Monday, 2 August 2021

ಬಂದು ನಿಲ್ಲೋ ಶ್ರೀಹರೇ ಬಂದುನಿಲ್ಲೊ ಇಂದು ಹಿಂದು ನೀನೆಂದಿಗು ankita uragadrivasa vittala

ಬಂದು ನಿಲ್ಲೋ ಶ್ರೀಹರೇ-ಬಂದುನಿಲ್ಲೊ ಪ


ಇಂದು ಹಿಂದು ನೀನೆಂದಿಗು ತಂದೆ ಗೋ-

ವಿಂದ ಅನಿಮಿತ್ತಬಂಧು ಕಣ್ಣಮುಂದೆ ಅ.ಪ


ಸ್ವಾಂಶದಿಂದ ಅಭಿವ್ಯಕ್ತಿಯಾದೆ ಪಂ-

ಚಾಂಶತೋರಿ ಸರಸ ಜನನ ಮಾಡಿದೆ

ಸ್ವಾಂಶನಾಗಿ ಅವತರಿಸಿ ಮೆರೆವ ಸ-

ರ್ವಾಂಶದಿಂದಿಹ ತ್ರಿಂಶ ರೂಪನೇ 1

ಸ್ವಗತಭೇದವಿವರ್ಜಿತನೆನಿಸಿ

ತ್ರಿಗುಣಮಯದಿ ಬ್ರಹ್ಮಾಂಡ ನಿರ್ಮಿಸಿ

ಅಗಣಿತಮಹಿಮಾಧಾರನಾಗಿ ನಿಂದು

ಮಿಗೆ ಶೋಭಿಸುವ ವಿರಾಟಮೂರುತಿಯೆ2

ಕಾರಣನೆನಿಸಿದ ಕರ್ಮನಿವೃತ್ತಿಗೆ

ಸಾರವಾದ e್ಞÁನಯೋಗ ಮಾರ್ಗವ

ನಾರದಾದಿ ಮಹಾಮುನಿಗಳಿಗರುಹಿದ

ನರನಾರಾಯಣ ಬದರಿ ಆಶ್ರಯನೇ 3

ಹಂಸಕಪಿಲ ದತ್ತಾತ್ರೇಯ ರೂಪನೆ

ಹಂಸರಹಸ್ಯಗಳೆಲ್ಲವ ಪೇಳಿ

ಸಂಶಯ ಬಿಡಿಸಿದೆ-ಜೀವಪರಮಾತ್ಮರ

ಅಂಶಗಳರುಹಿದ ಹಂಸಮೂರುತಿಯೆ4

ಅಜಪಿತ ನೀ ಗಜರಾಜನ ಸಲಹಿದೆ

ಭಜಿಸಿದ ವಾಲಖಿಲ್ಯರ ಕಾಯ್ದೆ

ಅಜಹತ್ಯವು ವೃತ್ರವಧೆಯಿಂದ ಕಾಯ್ವ ಬಿ-

ಡೌಜನ ಸಲಹಿದ ಗಜರಾಜ ವರದಾ5

ಪುರುಹೂತನ ಅಹಂಕಾರ ಖಂಡಿಸಿ

ಕಿರುಬೆರಳಲಿ ಗೋವರ್ಧನಗಿರಿ ಎತ್ತಿ

ಪರಿಪಾಲಿಸಿ ಗೋಬೃಂದವನೆಲ್ಲವ

ಸುರರಿಂದ ಪೊಗಳಿಸಿಕೊಂಡೆ ಗೋವಿಂದ6

ಬುಧರರಿಯುಲು ಆ ವೇದ ವಿಭಾಗಿಸೆ

ಸದಮಲ ಮೂರುತಿ ಸತ್ಯವತಿಯೊಳು

ಉದಯಿಸಿ ಮುದದಿಂದ ಬದರಿಯ

ಸದನದಿ ಬೋಧಿಸುತ್ತಲಿಹ ಬಾದರಾಯಣನೇ7

ಅಖಿಳಾಂಡಕೋಟಿಬ್ರಹ್ಮಾಂಡನಾಯಕ

ವಿಕುಂಠಳೆಂಬೊ ಉದರದಿ ಜನಿಸಿ

ಲಕುಮಿರೂಪಿಯಾದ ಸುಂದರಿಯ ಕೂಡ ಭೂ-

ವೈಕುಂಠ ನಿರ್ಮಿಸಿದ ವೈಕುಂಠಮೂರುತಿಯೆ 8

ಸತ್ಯವ್ರತನೆಂಬೊ ಮನುವಿನುದ್ಧರಿಸಿ

ಉತ್ತಮ ಔಷಧಿಗಳೆಲ್ಲವ ಸಲಹಿದೆ

ದೈತ್ಯನಾದ ಉನ್ಮತ್ತನ ಕೊಂದು

ಶ್ರುತಿಯ ತಂದಿತ್ತ ಮತ್ಸ್ಯಮೂರುತಿಯೆ 9

ಸುರಭಿನೆವನದಿ ಶರಧಿಮಥಿಸೆ ತಾ

