Monday, 2 August 2021

ಮತ್ಸರಿಸುವವರಲ್ಲಿ ಮಾನ್ಯವಿರಲೀ ಬಚ್ಚಲಿಲ್ಲದ ಮನೆಯು ankita uragadrivasa vittala

loka neeti

ಮತ್ಸರಿಸುವವರಲ್ಲಿ ಮಾನ್ಯವಿರಲೀ ಪ


ಬಚ್ಚಲಿಲ್ಲದ ಮನೆಯು ಸ್ವಚ್ಛತಾನಾಗಿಹುದೆ ಅ.ಪ


ಅರಿಷಡ್ವರ್ಗಗಳು ತುಂಬಿಕೊಂಡಿಹ ದೇಹ

ಪರಿಶುದ್ಧವಹುದೇನೊ ಆವಾಗಲೂ

ಪರಿಪರಿಯಿಂದಲಿ ಪರಿವಾರ ಜನಗಳು

ಪರಿಹಾಸ್ಯಮಾಡಿ ಅಘವ ಕದ್ದೊಯ್ವರಯ್ಯ 1


ಗುಣತ್ರಯಗಳಿಂದಲಿ ನಿಬಿಡವಾದೀದೇಹ

ಗುಣಕಾರ್ಯ ಮಾಡದೇ ಬಿಡದೆಂದಿಗೂ

ಅಣಿಯಾಗಿ ದುರ್ಗುಣಗಳೊಕ್ಕಣಿಸಿ ಪೇಳುವಡೆ

ಗುಣವ ತಿದ್ದಲು ತಾವು ಋಣಿಯಾಗುವರಯ್ಯ2


ಅಭಿಮಾನವೆಂಬುದು ನಭೋಮಂಡಲವರೆಗಿಹುದು

ಶುಭವೆಂತೊ ಡಾಂಭಿಕದ ಹೇ ಮಾನವಾ

ತುಂಬಿತುಳುಕುವ ದುರಭಿಮಾನವನೆ ತೊಲಗಿಸಿ

ಇಂಬು ತೋರುವರಯ್ಯ ಮನಸ್ಥೈರ್ಯಕೇ3


ಮಕ್ಕಳಪರಾಧಕೆ ಕಕ್ಕುಲತೆ ಪಡದೆ

ನಕ್ಕುಸಂತೈಸಿಲಾಲಿಸುವ ತೆರದಿ

ಅಕ್ಕರದಿ ತನ್ನ ಅಪರಾಧಗಳನೆಲ್ಲ

ಲೆಕ್ಕಿಸದೆ ಪೇಳ್ವರದು ಉಪಕಾರವಯ್ಯ 4


ಮಚ್ಚರದಿ ನಿಂದಿಸೆ ಅಚ್ಚುತನ ಭಕುತರಿಗೆ

ನಿಚ್ಚದಲಿ ಸ್ವಚ್ಛಭಕುತಿ ಇಹುದು

ಮಚ್ಚರಕೆ ಸ್ವೇಚ್ಛೆಯಿಂದೆದುರು ಉಚ್ಚರಿಸದಿರೆ

ಮೆಚ್ಚಿ ಕಾಯುವನಯ್ಯ ಶ್ರೀ ವೇಂಕಟೇಶ 5

****


meaning

ಶ್ರೀಮತ್ಪುರಂದರದಾಸಾರ್ಯರು ತಿಳಿಸಿದದ್ದನ್ನೇ ಈ ಕೃತಿಯಲ್ಲಿಯೂ ಶ್ರೀ ಉರಗಾದ್ರಿವಾಸವಿಠಲದಾಸಾರ್ಯರು ತಿಳಿಸುತ್ತಿದ್ದಾರೆ.  


