..
ಮಾಕಾಂತೆಯರಸನ ತೋರೆನಗಮ್ಮ
ಸಾಕುವ ಸರಸನ ತೋರೆ ಪ.
ಕಣ್ಣೆರಡು ಸಾಸಿರುಳ್ಳವನಂಗದಿ
ಕಣ್ಣಮುಚ್ಚಿ ಮಲಗಿಪ್ಪನ
ಹೊನ್ನು ಮಣ್ಣಿನ ರಾಶಿಯಿಂದ ಕೂಡಿಪ್ಪನ
ಮಣ್ಣ ಕೂಡಿದ ದಿವ್ಯಕಾಯನ 1
ಮಣ್ಣಿನ ದೇವರ ಮುಖದಿಂದ
ಮಣ್ಣಿಗೆ ಸೆಣಸುವರ ಭುಜದಿಂದ
ಮಣ್ಣ ಪಾ(ನಾ?)ಡುವರ ತೊಡೆಯಲ್ಲಿ ಮೂಡಿ ಮತ್ತೆ
ಮಣ್ಣ ಚರಣದಿ ಪುಟ್ಟಿಸಿದನ 2
ಕಣ್ಣ ಮುಚ್ಚದನ ಕಣ್ಣ ತೋರದನ
ಹೆಣ್ಣಾಳಿನುರುಬಿನಲಿ ಮುಕ್ಕಣ್ಣನ
ಮಣ್ಣನಳೆದು ಮಣ್ಣಿನರಸನೊರೆಸಿದ
ಮಣ್ಣಿನ ಮಗಳನಾಳಿದನ 3
ಮಣ್ಣ ಪೊತ್ತನಧರಿಸಿದ ಚಿಣ್ಣನ
ಮಣ್ಣ ಮೆದ್ದ ಸಣ್ಣ ಬಾಯೊಳು
ಮಣ್ಣನೆ ತೋರಿದ ನಂದನರಾಣಿಗೆ
ತಲ್ಲಣ ಹಬ್ಬವ ಕೊಟ್ಟ ಧೀರ4
ಕನ್ನಗಳ್ಳರ ಕೊಂದು ಕಣ್ಣಿಲ್ಲದವರಿಗೆ
ಕಣ್ಣ ತರಿಸಿಕೊಟ್ಟ ಚದುರನ
ಕಣ್ಣಿಲ್ಲದವನಿಗೆ ಕಣ್ಣ ಕೊಟ್ಟನಂತ
ಕಣ್ಣುಳ್ಳ ರೂಪವ ತೋರ್ದನ 5
ಹೆಣ್ಣ ಮೋಹಿಸುವನ ಸುಟ್ಟುರಿ-
ಗಣ್ಣನ ಮರುಳು ಮಾಡಿದನ
ಹೆಣ್ಣನುಂಗುಟದಿ ಪಡೆದು ತಮ್ಮಣ್ಣನ
ಮಣ್ಣಿನೊಡೆಯ ಮಾಡಿಸಿದನ 6
ಮಣ್ಣಿಗಾಗಿ ಬಂದ ಮಣ್ಣನಾಳಿದ ದುರ್ಜನ
ದಾನವರ ಕೊಂದನ
ಹೆಣ್ಣು ಮಣ್ಣೊಲ್ಲದ ವಾದಿರಾಜನಿಗೆ
ಪ್ರಸನ್ನನಾದ ಹಯವದನನ 7
***
No comments:
Post a Comment