Monday, 2 August 2021

ಯಾತರವ ನಾನೈಯ ಇಂದಿರೇಶ ankita krishnavittala

ಯಾತರವ ನಾನೈಯ ಇಂದಿರೇಶ ಪ


ಹೋತನ ಕೊರಳೊಳಗೆ ಮೊಲೆಯಿರ್ಪ ತೆರದಲಿ ಅ.ಪ


ಗ್ರಾಸಕ್ಕಲ್ಲದೆ ನಾನು ದೇಶ ದೇಶಕೆ ಪೋಗಿ

ವಾಸಪಗೆ ಸಮರೆಂದು ದೋಶಿಗಳ ಪೊಗಳೀ

ಕಾಸುಗಳಿಸಲು ದಾಸ ವೇಷ ಹಾಕಿದ ಶೂರ

ಏಸು ಜನ್ಮವು ಕಳಿಯೆ ನಾಶವಾಗದೊ ಆಶೆ 1

ನೇಮ ನಿಷ್ಠೆಗಳಾಟ ಪರರಿಗೋಸುಗ ಹೂಡಿ

ಕೋಮಲಾಂಗಿಯರ ಮನ ಮೆಚ್ಚಿಸುತ ಜಗದೊಳಗೆ

ಹೇಮದಾಶೆಗೆ ಸೂಳೆ ಪ್ರೇಮವನ್ನು ತೋರ್ಪಂತೆ

ನಾಮಸವಿಯುಣ್ಣದೆಲೆ ಗಾಯನವ ಮಾಡುವೆನು 2

ವ್ಯಾಸಕೂಟದಿ ಬೇರೆ ದಾಸಕೂಟವು ಎಂಬ

ದೋಷವಾದವ ಮಾಡಿ ವ್ಯಾಸದಾಸರ ದ್ರೋಹ

ಗ್ರಾಸವಾದೆನು ನಾನು ಶಾಸ್ತ್ರವಾಹುದೆ ಬೇರೆ

ಭಾಷೆ ಬೇರೆಯು ಆಗೆ ಶ್ರೀಶ ಹರಿಸೋ ಇದನು 3

ಮಾನವರ ಬಹುಮಾನ ಸಾನುರಾಗದಿ ಬಯಸಿ

ನಾನು ಮೋದಿಸುವೆ ಹೀನ ಮತಗಳ ಹುಳುಕು

ಪ್ರಾಣಪತಿಮತ ಮೇಲ್ಮೆಗಾನಮಾಡೆನು ದೃಢದಿ

ಸ್ವಾನುಸಂಧಾನ ವಹೀನ e್ಞÁನಿಯೊ ನಾನು4

ಖ್ಯಾತಿ ಜೀವನಕಾಗಿ ಶಾಸ್ತ್ರವೋದಿದ ಮೂಢ

ನೀತಿ ಪೇಳುವೆ ಜನಕೆ ನೀತಿತೆರನಾನಡಿಯೆ

ಆತ್ಮಸ್ತುತಿ ಪರನಿಂದೆ ನಿತ್ಯ ನೇಮವುಯನಗೆ

ಈತರದ ಹರಿದಾಸ ಮಾತರಿಶ್ವಗೆ ದೂರ 5

ದಾನ ಧರ್ಮಗಳಿಲ್ಲ ಮೌನ ಜಪ ತಪವಿಲ್ಲ

ಹೀನಗುಣ ಬಿಡಲಿಲ್ಲ ನಾನುಯೆಂಬುವೆನಲ್ಲ

ಮಾನಿನೀ ಮನೆ ಸೊಲ್ಲು ಏನು ಬಿಡೆದಿಹೆನಲ್ಲ

ನಿನ್ನ ನಂಬಿಹೆನಲ್ಲ ನೀನು ಬಿಡೆ ಮದ್ದಿಲ್ಲ6

ಇಂತುಟಾದರು ಮೆರೆವೆ ಹಂತ ನಿನ್ನಯ ಕೃಪೆಯೊ

ಯೆಂತು ಪೇಳಲಿ ಜೀಯ ಸಂತ ಜಯಮುನಿ

ವಾಯುವಂತರದಿ ನಲಿವಂಥ “ಶ್ರೀ ಕೃಷ್ಣವಿಠಲ”ನೆ

ನಿನ್ನಂಥ ದೊರೆಯಿಲ್ಲ ಸರ್ವೋತ್ತಮನೆ ಶರಣೈಯ7

****


No comments:

Post a Comment