            ನಮ್ಮ ತತ್ವಗಳನ್ನು  ಸರಿಯಾಗಿ ತಿಳಿಯದೆ, ಜನರನ್ನ ತಪ್ಪುಹಾದಿಯಲ್ಲಿ ನಡೆಸುತ್ತಿರುವ ದುಷ್ಟಜನರನ್ನು ದೂರವಿಡಬೇಕು ಹೌದು. ಸತ್ ಪರಂಪರೆಯಲ್ಲಿ ಬಂದಂತಹ ಮಹಾನುಭಾವರನ್ನು ನಿಂದಿಸಿದವರನ್ನು ತೊರೆಯಬೇಕು ಹೌದು. ಆದರೇ ಸಜ್ಜನರ ನಿಂದೆ ಮಾಡತಕ್ಕದ್ದಲ್ಲ. ಮಾಡಿದರೆ ಪರಮಾತ್ಮನು ಎಂದಿಗೂ ಮೆಚ್ಚನೆಂಬುದು ಸೂಕ್ಷ್ಮ.


ಮತ್ಸರವೆಂದರೆ ಅನೇಕ ಅರ್ಥಗಳಿದ್ದವೆ ಅಸೂಯ ಬಡುವುದು, ಹಗೆಯಿಂದಿರುವುದು, ಕೆಡುಕನ್ನು ಬಯಸುವುದು ಹೀಗೆ. 


           ನಿಂದಕರು ಬಂದು ನಮ್ಮನ್ನು ನೇರವಾಗಿಯೂ, ಅಥವಾ ಹಿಂದಿನಿಂದಲೋ ನಿಂದಿಸಿದಾಗ ಅಂತಹವರನ್ನು , ಅಂತಹವರ ಮಾತುಗಳನ್ನು ಹಿಡಿಸಿಕೊಳ್ಳದೆ ಅವರ ಮಾತುಗಳನ್ನೂ ಸಹ ಪರಮಾತ್ಮನ ಪಾದಗಳಲ್ಲಿ ಸಮರ್ಪಣೆ ಮಾಡಿಬಿಟ್ಟರೆ ಅದು ಅಂಟಿಕೊಳ್ಳುವುದೂ ಇಲ್ಲ. ಹೇಗೇ ಗೋಡೆಗೆ ತಗುಲಿದ ಚೆಂಡು ಮತ್ತೆ ತಿರುಗಿ ಹಾಕಿದವರಿಗೆ ತಗಲುತ್ತದೆಯೋ ಹಾಗೆಯೇ ನಾವೂ ನಿಶ್ಚಲವಾದ ಗೋಡೆಯಂತಿರಬೇಕು. ಇದೇ ವಿಷಯದ ಕುರಿತು  ಶ್ರೀಜಗನ್ನಾಥದಾಸರು ತಮ್ಮ ಒಂದು ಕೃತಿಯಲ್ಲಿ ಮುಂದೆ ಜನರು ನಿನ್ನ ವಂದಿಸಿದಾಕ್ಷಣ ಬಂದ ಭಾಗ್ಯವೇನೋ|ಹಿಂದೆ ಜನರು ನಿನ್ನ ನಿಂದಿಸಿದಾಕ್ಷಣ ಕುಂದಾದದ್ದೇನೋ ಅಂತ ಕೇಳುತ್ತಾರೆ. 


       ಬಚ್ಚಲಿಲ್ಲದ ಮನೆ ಹೇಗೆ ಸ್ವಚ್ಛವಾಗಿರುವುದಿಲ್ಲವೋ ಅದೇ ರೀತಿಯಲ್ಲಿ ನಮ್ಮನ್ನು ನಿಂದಿಸುವರೂ ಸಹ ನಮ್ಮ ಪಾಪಗಳನ್ನು ತೆಗೆದುಕೊಂಡು ನಮ್ಮನ್ನು ಸ್ವಚ್ಛಮಾಡುತ್ತಾರೆ. ಅಂತಹವುರಲ್ಲಿ ನಾವು ಗೌರವವನ್ನೇ ತೋರಿಸಬೇಕೇ ಹೊರತು ಅವರನ್ನು ಮತ್ತೆ ನಿಂದಿಸುವುದರಿಂದಲೂ, ಅವರಂದ ಮಾತುಗಳಿಗೆ ನೋವನ್ನು ಅನುಭವಿಸುವುದರಿಂದಲೂ ನಷ್ಟ ನಮಗೇ ಹೊರತು ಅವರಿಗಲ್ಲ.  


