ಜಯ ಜಯಾ ಶ್ರೀ ವೆಂಕಟೇಶ ಜೀಯ ಪ
ಜಯ ಶ್ರೀ ವೆಂಕಟೇಶಜೀಯ ನೀನೆ
ಭಯಪ್ರದಾಯಕನಯ್ಯ ||ಆಹಾ||
ಭಯಕೃದ್ಭಯನಾಶನ ನೀ ಎನ್ನ ಕೈಬಿಡದೆ
ಕಾಯೊ ಎನ್ನೊಡೆಯನೆ ವೇಂಕಟರಾಯ ಅ.ಪ
ಮಂಕುಮಾನವನಾದ ಎನ್ನ ಮನದ
ಡೊಂಕು ತಿದ್ದಿದಿ ಸ್ವಪನವನ್ನ ನಿನ್ನ
ಅಂಕಿತದಂತೆ ನುಡಿಸೆನ್ನ ಇನ್ನು
ಮಂಕುಹರಿಸಿದೆ ಪ್ರಸನ್ನ ||ಆಹಾ||
ಬಿಂಕದಿಂದ ಇಹ ಶಂಕೆ ಹರಿಸಿ ನಿನ್ನ
ಕಿಂಕರ ಕಿಂಕರ ಕಿಂಕರನೆನಿಸಿದೆ 1
ಹಿಂದನೇಕ ಪರಿಯಿಂದ ಮನ
ಬಂದಂತೆ ನುಡಿಸಿದ್ದರಿಂದ ತಂದೆ
ಮುದ್ದು ಮೋಹನ ವಿಠ್ಠಲಾನಂದ ಪೊಂದಿ
ಸಂದೇಹ ಹರಿಸಿದ ಚಂದ ||ಆಹಾ||
ಇಂದು ಮುಂದು ಎಂದೆಂದಿಗೂ ನೀ ಭವ
ಬಂಧ ಹರಿಸಿ ಕಾಯಬೇಕು ಇಂದಿರೆರಮಣ2
ತ್ವರಿತಾದಿ ದಯಮಾಡೋ ಹರಿಯೆ ನೀನೆ
ನಿರುತ ಎನ್ನಯ ಕುಲದ ದೊರೆಯೇ ಭಕ್ತ
ಪರಿಪಾಲ ಮೋಕ್ಷದ ಹರಿಯೇ ನಿನ್ನ
ಹೊರತು ರಕ್ಷಕರ ನಾನರಿಯೆ ||ಆಹಾ||
ಪರಮಕರುಣಿ ಶ್ರೀ ವೇಂಕಟೇಶಾಭಿನ್ನ
ಉರಗಾದ್ರಿವಾಸವಿಠಲ ಜಗದೀಶನೆ 3
****
No comments:
Post a Comment