Sunday, 5 December 2021

ತಿರುಪತಿ ಯಾತ್ರೆಯ ಮಾಡಿ ತಿರುಪತಿ ankita kamalanabha vittala TIRUPATI YAATREYA MAADI TIRUPATI



kruti by Nidaguruki Jeevubai


ತಿರುಪತಿ ಯಾತ್ರೆಯ ಮಾಡಿ ತಿರುಪತಿ ಪ


ತಿರುಪತಿಯಾತ್ರೆಯ ಮಾಡಿ ಮನದ

ದುರಿತಪಾಪಗಳನೀಡಾಡಿ ಆಹ

ಸ್ಮರಕೋಟಿ ತೇಜನ ದರುಶನಲಾಭವು

ದೊರಕಿದ ಸುಜನರ ಚರಿತೆಯ ಕೇಳುತ್ತ ಅ.ಪ

ಬೆಟ್ಟದ ದರುಶನದಿಂದ ಪಾಪ

ಸುಟ್ಟು ಹೋಗುವದಿದು ಚಂದ ಮೆಟ್ಟು

ಮೆಟ್ಟಿಲನೇರುವ ವೃಂದ ಜನ

ಸೃಷ್ಟಿಗೊಡೆಯ ಗೋವಿಂದ ಆಹಾ

ದಿಟ್ಟಮನದಿ ಪರಮೇಷ್ಠಿಪಿತನ ಪಾಡಿ

ಗಟ್ಯಾಗಿ ಗೋವಿಂದ ಗೋವಿಂದನೆನುವರು1


ಗಾಳಿಗೋಪುರವನ್ನೆ ದಾಟಿ ಭಕ್ತ-

ರಾ ಮಂಟಪಕೆ ಉಂಟೆ ಸಾಟಿ ತಾಳ

ಮೇಳದವರ ಗಲಾಟೀಯಿಂದ

ಶೋಭಿಪ ಪವನನಕೋಟಿ ಕೇಳಿ

ನೋಡುತ್ತ ಭಕುತಿಸೂರ್ಯಾಡುತ್ತ ಮಹಿಮೆ ಕೊಂ-

ಡಾಡುತ್ತ ಪಾಡುತ್ತ ಕುಣಿವ ಸಜ್ಜನರೆಲ್ಲ 2


ಸ್ವಾಮಿ ಪುಷ್ಕರಣಿಯ ಸ್ನಾನ ಮಾಡಿ

ಆ ಮಹವರಹದೇವರನ್ನ ಕಾಮ-

ಧೇನೆಂಬ ಶ್ರೀ ಗುರುಗಳನ್ನ ನೋಡಿ

ಆ ಮಹಾ ಅಶ್ವತ್ಥರಾಜನ್ನ ಸ್ತುತಿಸಿ

ನೇಮದಿ ದಿಗ್ಗಾವಿ ಆಚಾರ್ಯರಿಗೆ ನಮಿಸಿ

ಶ್ರೀಧರನಾಲಯ ದ್ವಾರಕ್ಕೆ ಪೋಗಲು 3


ಮೂರು ದ್ವಾರಗಳನ್ನೆ ದಾಟಿ ಮು-

ರಾರಿಯ ಗುಡಿಸುತ್ತ ಕೋಟೆಯಲ್ಲಿ

ಸಾರುವ ಭಕುತರ ಭೇಟಿಯಿಂದ ಅ-

ಪಾರ ಜನುಮದ ಪಾಪಮೂಟೆ ಪೋಗಿ

ಬೇಗದಿ ವಿಮಾನ ಶ್ರೀನಿವಾಸನ ನೋಡಿ

ಸಾಗರಶಯನನ ದರುಶನ ಕೊಡುಕೊಡು ಎಂದು 4


ಕೊಪ್ಪರಿಗೆಯು ಮನೆಯಂತೆ ಹಣ

ತಪ್ಪದೆ ಸುರಿಯುವರಂತೆ ನ-

ಮ್ಮಪ್ಪ ವೆಂಕಟಸ್ವಾಮಿಯಂತೆ

ತಪ್ಪನಾಡುವರ ಶಿಕ್ಷಿಪನಂತೆ ಆಹಾ

ಕ್ಷಿಪ್ರದಿ ಶ್ರೀಧರನಪ್ಪಣೆಯಂದದಿ

