..
kruti by ಬೇಲೂರು ವೈಕುಂಠ ದಾಸರು belur vaikunta dasaru
ಗಜೇಂದ್ರಮೋಕ್ಷ
ನಾರಾಯಣ ಎನ್ನಿರೊ ನಾರಾಯಣ ಎನ್ನಿ
ನಾರದಾದ್ಯಖಿಳ ಮುನಿವಿನುತಾಯ ಪಾಹಿಮಾಂ
ಕಾರುಣ್ಯಲೋಚನಾಯ ನಾಗೇಂದ್ರಶಯನಾಯ
ಘೋರ ಭವದುಃಖ ಸಂಹಾರಾಯ ಪ
ಪಾಂಡುದೇಶದೊಳು ಇಂದ್ರದ್ಯುಮ್ನನೆಂಬ ಭೂ
ಮಂಡಲಾಧಿಪನು ವೈರಾಗ್ಯದಲಿ ಹರಿಪಾದ
ಪುಂಡರೀಕಧ್ಯಾನಪರನಾಗಿತಪಸಿಲಿರೆಚಂಡತಾಪಸನಗಸ್ತ್ಯಾ
ಹಿಂಡು ಶಿಷ್ಯರ ಬೆರೆಸಿ ಬರಲು ಸತ್ಕರಿಸದಿರೆ
ಕಂಡು ಗಜಯೋನಿಯೊಳು ಜನಿಸು ಪೋಗೆಂದು ಉ-
ದ್ದಂಡ ಶಾಪವನಿತ್ತು ಮುನಿ ಪೋಗಲಿತ್ತ
ತಾ ಶುಂಡಾಲನಾದನರಸ 1
ಕ್ಷೀರಸಾಗರ ತಡದೊಳೈವತ್ತು ಯೋಜನ ವಿ-
ಸ್ತಾರದಿಂದಿರುವ ತ್ರಿಕೂಟಾದ್ರಿ ಶೃಂಗತ್ರಯದಿ
ರಾರಾಜಿತ ತಾಮ್ರರಚಿತ ಕಾಂಚನದಿಂದ ಮೇರುಸಮ ಗಂಭೀರದಿ
ಪಾರಿಜಾತಾಂಭೋಜ ತುಳಸಿ ಮಲ್ಲಿಗೆ ಜಾಜಿ
ಸೌರಭಗಳಶ್ವತ್ಥ ಚೂತ ಪುನ್ನಾಗ ಜಂ
ಬೀರಾದಿ ತರುಗುಲ್ಮ ಖಗಮೃಗಗಳೆಸೆವಲ್ಲಿ
ವಾರಣೀಂದ್ರನು ಮೆರೆದನು 2
ಆನೆ ಹೆಣ್ಣಾನೆ ಮರಿಯಾನೆಗಳ ಸಹಿತಲಾ
ಕಾನನವು ತೊಳಲುತ್ತ ಬೇಸಿಗೆಯ ಬಿಸಲಿನಲಿ
ತಾ ನೀರಡಿಸಿ ಬಂದೊಂದು ಸರೋವರವ
ಕಂಡಿತು ಪಾನಾಭಿಲಾಷೆಯಿಂದ
ನಾನಾ ಪ್ರಕಾರದಿಂ ಜಲಕ್ರೀಡೆಯಾಡುತಿರೆ
ಏನಿದೆತ್ತಣ ರಭಸವೆಂದುಗ್ರಕೋಪದಿಂ
ದಾ ನೆಗಳು ಬಾಯ್ತೆರೆದು ನುಂಗಿತೊಂದಘ್ರಿಯನು
ಏನೆಂಬೆನಾಕ್ಷಣದೊಳು 3
ಒತ್ತಿ ಹಿಡಿದೆಳೆವುತಿರೆ ಇದೆತ್ತಣಯದೆನುತ
ಮತ್ತೆ ಇಭರಾಜನೌಡೆತ್ತಿ ಫೀಳಿಡುತ ಎಳೆ
