Monday, 2 August 2021

ಸಜ್ಜನರ ಸಂತಾಪ ಕುಲಕೆ ಮೃತ್ಯುವುಕಂಡ್ಯ ಮನವೇ ankita krishnavittala

ಸಜ್ಜನರ ಸಂತಾಪ ಕುಲಕೆ ಮೃತ್ಯುವುಕಂಡ್ಯ ಮನವೇ ಪ

ನಿರ್ಜರೇಶಗು ಹಾನಿ ತಪ್ಪದೈ ಇದರಿಂದ ಅ.ಪ.


ಅಂದು ದುರ್ಯೋಧನನು ಸಂದ ಸಭೆಯೊಳು ಪಾಂಡು

ನಂದನರ ಸತಿಮಾನ ಕಂದಿಸಲೆತ್ನಗೈಯೆ

ಇಂದುವದನೆಯ ತಾಪ ಬಂದು ಬಡಿಯಲು ಖಳಗೆ

ಬಂಧು ಬಳಗವುಸಹಿತ ಪೊಂದಿದನೆ ಯಮಸದನ 1


ತ್ರೇತೆಯಲಿ ರಾವಣನು ನೀತಿಮರೆತವನಾಗಿ

ಖ್ಯಾತ ನಂದಿಯ ನೋಡಿ ಕೋತಿ ಚೇಷ್ಟೆಯನಡಿಸೆ

ಸೀತೆ ದ್ರೋಹದಿ ಹಾಗೆ ವ್ರಾತ್ಯ ಕುಲಸಹಿತ

ತಾ ನಾಥ ರಾಮನ ಶರಕೆ ತುತ್ತಾಗಿ ಪೋದ ಖರೆ 2


ಇಂದ್ರ ನೆನಿಸಿದ ನಹುಷ ಪೊಂದಿದನು ಸರ್ಪತ್ವ

ಕುಂದದಾ ಯಾದವರು ಪೊಂದಿದರು ಕುಲನಾಶ

ಚಂದ್ರಮೌಳಿಯ ಅಂಶ ಚಂಡಮುನಿ ದೂರ್ವಾಸ

ನೊಂದು ಧಾವಿಸಿ ಜಗದಿ ಬಂದು ನಿಂತುದನರಿಯ 3


ಗರವ ಕುಡಿಯಲಿಬಹುದು ಶರಧಿ ಧುಮುಕಲಿಬಹುದು

ಉರಿಯ ನುಂಗಲಿ ಬಹುದು ಉರಗವನು ಪಿಡಿಯಬಹುದು

ಹರಿಯ ಶರಣರ ದ್ರೋಹ ತಿರುಗಿದರು ಮುರ್ಲೋಕ

ಹರಿಸಲಾಗದು ಅವರೆ ಕರುಣಗೈಯದೆ ಮತ್ತೆ 4


ಭಕ್ತವತ್ಸಲ ಹರಿಯು ಭಕ್ತತಾಪವ ಸಹಿಸ

ಶಕ್ತಿಸಾಹಸ ಜರಿದು ಉಕ್ತಿಲಾಲಿಸಿ ಬೇಗ

ಕರ್ತೃ ಹರಿಯೆಂದರಿತು ಭಕ್ತರನು ಸೇವಿಸುತ

ನಿತ್ಯದೊರೆ “ಶ್ರೀಕೃಷ್ಣವಿಠಲ” ಕರುಣವ ಘಳಿಸು 5

****


No comments:

Post a Comment