              ಅರಿಷಡ್ವರ್ಗಗಳು ತುಂಬಿಕೊಂಡಿಹ ದೇಹ

              ಪರಿಶುದ್ಧವಹುದೇನೊ ಆವಾಗಲೂ

              ಪರಿಪರಿಯಿಂದಲಿ ಪರಿವಾರಜನಗಳು

              ಪರಿಹಾಸ್ಯಮಾಡಿ ಅಘವ ಕದ್ದೊಯ್ವರಯ್ಯ ॥


      ಅರಿಷಡ್ವರ್ಗಗಳಿಂದ ತುಂಬಿದ ಈ ದೇಹವನ್ನು ಆಗಾಗ ನಿಂದಿಸಿ ಶುದ್ಧಮಾಡುವುದು ಮತ್ಸರಿಸುವರೇ ಹೀಗಾಗಿ ಮತ್ಸರಿಸುವರಲ್ಲಿ ಮಾನ್ಯವಿರಲಿ ಅಂತಾರೆ ಶ್ರೀ ದಾಸಾರ್ಯರು.

ಆ ಅರಿಷಡ್ವರ್ಗಗಳುಳ್ಳ ಜನರು ಸಜ್ಜನರ ಪರಿಹಾಸ ನಿಂದನೆಗಳನ್ನು ಮಾಡಿ ಆ ಸಜ್ಜನರು ಮಾಡಿದ ಪಾಪಗಳನ್ನು ತಾವು ತೆಗೆದುಕೊಳ್ಳುತ್ತಾರೆ‌. ಹಾಗಾಗಿ ಯಾರಾದರೂ  ನಿಂದನೆ ಮಾಡಿದರೆ ಮರುನಿಂದನೆ ಮಾಡದೆ ನಮ್ಮಲ್ಲಿರುವ ಪಾಪಗಳು ಕಳೆಯುತ್ತಿವೆ ಅನ್ನುವ ಅನುಸಂಧಾನವಿರಬೇಕು ಎನ್ನುವುದರ ಜೊತೆ ನಾವು ಯಾರಿಗಾದರೂ ನಿಂದನೆ ಮಾಡಿದ್ದಲ್ಲಿ ಅವರ ಪಾಪಗಳನ್ನು ನಾವು ತೆಗೆದುಕೊಳ್ಳಬೇಕಾದೀತು ಎಚ್ಚರ ಎನ್ನುವುದು ದಾಸರ ಅಭಿಪ್ರಾಯ. 


ಮಚ್ಚರಕೆ ಸ್ವೇಚ್ಛೆಯಿಂದೆದುರು ಉಚ್ಚರಿಸದಿರೆ

      ಮೆಚ್ಚಿಕಾಯುವನಯ್ಯ ಶ್ರೀವೇಂಕಟೇಶ॥ 


           ಭಗವದ್ಭಕ್ತರನ್ನು ಮತ್ಸರದಿಂದ ನಿಂದಿಸುವವರಿಗೆ ಎದುರು ಮಾತನಾಡದಿದ್ದರೆ ಅಂದರೆ ಯಾರು ಏನೇ ನಿಂದಿಸಿದರೂ ಸಹ ಮರುನಿಂದನೆ ಮಾಡದಿದ್ದರೆ  ಶ್ರೀವೆಂಕಟೇಶಾಭಿನ್ನ ನಮ್ಮ ಶ್ರೀಹರಿ ಅವರನ್ನು ಮೆಚ್ಚಿ ರಕ್ಷಿಸುತ್ತಾನೆ  ಎಂದು ಎಲ್ಲ ಹಿರಿಯ ದಾಸರು ತಿಳಿಸಿದ ಮಾತುಗಳನ್ನು ಈ ಕೃತಿಯಲ್ಲಿ ತಾವೂ ಪಾಲಿಸಿ ನಮಗೂ ಪಾಲಿಸಬೇಕೆಂಬುದನ್ನು ತೋರಿಸಿದ್ದಾರೆ.