ದೊತ್ತಿ ತಂದನು ಕಡೆಗೆ ಮತ್ತೆ ನಡುಮಡುವಿನೊಳಗೆ
ಸೆಳೆದುದು ಬಿಡದೆ ನೆಗಳವು
ಇತ್ತಂಡವಿತ್ತು ಕಾದಿತ್ತು ಸಾವಿರ ವರುಷ
ಪೊತ್ತರಿಸಿತ್ತೇನೆಂಬೆ ಮತ್ತಾ ಗಜೇಂದ್ರಂಗೆ
ಶಕ್ತಿ ತಗ್ಗಿತು ತನ್ನ ಮನದೊಳಗೆ
ಚಿಂತಿಸುತ ಮತ್ತ್ಯಾರು ತನಗೆನುತಲಿ 4
ಬಂದುದಾ ಸಮಯದಲಿ ಹಿಂದೆ ಮಾಡಿದ ಪುಣ್ಯ
ದಿಂ ದಿವ್ಯಜ್ಞಾನದಿಂ ಕಣ್ತೆರೆದು ಕೈಮುಗಿದು
ವಂದಿಸುತ ಮನದೊಳರವಿಂದನಾಭಾಚ್ಯುತ
ಮುಕುಂದ ಮುನಿವೃಂದವಂದ್ಯಾ
ಇಂದಿರಾರಮಣ ಗೋವಿಂದ ಕೃಷ್ಣ ಭಕ್ತರ
ಬಂಧು ಕರುಣಾಸಿಂಧು ತಂದೆ ಸಲಹೆನ್ನ ನಾ
ನಿಂದು ಬಹುಸಿಲುಕಿದೆನು ದಂದುಗದ
ಮಾಯಾಪ್ರಬಂಧದಿ ನೆಗಳಿನಿಂ 5
ಪರಮಾತ್ಮ ಪರಮೇಶ ಪರಿಪೂರ್ಣ ಪರಾತ್ಪರ
ಉರುತರ ಪರಂಜ್ಯೋತಿ ಪರಮಪಾವನ ಮೂರ್ತಿ
ಪರತತ್ವ ಪರಬ್ರಹ್ಮ ಪರಮಾನಂದಾ
ಪರಮೇಷ್ಠಿ ಪರಮಪುರುಷಾ
ನಿರುಪಮ ನಿಜಾನಂದ ನಿರ್ಭಯ ನಿರಾವರಣ
ನಿರವಧಿಕ ನಿರ್ಗುಣ ನಿರಂಜನ ನಿರಾಧಾರ
ನಿರವೇದ್ಯ ನಿಶ್ಯಂಕ ನಿತ್ಯನೈಮಿತ್ಯಕಾ ನೀ ಸಲಹೆನ್ನನೆಂದಾನೆ 6
ಇಂತೆನುತ ಮೂರ್ಛೆಯಲಿ ಗುಪಿತ ಕಂಠಧ್ವನಿಯೊ
ಳಂತರಾತ್ಮಕನ ನೆನೆವುತ್ತಳುತ್ತಿರಲಿತ್ತ
ನಂತ ಮಹಿಮನು ಕೇಳಿ
ಕರುಣದಿಂದಾಕ್ಷಣದೊಳನಂತಶಯನದೊಳೆದ್ದನು
ಸಂತವಿಸಿ ಸಿರಿಮುಡಿಯ ಗರುಡವಾಹನನಾಗಿ
ಚಿಂತೆಬೇಡವೆನುತ ಅಭಯ ಹಸ್ತ ಕೊಡುತ ಶ್ರೀ
ಕಾಂತ ಭಕ್ತನ ಬಳಿಗೆ ಬಂದೆರಡುಗೈಯಿಂ
ದಂತಿವದನನ ನೆಗಹಿದಾ 7
ನೆಗಳ ಬಾಯನು ಚಕ್ರದಲಿ ಸೀಳಿ ಕರಿವರನ
