..
ನಾನ್ಯಾರೋ | ಶ್ರೀಹರಿ ಪೇಳೋ ನಾನ್ಯಾರೋ ಪ
ನಾನ್ಯಾರೆಂಬುದ ಪೇಳಿ ನೀನ್ಯಾರೆಂಬುದ ತಿಳುಹಿ
ಸಾನುರಾಗದಿ ಪೊರೆವ ಪ್ರಭು ನೀನೆ ಬೇರಿಲ್ಲಅ.ಪ.
ಎಲ್ಲಿಂದ ಬಂದೆ ನಾನಿಲ್ಲಿಗೆ ಮುಂದೆಲ್ಲಿಗೆ ಪಯಣ
ಇಲ್ಲಿಗೆ ಬಂದ ಕಾರಣವಾವುದಿಲ್ಲಿಂದ ಮುಂದಕೆ
ಕೊಂಡೊಯ್ಯುವುದೇನೆಂಬುದರಿಯೆ1
ಜನನಕೆ ಮೊದಲು ಇದ್ದೆಡೆ ಯಾವುದೆನಗೇಕೆ
ಜನನಗೊಂಡು ಮಾನುಷ ದೇಹ ತಳೆದನಾ
ನೆನಗೆ ಹಿತವಹ ಕಾರ್ಯವನೇನನೆಸಗಿದೆ 2
ದೇಹವೆ ಮನಸೆ ಬುದ್ಧಿಯೇ ನಾನೆಂಬುದನಾರೆಂದರಿಯೆ
ನೇಹದಿಂದಿರುವಂತರಾತ್ಮ ತೊಲಗಲು ಮುಂದೀ
ದೇಹವು ಕಸಕಿಂತ ಕಡೆಯೆನಿಪುದ ಬಲ್ಲೆ 3
ಕರ್ಮವನೆಸಗಿ ನಾನೆ ಎಂದು ಮತ್ತದರನುಭವಕೆ
ಧರ್ಮಬದ್ಧನಾಗಿ ಸುಖ ದುಃಖ ಪಡುವಂಥ
ಕರ್ಮಿ ಜೀವನು ನೀ ಸಾಕ್ಷಿ ನಿರ್ಲಿಪ್ತನು 4
ನೀನೆ ಗುರುವು ತಂದೆಯು ಬಂಧು ನೀನೇ ಸರ್ವಸ್ವ
ಏನರಿಯದಲ್ಪನ ಕೈಬಿಡದಿರು
ನೀನೆ ಗತಿ ರಘುರಾಮವಿಠಲ ತಂದೆ 5
***
****
No comments:
Post a Comment