Thursday 5 August 2021

ಅಪಮೃತ್ಯು ಪರಿಹರಿಸೊ ಶ್ರೀ ವೆಂಕಟೇಶ ankita kamalanabha vittala

 ..

kruti by Nidaguruki Jeevubai

ಅಪಮೃತ್ಯು ಪರಿಹರಿಸೊ ಶ್ರೀ ವೆಂಕಟೇಶ

ಅಪರಾಧವೆಣಿಸದಲೆ ಉದ್ಧರಿಸೊ ಶ್ರೀಶಾ ಪ


ಅಪರಾಧ ಸಹಸ್ರಗಳ ಮಾಡುತನುದಿನದಿ

ಅಪರಿಮಿತ ಮಹಿಮ ನಿನ್ನನ್ನು ಸ್ಮರಿಸದೆ

ಚಪಲ ಬುದ್ಧಿಗಳಿಂದ ತಪಿಸಿದೆನೊ ಭವದೊಳಗೆ

ಗುಪಿತದಿಂ ಸಲಹಯ್ಯ ಪಿತನೆ ಕೈ ಮುಗಿವೆ 1

ಪೂರ್ವಕಾಲದೊಳೊಬ್ಬ ರಾಜಶೇಖರ ತನ್ನ

ಮೋಜಿನಿಂದಲೆ ನಿನ್ನ ಸ್ಮರಣೆ ಮರೆತು

ಮೂರ್ಜಗತ್ಪತಿಯ ಪೂಜಿಸದೆ ಕಾಲವ ಕಳೆಯೆ

ಆ ಜವನ ದೂತರೆಳೆ ತಂದರೈ ಹರಿಯೆ 2


ಅಂದು ಯಮ ಭಟರುಗಳ ಬಂಧನದೊಳಿರೆ ನೃಪನು

ಚಂದದಿಂ ಪಾಪಕರ್ಮಗಳ ನೋಡೆ

ತುಂಬಿದ ಪಾಪವೆ ಬಹಳವಾಗುತಿರಲು

ಇಂದಿರೇಶನ ಪೂಜೆ ಒಂದೆ ದಿನವೆನಲು 3


ಘುಡು ಘುಡಿಸಿ ಯಮಧರ್ಮ ಕಡುಕೋಪವ ತಾಳಿ

ಬಿಡದೆ ಇವನಿಗೆ ಶಿಕ್ಷೆ ಕೊಡಿರಿ ಎಂದೆನಲು

ನುಡಿದರಾ ಭಟರುಗಳು ಮೊದಲು ಯಾವದು ಎನಲು

ಮೊದಲು ಪುಣ್ಯವು ಎಂದು ನುಡಿದನಾ ನೃಪನು4


ತಕ್ಷಣವೆ ವಿಷ್ಣುದೂತರು ಬಂದು ನೃಪವರನ

ಚಿತ್ತಜನಯ್ಯನಿಹ ಉತ್ತಮ ಸ್ಥಳಕೆ

ಸತ್ಯವಂತರು ಬಹಳ ಕೀರ್ತಿಸುತ ಶ್ರೀಹರಿಯ

ಮತ್ತೆ ವೈಕುಂಠದಲಿ ಮೆರೆಸಿದರು ಕ್ಷಣದಿ 5


ಒಡನೆ ಪುಣ್ಯವು ಮುಗಿಯೆ ನಡಿ ನರಕಕೆಂದೆನಲು

ಒಡೆದು ಎದೆ ನಡುಗಿ ಕಳವಳಿಸಿ ನೃಪನು

ನುಡಿದ ಹೀಗೆನುತ ಘರ್ಜಿಸುತ ಯಮದೂತರಿಗೆ

ಬಿಡಿರಿ ನಿಮ್ಮಯ ಸತ್ಯ ನಿಜವಲ್ಲವೆನುತ 6


ನಾರಾಯಣನ ನೋಡಿದವರಿಗೆ ನರಕ ಭಯ

ನಾರದರೆ ಈ ರೀತಿ ಸಾರಿ ಡಂಗುರವ

ಹೀಗೆನಲು ನುಡಿಕೇಳಿ ಸಾರಿ ಪೇಳಿದರಾಗ

ದೇವ ದೇವನೆ ಇದಕೆ ಉಪಾಯವೇನೆನಲು7


ಪರಮ ಕೃಪಾಳು ಹರಿ ಪರಮ ಭಕ್ತರನೆಲ್ಲ

ಕರೆದು ಏಕಾಂತದಲಿ ಸರಸವಾಕ್ಯದಲಿ

ಇರಲಿ ಈ ನರನ ವಾಕ್ಯದ ಜಾಣತನವನು

ಸುರ ಲೋಕದವರು ಸ್ತುತಿ ಮಾಡಲೆಂದೆನಲು8


ಹೀಗೆ ಭಕ್ತರ ಪೊರೆದೆ ಭಾಗವತ ಜನಪ್ರಿಯ

ಬಾಗಿ ನಮಿಸುತಲಿ ವಂದನೆ ಮಾಡುವೆ

ನಾಗಶಯನನೆ ನಿನ್ನ ಮಹಿಮೆಗೆಣೆಗಾಣೆನೊ

ಬೇಗ ಪಾಲಿಸು ಕಮಲನಾಭ ವಿಠ್ಠಲನೆ 9

***


No comments:

Post a Comment