ರಾಗ: ಮಧ್ಯಮಾವತಿ ತಾಳ: ಆದಿ
ಪದುಳದಿಂದಲಿ ಪೇಳುವೆ ಲಾಲಿಸುವುದು ಪಾವನಕರವಿದು ಪ
ಮುದದಿ ಸುಧೀಂದ್ರರ ಬಳಿಯಲಿ ಗುರುವಾರ
ಸುಧಾ ಪಾಠವನೋದಿದಬಗೆಯನು ಅ.ಪ
ಗುರುಗಳಾ ಎದುರಲಿ ತಾವ್‍ಕುಳಿತು ಗುರುಮುಖದಿಂದ
ಬರುವಾ ವಾಕ್ಯಗಳೊಳಗೊಂದಿನಿತು ಬಿಡದಂದದಿ ಮನ
ಸ್ಥಿರವಾಗಿನಿಲಿಸಿ ಕೇಳುತಲಿಂತು ಭಾವವತಾವರಿತು
ಧೃತ
ನಿರುತಮನನದಿಂ ಸ್ಫುರಿತಾರ್ಥಗಳನು
ಇರುಳುಕಾಲದಲಿ ತರಗೆಲೆದೀಪದ
ನೆರೆವಿಲಿ ಬರೆಯುತ ಪರಿಮಳವೆಂಬುವ
ವರವ್ಯಾಖ್ಯಾನವ ವಿರಚಿಸುತ್ತಿದ್ದರು 1
ಸಹಪಾಠಿಗಳೊಡನಾಡದೆ ಸರ್ವರಮನನರತರಾಗಿರೆ ಅವರು
ಸಹನೆಯಿಲ್ಲದೆ ಅದರನುಸಂಧಾನ ತಾವರಿಯದೆ ಬಲು
ಕುಹಕದಿಂದವರಿಗೆ ಅಪಮಾನ ಮಾಡಲು ಅನುದಿನ
ಧೃತ
ಬಹುವಿಧದಲಿ ದೂಷಿಸುತಲಿ ಚಾಡಿಯ
ವಹಿಲದಿ ಪೇಳುತಲಿರೆ ಯತಿವರ್ಯರು
ಸುಹಸಿತಮುಖರಾಗಿ ಕೇಳುತಲೊಂದುದಿನ
ಸಹಜವಿಷಯವವರರಿವಿಗೆ ತಂದರು 2
ಒಂದು ದಿನ ಪಾಠದರೊಂದೆಡೆಯೊಳು ಯತಿಶೇಖರರು ಬೇ-
ಕೆಂದು ನಿಜಶಿಷ್ಯರ ಪರೀಕ್ಷಿಸಲು ವಿವರಣಮಾಡದೆ
ಸಂದೇಹ ತೋರಿಸಿ ತಾವ್‍ಬಿಡಲು ಆದಿನದಿರುಳು
ಧೃತ
ಎಂದಿನಂದದಲಿ ವೇಂಕಟಾರ್ಯರು
ಅಂದಿನ ಪಾಠಕೆ ಕುಂದದ ವ್ಯಾಖ್ಯಾನ
ಚೆಂದದಿ ಬರೆದಿಟ್ಟು ಸಂದನಿದ್ರೆಯೊಳಿರೆ
ಬಂದರಲ್ಲಿಗೆ ಯತೀಂದ್ರ ಸುಧೀಂದ್ರರು 3
ವರಶಿಷ್ಯನ ಬಳಿಯಲಿ ಪರಿಕಿಸಲು ಗುರುವರ್ಯರ ದೃಷ್ಟಿಗೆ
ಬರೆದ ಪತ್ರಗಳ ವಹಿ ಕಾಣಿಸಲು ಕರದಲ್ಲಿ ತೆಗೆದು
ಪರಿಶೀಲಿಸಲಾಗತಿಹರುಷದೊಳು ಮನಉಬ್ಬುತಲಿರಲು
ಧೃತ
ನೆರ ವಾತ್ಸಲ್ಯದಿ ಶಿಷ್ಯನ ನೋಡಲು
ಧರೆಯಮೇಲೆ ಹೊದ್ದಿಕೆಯಿಲ್ಲದೆ ಮಲ-
ಗಿರುವುದ ಕಂಡತಿಮರುಕದಿ ಶಾಲನು
ತ್ವರಿತದಿ ಹೊದ್ದಿಸಿ ಪೊರಟರು ಗುರುಗಳು 4
ಮಾರನೆಯದಿನ ಪಾಠದ ಸಮಯದಲಿ ಹಿಂದಿನಪಾಠಕೆ
ಯಾರು ಅರ್ಥವ ಪೇಳದೆ ಮನದಲಿ ಇರುತಿರೆ ಯತಿವರ
ತೋರಿಸಿ ಪೇಳಿದವರವರೆದುರಲ್ಲಿ ಪರಿಮಳ ವ್ಯಾಖ್ಯಾನ
ಧೃತ
ಸ್ವಾರಸ್ಯವು ಮನಕೇರಲು ಶಿಷ್ಯರು
ಭೂರಿಕ್ಷಮಾಪಣೆ ಬೇಡಲು ವೇಂಕಟ
ಆರ್ಯರ ಪರಿಮಳಾಚಾರ್ಯರೆಂದೆನ್ನುತ
ಸಾರಿಕರೆದರು ಕರಿಗಿರೀಶನ ಸ್ಮರಿಸುತ 5
***
No comments:
Post a Comment