Monday, 2 August 2021

ಲಜ್ಜೆ ಲಜ್ಜೆ ನಿನ್ನ ನಂಬಿ ಕೆಟ್ಟೆನಾನು ಮಾಡೊದೇನು ankita krishnavittala

ಲಜ್ಜೆ ಲಜ್ಜೆ ನಿನ್ನ ನಂಬಿ ಕೆಟ್ಟೆನಾನು ಮಾಡೊದೇನು ಪ

ಗೆಜ್ಜೆ ಕಟ್ಟಿದ್ದೊರೆ ಕೃಷ್ಣ ಭಜನೆಯಲ್ಲಿ ಮಾನದಲ್ಲಿ ಅ.ಪ.


ಆರು ವಲಿದು ಮಾಡೊದೇನು ಆರುಮುನಿದು ಮಾಡೊದೇನು

ಊರುಮಂದಿ ನಕ್ಕರೇನು ಚಾರು ಚಾರು ಮೆಚ್ಚಲೇನು

ಭಾರಿದೇವ ವಿಶ್ವಜನಕೆ ಹರಿಯದಾಸನೆಂದು ಇನ್ನು

ಈರ ಮತವ ಸಾರಿಸಾರಿನಲಿದು ನಲಿದು ಸುಖಿಪುದಕ್ಕೆ 1


ದುಡ್ಡು ಕಾಸುಬೇಡ ನಮಗೆ ದೊಡ್ಡತನವು ಬೇಡ ಹಾಗೆ

ಹೆಡ್ಡತನನ ಬಿಟ್ಟು ಪಿರಿಯಕೃಷ್ಣನನ್ನು ಭಜಿಸಲಿಕ್ಕೆ

ಅಡ್ಡಿಏನು ಕುರುಡು ಮನವೆ ನೆನೆದುನೆನೆದು ನೋಡುನೀನೆ

ದೊಡ್ಡತನವೆ ಸತ್ಯವೀದು ದಡ್ಡತನವೆ ದುರಭಿಮಾನ 2


ಹರಿಯದಾಸದೀಕ್ಷೆ ಪಡೆಯೆ ಸುಲಭವಲ್ಲ ಸುಲಭವಲ್ಲ

ದುರಿತ ರಾಶಿಪೋಗಿ ಶುದ್ಧ ಚಿನ್ನದಂತೆ ಆಗದೇನೆ

ಹಿರಿದು ಕಾಣೊ ಇಂಥಾ ಜನ್ಮ ಬರಿಯ ಮಾತಿಗೊಲಿಯದೇವ

ಅರಿವಿನಂತೆ ನಡೆಯದಿರಲು ತೊರೆದು ಎಲ್ಲ ದುರಭಿಮಾನ 3


ಗೆಜ್ಜೆಕಟ್ಟಿ ಕುಣಿದು ಕುಣಿಯೆ ಲಜ್ಜೆನಾಶವಾಹುದೈಯ್ಯ

ಲಜ್ಜೆನಾಶವಾಗಿ ಭಕ್ತಿಯುಕ್ತಿ ಉಕ್ಕಿಹರಿಯುತಿರಲು

ಅಬ್ಜಪೀಠ ಪಿತನುತಾನೆ ಅಪ್ಪಿಕೊಂಡು ನಲಿದುನಲಿವ

ಅಬ್ಜನಾಭ ನಲಿದು ವಲಿಯೆ ಹೆಚ್ಚುಉಂಟೆ ಅದರಕ್ಕಿಂತ 4


ಮೆರೆಯುತಿರಲು ದುಷ್ಟಕಲಿಯು ಅನ್ಯಮಾರ್ಗ ಸಾಧ್ಯವಿಲ್ಲ

ಹರಿಯ ಭಜನೆ ಒಂದೇ ದಾರಿ ಹರಿಯ ವಲಿಸೆ ಸಿದ್ಧವೀದು

ಜರಿದು ವಿಷಯ ಬೆರಸಿ ಭಕ್ತಿ ಸಿರಿಯ ರಮಣ “ಕೃಷ್ಣವಿಠಲ”

ಚರಣ ಯುಗವ ಭಜಿಸಿ ನೀನು ಮಾನ್ಯನಾಗೋ ಧನ್ಯನಾಗೊ 5

****


No comments:

Post a Comment