..
kruti by Nidaguruki Jeevubai
ಲಕ್ಷ್ಮೀದೇವಿ ಕಮಲಾಕ್ಷಿ ತಾಯೆ
ಸೂಕ್ಷ್ಮಮತಿಯನಿತ್ತು ಪೊರೆದು ರಕ್ಷಿಪದೇವಿ ಪ
ಹರಿಯರಾಣಿ ಭುಜಗವೇಣಿ
ಪರಿಪರಿಯ ಕ್ಲೇಶಗಳಳಿವ
ದುರಿತದೂರನ ಕರಪಿಡಿಯುತ ಬಾ
ಪರಿ ಪರಿ ವೈಭವದಿ 1
ವಂದಿಸುವೆ ನಿನ್ನ ಪದಕೆ
ಅಂಬುಜಾಕ್ಷಿ ಕರುಣವ ಮಾಡಿ
ಕಂಬು ಕಂಧರನೊಡಗೂಡುತ ಬಾ
ಸಂಭ್ರಮ ಸೂಸುತಲಿ 2
ಗೆಜ್ಜೆ ಪೈಜನಿ ಪಾಡಗರುಳಿಯು
ಸಜ್ಜಾಗಿಹ ಕಾಲುಂಗುರ ಧ್ವನಿಯ
ಮೂರ್ಜಗದೊಡೆಯನ ಕರಪಿಡಿಯುತ ಬಾ
ಸಜ್ಜನ ರಕ್ಷಕಳೆ 3
ನಡುವಿಗೆ ನವರತ್ನದ ಪಟ್ಟಿ
ಬಿಡಿಮುತ್ತುಗಳುದುರುವ ಪೀತಾಂಬರ
ಬಡನಡÀು ಬಳುಕುತ ಅಡಿ ಇಡು ಬಾ ನಿ-
ನ್ನೊಡೆಯನ ಕೂಡುತಲಿ 4
ಕರದಲಿ ಕಂಕಣ ಹಾಸರ ಬಳೆಗಳು
ಬೆರಳಲಿ ಉಂಗುರ ಥಳಥಳಿಸುತಲಿ
ಗರುಡಗಮನ ನೊಡಗೂಡುತ ಬಾ ಬಾ
ಗರುವವು ಮಾಡದಲೆ5
ವಂಕಿನಾಗಮುರುಗಿ ಕರದಲಿ
ಬಿಂಕದಿ ಪಿಡಿದಿಹ ತಾವರೆ ಕುಸುಮವು
ಪಂಕಜಾಕ್ಷನೊಡಗೂಡುತ ಮನ
ಶಂಕೆಯು ಮಾಡದಲೆ6
ಕಠ್ಠಾಣಿಸರ ಪದಕಗಳ್ಹೊಳೆಯುತ
ಕಟ್ಟಿದ ಉಂಗುರಡ್ಡಿಕಿ ಶೋಭಿಸುತ
ಚಿತ್ತಜನಯ್ಯನನೊಡಗೂಡುತ ಬಾ
ಮತ್ತೆ ಹರುಷದಲಿ 7
ಥಳಥಳಿಸುವ ಗಲ್ಲಕೆ ಅರಿಶಿನವು
ನಲಿಯುವ ಮೂಗುತಿ ಮುಖುರ ಬುಲಾಕು
ಹೊಳೆವ ಮೀನು ಬಾವಲಿ ಚಳತುಂಬುಗಳ್ಹೊಳೆಯುತ
ಘಳಿಲನೆ ಬಾರಮ್ಮ 8
ಕುರುಡಿ ಬಾವಲಿ ಬುಗುಡಿ ಚಂದ್ರ
ಮುರುವಿನ ಕಾಂತಿ ಮುಗುಳ್ನಗೆ ಮುಖವು
ಉರುಗಾದ್ರೀಶನ ಕರಪಿಡಿಯುತ ಬಾ
ಕರೆ ಕರೆ ಮಾಡದಲೆ 9
ಘಣೆಯಲಿ ಕುಂಕುಮ ಬೈತಲೆ ಬಟ್ಟು
ಥಳಥಳಿಸುವ ಕಣ್ಣಿಗೆ ಕಪ್ಪಿಟ್ಟು
ಎಳೆಬಾಳೆಯ ಸುಳಿಯಂದದಿ ಬಳುಕುತ
ಘಳಿಲನೆ ಬಾರಮ್ಮ10
ಕೆಂಪಿನ ರಾಗುಟಿ ಜಡೆ ಬಂಗಾರವು
ಸಂಪಿಗೆ ಮಲ್ಲಿಗೆ ಸರಗಳ ಮುಡಿದು
ಸೊಂಪಿಲಿ ಶ್ರೀ ಹರಿಯೊಡನಾಡುತ ನಲಿಯುವ
ಸಂತಸ ತೋರಮ್ಮ11
ಇಂದಿರೆ ಶ್ರೀರಮೆ ಭಾರ್ಗವಿಯೆ
ನಂದತ್ರಯಾ ಸದಾಸುಶೀಲೆ
ಸುಗಂಧಿ ಸುಂದರಿ ಮಂದಗ ಮನೆಯೆ
ಚಂದದಿ ಬಾರಮ್ಮ 12
ಸುತ್ತೆಲ್ಲ ಸುರಸ್ತ್ರೀಯರು ಮುತ್ತಿನ
ಛತ್ರ ಚಾಮರದರ್ಪಣ ಪಿಡಿದು
ನೃತ್ಯಗಾಯನ ಮಾಡುತ ಕರೆವರು
ಸತ್ವರ ಬಾರೆನುತ 13
ಶ್ರಮ ಪರಿಹರಿಸೆನುತಲಿ ಬೇಡುವೆನು
ಮಮತೆಲಿ ಕರಗಳ ಮುಗಿಯುತ ಬೇಡಲು
ಕಮಲನಾಭ ವಿಠ್ಠಲನೊಡನೆ ಶ್ರೀ-
ಕಮಲೆಯು ಬರುತಿಹಳು14
***
No comments:
Post a Comment