           ಶ್ರೀ ಉರಗಾದ್ರಿವಾಸವಿಠಲರು ಶ್ರೀ ಪರಮಪ್ರಿಯ ಸುಬ್ಬರಾಯದಾಸಾರ್ಯರ ಶಿಷ್ಯರು. ಗುರುಗಳಿಂದ ಉಪದೇಶ ಪಡೆಯುವುದರ ಮುನ್ನ ಅವರು ವೆಂಕಟೇಶ ಅಂಕಿತದಿಂದ ಕೃತಿರಚನೆ ಮಾಡುತ್ತಿದ್ದರು. ಉಪದೇಶಾನಂತರವೂ ಅವರ ಕೃತಿಗಳಲ್ಲಿ ಶ್ರೀವೇಂಕಟೇಶಾಭಿನ್ನ ಉರಗಾದ್ರಿವಾಸವಿಠಲ ಎಂದು ಪ್ರಯೋಗ ಮಾಡಿದ್ದನ್ನು ಕಾಣಬಹುದು. ಇವರ ಸಾಹಿತ್ಯ ಅಷ್ಟೇ ಸುಂದರ ಹಾಗೂ ಸರಳವೂ ಇದೆ, ಕಠಿಣವೂ ಇದೆ. ಸೊನ್ನೆಯ ಕುರಿತು ಇವರ ರಚನೆ ತುಂಬಾ ಗಹನವಾದುದ್ದು. ಮೈಸೂರಿನ ನಂಜನಗೂಡಿನ ಶ್ರೀಕಂಠೇಶ್ವರನ ಕುರಿತು ಮತ್ತೆ ಶ್ರೀ ಶೇಷಚಂದ್ರಿಕಾಚಾರ್ಯರ ಕ್ಷೇತ್ರವಾದ ತಿರುಮಕೂಡಲು ನರಸೀಪುರದ ಗುಂಜಾ(ಗುಲಗಂಜಿ ಕೈಯಲ್ಲಿ ಹಿಡಿದ) ನರಸಿಂಹದೇವರ ಕುರಿತಾಗಿನ ಕೃತಿಗಳು, ಶ್ರೀಮದ್ಭಾಗವತದಲ್ಲಿ ಬರುವ ನಾರಾಯಣಕವಚದ ಸಾರದ ಪದ, ಪರಮಾತ್ಮನ ಆಪಾದಮೌಲಿಪರ್ಯಂತದ ವರ್ಣನೆಯ ಜೊತೆ , ಚಕ್ರಾಬ್ಜಮಂಡಲದ ವಿವರವನ್ನು ತಿಳಿಸುವ ಪದ ಹಾಗೂ ಪರಮಾತ್ಮನ ರೂಪಗಳ ವರ್ಣನೆ (೧೧೧ ನುಡಿಗಳ ಕೃತಿ)ಹೀಗೆ ಇವರ  ಕೃತಿಗಳು ವಿಶೇಷವಾಗಿವೆ.  


          ಅಂತಹ ಕೃತಿಗಳನ್ನು ನೋಡುವ, ಓದುವ, ಪಾಡುವ, ತಿಳಿಯುವ ಸೌಭಾಗ್ಯ ನಮ್ಮದಾಗಲೆಂದು ಶ್ರೀ ಉರಗಾದ್ರಿವಾಸವಿಠಲರಲ್ಲಿ ಹಾಗೂ ಅವರ ಅಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಲಕ್ಷ್ಮೀವೇಂಕಟೇಶಾಭಿನ್ನ ಶ್ರೀಕೃಷ್ಣಪರಮಾತ್ಮನಲ್ಲಿ ಭಕ್ತಿಯಿಂದ ಪ್ರಾರ್ಥನೆ ಮಾಡುತ್ತಾ..

smt. Padma Sirish

ಜೈ ವಿಜಯರಾಯ

ನಾದನೀರಾಜನದಿಂ ದಾಸಸುರಭಿ 🙏🏾

***

No comments:

Post a Comment