ಭರದಿ ಬೆನ್ನೊಳು ಧರಿಸಿಹೆ ಮಂದರ

ಸುರರಿಗಭಯ ಕರುಣಿಸಿ ಸಲಹಿದ

ಗಿರಿಧರನೆನಿಸಿದೆ ಕಮಠರೂಪನೆ 10

ಪ್ರಳಯ ಜಲಧಿಯೊಳು ಇಳೆಯನು ಕದ್ದಾ

ಖಳಹಿರಣ್ಯನಾ ಶಿರವ ಚೆಂಡಾಡಿ

ಜಲಧಿಯ ಶೋಧಿಸಿ ಇಳೆಯನು ತಂದು

ಜಲಜಸಂಭವಗಿತ್ತ ಕ್ರೋಢರೂಪನೆ 11

ದುರುಳತನದಿ ತನ್ನ ತರಳನ ಬಾಧಿಪ

ಹಿರಣ್ಯಕಶಿಪುವಿನ ಉದರವ ಬಗೆದು

ಶರಣನಿಗಭಯವ ಕರುಣಿಸಿ ತೋರಿದ

ಸರ್ವವ್ಯಾಪ್ತನೆಂದರುಹಿದ ನರಹರಿಯೇ12

ಬಲಿಯಿಂದಪಹೃತವಾದ ಸಾಮ್ರಾಜ್ಯವ

ಸುಲಭದಿಂದಲಿ ಪುರಂದರಗಿತ್ತು

ಸಲಹಿದೆ ಒಲಿದು ಬಲಿಯ ಭಕ್ತಿಗೆ ನೀ ಬಾ-

ಗಿಲ ಕಾಯ್ದ ವಟು ವಾಮನನೆ 13

ದುರುಳತನದಿ ಆ ಹೈಹಯರೆಂಬ

ನರಪರದುರ್ಮದ ಮರ್ದಿಸಲೋಸುಗ

ಪರಶು ಪಿಡಿದು ಕ್ರೂರ ನೃಪರ ಶಿರವನೆಲ್ಲ

ತರಿದು ನಿಗ್ರಹಿಸಿದ ಭಾರ್ಗವ ಮೂರ್ತೇ 14

ಶರಧಿ ಬಂಧಿಸಿ ಸೇತುಕಟ್ಟಿ ಕಪಿ-

ವೀರರೊಡನೆ ಆ ರಾವಣನಡಗಿಸಿ ಭೂ

ಭಾರವನಿಳುಹಿಸಿ ಭೂಮಿಜೆಯನು ತಂದ ಅ-

ಸುರ ಮರ್ದನ ದಾಶರಥಿ ರಾಘವ 15

ವಸುಮತಿಭಾರವನಿಳುಹಲೋಸುಗ

ವಸುದೇವಸುತ ಶ್ರೀಕೃಷ್ಣನೆನುತಲಿ

ಶಿಶುಪಾಲಾದಿಗಳಾಂತಕನೆನಿಸಿದ

ಶಶಿಮುಖಿರುಕ್ಮಿಣಿ ಸಹಿತ ಶ್ರೀಕೃಷ್ಣ 16

ವೇದ ಕರ್ಮಗಳಿಗನರ್ಹರೆಲ್ಲರು

ಸಾದರದಿಂದಲಿ ಅಧಮರೆಸಗುತಿರೆ

ವೇದವಿರುದ್ದವಾದಗಳಿಂದಲೇ

ಮೋಹವ ತೋರಿದೆ ಬುದ್ಧಸ್ವರೂಪನೆ17

ದುರುಳತನದಿ ಇಳೆಯಾಣ್ಮರುಗಳು

ಕ್ರೂರತನದಿ ಪರಪೀಡಕರಾಗಿರೆ

ಪರಿಹರಿಸಲು ಭೂಭಾರಕ್ಕಾಗಿ ಅವ-

ತರಿಸಿ ಮೆರೆಯುವ ಕಲ್ಕಿರೂಪನೆ 18

ಏಕರೂಪ ಅನೇಕರೂಪನೆ

ಏಕಮೇವ ನೀ ಪ್ರಕಟ ಮಾಡುವೆ

ಶ್ರೀ ಕಮಲಭವ ಪಿನಾಕಿ ಪ್ರಮುಖರು

ಏಕದೇಶದಿ ಸಾಕಲ್ಯವ ತಿಳಿಯರೊ 19

ದೋಷದೂರ ಶೇಷಾಚಲವಾಸ

ಪೋಷಿಸೊ ನಿನ್ನಯ ದಾಸಜನರ ಸರ್ವ

ದೋಷಕಳೆದು ಮನೋಕಾಶದಲಿ ನಿಲ್ಲೊ

ಶೇಷಗಿರೀಶ ಶ್ರೀ ವೆಂಕಟೇಶನೆ 20

****


No comments:

Post a Comment