ ನರಹರಿ ಮಾಧವ ಸಿರಿಧರ

ನಾರಯಣ ಹರಿ ಸಿರಿವತ್ಸಾಂಕಿತ

ವಾರಿಜದಳಲೋಚನ ಭೂರಮಣ

ಅಚ್ಯುತಾನಂತ ಗೋವಿಂದ ಮುಕುಂದ ಪುರು-

ಷೋತ್ತಮ ಶ್ರೀ ಹರಿ ನಾರೇಯಣ

ಪ್ರದ್ಯುಮ್ನ ಸಂಕರುಷಣ ವಾಸುದೇವ ಅನಿ-

ರುದ್ಧ ಪುರಂದರವಿಠ್ಠಲರೇಯ ದೇವೋತ್ತಮ ॥೫॥


 ಜತೆ 


ಕಾಯ ಕರಣಗಳಿಂದ ಜೀಯ ಕಾಯಬೇಕೆನ್ನ

ಕಾದುಕೊಳ್ಳೊ ಪುರಂದರವಿಠ್ಠಲ ನೀ ಕಾದು ಕೊಳ್ಳೆನ್ನ ॥೬॥

***


No comments:

Post a Comment