ಅಪ್ರಮೇಯನ ಸೇವೆಗೊಪ್ಪುವ ಸುಜನರು 5


ಹೇಮದ್ವಾರದಿ ನಿಂತ ಜನರು ನಮ್ಮ

ಸ್ವಾಮಿ ಶೃಂಗಾರ ನೋಡುವರು ಶ್ರೀನಿ-

ವಾಸನೆ ಸಲಹು ಎಂಬುವರು ಪಾಹಿ

ಪಾಹಿ ಶ್ರೀಪತಿ ಎನ್ನುತಿಹರು ಶ್ರೀಶ

ಗೋವಿಂದ ಗೋವಿಂದ ಗೋವಿಂದ ಮಾಧವ

ಮಾತುಳಾಂತಕ ದೇವ ಮಾತು ಲಾಲಿಸು ಎಂದು6


ಚರಣದಂದಿಗೆ ಗೆಜ್ಜೆವಲಿಯೆ ಪೊನ್ನ

ಸರಪಳಿ ಪಾಡಗ ನಲಿಯೆ ಒಳ್ಳೆ

ಜರದ ಪೀತಾಂಬರ ಹೊಳೆಯೆ ಪಟ್ಟೆ

ವರವಲ್ಲಿ ಹೊಳೆಯುತ್ತ ಮೆರೆಯೆ ಆಹ

ಸರಗಳು ವಲಿಯುತ್ತ ಪದಕಂಗಳ್ಹೊಳೆಯುತ್ತ

ಉರದಲ್ಲಿ ಶ್ರೀದೇವಿ ಇರುವ ವೈಭವ ನೋಡಿ7


ವರಶಂಖು ಚಕ್ರ ಹಸ್ತದಲಿ ದಿವ್ಯ

ಸಿರದಿ ಕಿರೀಟ ಮೆರೆಯುತಲಿ ಪಟ್ಟೆ

ತಿಲುಕ ಕಸ್ತೂರಿ ಹೊಳೆಯುತಲಿ ಥಳ

ಥಳ ಹೊಳೆವ ಮುಖಕಾಂತಿಯಲಿ ಅಹ

ಕಡೆಗಣ್ಣ ನೋಟದಿ ಜಗವಮೋಹನ ಮಾಳ್ಪ

ಅಗಣಿತ ಮಹಿಮನ ಸುಗುಣವ ಪಾಡುತ್ತ 8


ಕರುಣಿಗಳರಸನೆ ದೇವ ತನ್ನ

ಶರಣು ಹೊಕ್ಕವರನ್ನೆ ಕಾವ ತನ್ನ

ಭಜಕರಿಗಭಯವ ನೀವ ಇನ್ನು

ಸರಿಯುಂಟೆ ಶ್ರೀರಮಾದೇವ ಅಹ

ಪರಿಸರನೊಡೆಯನ ನಿರುತದಿ ಧ್ಯಾನಿಸಿ

ದುರಿತಗಳಳಿದು ಸದ್ಗತಿಯ ಪಡೆವರೆಲ್ಲ 9


ಕಾಲಹರಣ ಮಾಡದಂತೆ ತ್ರಿ-

ಧಾಮನ ಸ್ಮರಿಸುವ ಚಿಂತೆಯಲ್ಲಿ

ಆಲಸ್ಯ ತೊರೆದಿಹರಂತೆ ಶ್ರೀನಿ-

ವಾಸನೆ ಇದಕ್ಹೊಣೆಯಂತೆ ಅಹ

ಕಾಲಕಾಲಕೆ ತಕ್ಕ ಲೀಲೆಯ ತೋರುವ

ಶ್ರೀಲಲಾಮನ ಪಾದ ಧ್ಯಾನಿಪ ಸುಜನರು 10


ಹತ್ತವತಾರದ ಹರಿಯು ತನ್ನ

ಭಕ್ತರು ಸ್ತುತಿಸುವ ಧ್ವನಿಯ ಕೇಳಿ

ಚಿತ್ತದಿ ನಲಿಯುವ ಪರಿಯು ಸುರರು

ವಿಸ್ತರಿಸುವ ದಿನಚರಿಯು ಅಹ

ಕಸ್ತೂರಿ ತಿಲುಕದ ಕಮಲನಾಭ ವಿಠ್ಠಲ

ಭಕ್ತರ ಸ್ತುತಿಸಲು ಮತ್ತವರಿಗೊಲಿಯುವ 11

***


No comments:

Post a Comment