ಉಗುವ ಕರುಣದಿಂ ಮೈದಡಹಲ್ಕೆ ಗಜಜನ್ಮ
ತೆಗೆದುದಾಕ್ಷಣವೆ ಮಣಿಮುಕುಟ
ಕುಂಡಲದಿಂದ ಮಿಗೆ ಶೋಭಿಸುತಲೆಸೆದನು
ವಿಗಡ ದೇವಲ ಋಷಿಯ ಶಾಪದಲಿ ಬಿದ್ದಿಳೆಗೆ
ಮಿಗೆನಕ್ರನಾಗಿ ಹೂಹೂ ಎಂಬ ಗಂಧರ್ವ
ನಘಹರನ ಕಂಡು ನಿಜಗತಿಗೈದು
ಅಮರರೊಲುಮೆಗೆ ನೆರೆದನೋಲೈಸುತ 8
ಮಣಿಮಯ ಕಿರೀಟಕುಂಡಲ ಹಾರ ಪದಕ ಕಂ
ಕಣ ಕೌಸ್ತುಭೋಜ್ವಲ ಸುಗಂಧ ಭೂಷಣ ಹಸ್ತ
ಪಾಣಿಯಾ ಶಂಖಚಕ್ರಾಬ್ಜಧ್ವಜ ಕಸ್ತೂರಿ ತಿಲಕ ಪ್ರಣವ ತಾಕಿದನು
[ಝಣ ಝಣಿತನೂ]ಪುರ[ದ] ದಂತ ಪಂಕ್ತಿಯ ಕೃಪೆ
ಕ್ಷಣದ ಸಿರಿ ಮೊಗದ ಪೀತಾಂಬರದಾಲಂಕೃತದ
[ಗಣಿತನು] ಜಯ ಜಯವೆಂದು
ಸುರಸಿದ್ಧ ಸಾಧ್ಯ ಸಂದಣಿಯೊಳಗೆ ಮೆರೆದನು 9
ಹರಿಯನುತಿಗೈದಂಘ್ರಿಗೆರಗಲಾಕ್ಷಣದಲಿ
ಭರದಿಂದಲೆತ್ತಿ ಕೇಳ್ಮಗನೆನ್ನನೀ ಶರಧಿ
ಗಿರಿಶೃಂಗತ್ರಯ ಸಪ್ತದ್ವೀಪದಲಿ [ಧರಣಿದೇವಿ] ವರಲಕ್ಷ್ಮಿಯೊಳು
ಗರುಡ ಶೇಷ ನಾರದ ಪ್ರಹ್ಲಾದ ಧ್ರುವ ರೊಲು
ವಿಪ್ರಋಷಿದೇಶಿಗರನಾಚಂದ್ರಾರ್ಕ ವಾಗಿ
ಸಿರಿವತ್ಸ ಶಂಖ ಚಕ್ರಾವತಾರದಲಿ ಸ್ಮರಿಸುವವರ ಕಾಯ್ವೆನೆಂದಾ 10
ಆವನಿದನುದಯ ಕಾಲದೊಳೆದ್ದು ಭಕ್ತಿಯಿಂ
ಭಾವಶುದ್ಧಿಯಲಿ ಭಜನೆಯ ಮಾಳ್ಪ ಜನರಿಗ
ಫಾವಳಿಯ ಪರಿಹರಿಸಿ ನರಜನ್ಮವನು ಕಳೆದು ಪರಿಶುದ್ಧರಾದಹರೆಂ-
ದಾ ವಾಸುದೇವನಾಜ್ಞಾಪಿಸಿದ ಗಜೇಂದ್ರ ಸಹಿ
ತಾ ವಿಹಂಗಾಧಿಪನನೇರಿ ಬಿಜಯಂಗೈದ
ಆ ವೈಕುಂಠಪತಿಯ ನಂಬಿದ ಸೇವಕರಿಗೇನಿದು ಚೋದ್ಯವೇ11
***
No comments:
Post a Comment