ಧನ್ವಂತ್ರಿ ಅವತಾರಗಳು
by –ಶ್ರೀ ವಿದ್ಯಾಸಾಗರ ಮಾಧವತೀರ್ಥರು, ಮಾಧವತೀರ್ಥ ಮಠ, ತಂಬಿಹಳ್ಳಿ
ಆದಿಯಲಿ ಅಬ್ಜನಾಗಿ ನೀನವತರಿಸಿದೆ
ಅಭಿಮಂಥನ ಕಾಲದಿ ಹಸ್ತದಲಿ
ಸುಧೆಯ ಬಿಂದಿಗೆ ಧರಿಸಿ; ಅಸುರರು ಮೇಲೆ
ಬಿದ್ದದನು ಕಿತ್ತುಕೊಂಡರು; ಬಿಟ್ಟೆ ನೀನು
ಕೆಟ್ಟ ತಾಮಸ ಜನರಿಗೆ ತೊಟ್ಟು ಕೊಡ
ಅಮೃತಯೋಗ ಸಿಗದೆಂಬುದರುಹಿ ನೀನು
ಕೆಟ್ಟವರಿವರೆಂಬುದ ಜಗಕೆಲ್ಲ ತೋರಿ
ದಿಟ್ಟತನ ಬಿಟ್ಟೇ; ಬಲು ಜಗಜೆಟ್ಟಿ ನೀನು;
ಎರಡನೆಯ ದ್ವಾಪರದಿ ಅವತಾರ ಮಾಳ್ದೆ
ಧರೆಯೊಳು ಸುಧಾಂಶು ವಂಶದಿ ಧನ್ವರಾಜ
ವರ ಕುಮಾರನೆನಿಸಿದೆ ಧನ್ವಂತ್ರಿ ನೀನು
ನರರಿಗಿತ್ತೆ ಆಯುರ್ವೇದ ವರ ಚಿಕಿತ್ಸೆ
ಆದಿಯನು ವ್ಯಾಧಿಯನು ಭವವೇದೆಯನು
ಛೇದಿಸುವ ಮೂಲ ಭೇಷಜನಾದಿಪುರುಷ
ವೇದವೇದ್ಯನೆ ಧನ್ವಂತ್ರಿ ಆದಿ ವೈದ್ಯ
ಬೇದಿಸೆಮ್ಮನು ಕಾಡುವ ವ್ಯಾಧಿಗಳನು
ಹುಟ್ಟು ಸಾವ್ಗಳ ಸರಪಳಿ ಕಟ್ಟಿ ಸೆಳೆಯೆ
ಕೆಟ್ಟ ಮರುಭೂಮಿಯಲಿ ಮತಿಗೆಟ್ಟು
ಕ್ಷುತೃಡಾರ್ತಿಗಳಿಗೆ ಸಿಕ್ಕಿ ಕ್ಷೋಭೆಗೊಂಡು
ಗುರು ಮರೆತು ಸಂಚರಿಪ ದೀನ ನರನು ನಾನು
ಕರುಣಿಗಳರಸ ಧನ್ವಂತ್ರಿ ನೆರಳು ತೋರೊ
ಧರೆಯನಳೆದ ನಿನ್ನಡಿಗಳ ನೆರಳು ತೋರೊ
ಸ್ವರ್ಧುನಿಯ ಪೆತ್ತ ಚರಣದ ನೆರಳು ತೋರೊ
ಗಿರಿಯ ಭಾರವ ಪೊತ್ತಡಿ ನೆರಳು ತೋರೊ
ಉರಗಶಿರವಲಾಡಿದ ಆದಿ ನೆರಳು ತೋರೊ
ಸಿರಿತೊಡೆಯ ಮೇಲ್ಮೆರೆವಡಿಯ ನೆರಳು ತೋರೊ
ಜ್ಞಾನಸಾಗರ ಮಾಧವಾ ನಿನ್ನ ಕರುಣೆ
ಸುರಿಸುವ ಚರಣ ಕಮಲದ ನೆರಳು ತೋರೊ
***
No comments:
Post a Comment