..
ರುದ್ರದೇವರು
kruti by Nidaguruki Jeevubai
ಯಾರಿಗಾಗಿ ಈ ಪರಿ ವೈರಾಗ್ಯವು
ವೀರ ವೈಷ್ಣವ ಭಕ್ತಾಗ್ರಣಿಯೆ ಪ
ಮಾರಹರನೆ ಮನ್ಮಥನ ವೈರಿಯೆ ಮನ-
ಸಾರ ಶ್ರೀರಾಮ ನಾಮವ ಜಪಿಸುವದಿದು ಅ,ಪ
ಮುತ್ತು ಮಾಣಿಕ್ಯದ ಕಿರೀಟವು ಧರಿಸದೆ
ನೆತ್ತಿಲಿ ಕೆಂಜೆಡೆ ಸುತ್ತಿಹುದು
ಹಸ್ತದಿ ಶಂಖು ಚಕ್ರಗದೆ ಪದುಮವು ಬಿಟ್ಟು
ಉತ್ತಮ ಡಮರು ತ್ರಿಶೂಲ ಪಿಡಿವುದಿದು 1
ನೊಸಲಲಿ ಕಸ್ತೂರಿ ತಿಲಕವನಿಡದಲೆ
ಭಸುಮವ ಲೇಪಿಸುವುದು ತರವೆ
ಕುಸುಮಲೋಚನೆ ಪ್ರಿಯ ಸಖನಾಗಿರುತಿರೆ
ಎಸೆವ ಕಪಾಲ ಪಿಡಿದು ಬೇಡುವದಿದು 2
ದುಂಡು ಮುತ್ತಿನ ಹಾರ ಪದಕಗಳಿರುತಿರೆ
ರುಂಡಮಾಲೆಯ ಕೊರಳೊಳು ತರವೆ
ತಂಡ ತಂಡ ಪರಮಾನ್ನ ಭಕ್ಷಗಳಿರೆ
ಉಂಡು ತೇಗದೇ ವಿಷಪಾನ ಮಾಡುವದಿದು3
ಭರ್ಜರಿ ಪೀತಾಂಬರ ಉಡುವುದು ಬಿಟ್ಟು
ಕರಿಯ ಚರ್ಮನುಡುವುದು ತರವೆ
ಪರಿ ಪರಿ ರತ್ನಾಭರಣಗಳಿರುತಿರೆ
ಉರಗಗಳಿಂದಲಂಕೃತನಾಗಿರುವದು 4
ಭೃತ್ಯರು ಸೇವೆಗೆ ಬೇಕಾದವರಿರೆ
ಮತ್ತೆ ಪಿಶಾಚ ಗಣಗಳೇತಕೆ
ಹಸ್ತಿ ತುರಗ ಪಲ್ಲಕ್ಕಿ ಪುಷ್ಪಕವಿರೆ
ಎತ್ತನೇರಿ ಚರಿಸುವುದುಚಿತವೆ ಶಂಭೊ 5
ಸಿರದಲಿ ಗಂಗೆಯು ಸ್ಥಿರವಾಗಿರುತಿರೆ
ಪರ್ವತರಾಜಕುವರಿಯೇತಕೆ
ಅರಮನೆ ವಾಸಕೆ ಯೋಗ್ಯವಾಗಿರುತಿರೆ
ಗಿರಿ ಕೈಲಾಸ ಪರ್ವತದಿ ವಾಸಿಸುವದು 6
ಭಕ್ತರು ಭಕುತಿಲಿ ಪಾಡಿ ಕೊಂಡಾಡಲು
ನೃತ್ಯವ ಮಾಡುತ ಹರುಷದಲಿ
ಕರ್ತೃ ಶ್ರೀ ಕಮಲನಾಭ ವಿಠ್ಠಲನೆಂದು
ಪತ್ನಿಗೆ ಉಪದೇಶ ಮಾಡುವದಿದು 7
***
No comments:
Post a Comment