ಬಾಲನೇನೆ ನಿನ್ನ ಮಗನು ಗೋ-
ಪಾಲಕೃಷ್ಣನು ಪ.
ಬಾಲನೇನೆ ನಿನ್ನಮಗನು
ಬಾಲಕಿಯರಾಲಯ ಪೊಕ್ಕು
ಶೀಲಗೆಡಿಸಿ ಸಾಲದೆ ಗೋ-
ಕುಲವನು ಸೂರೆಮಾಡಿದ ಅ.ಪ.
ಕಾಲು ಇಲ್ಲದೆ ನಡೆವನೀತ ಮೇಲುಗಿರಿಯ ಬೆನ್ನಲಾಂತ
ಮೂಲಬೇರ ಮೆಲ್ಲುವಾತ ಜ್ವಾಲರೂಪಿ ಸ್ಥೂಲಕಾಯ
ಬಾಲನಾಗಿ ಭೂಮಿಬೇಡಿದ ಹಾಲು ಕುಡಿಸಿದ ತಾಯ
ತಲೆಯ ಎರವು ಮಾಡಿದ ವಲ್ಕಲವನುಟ್ಟು ಅಡವಿ
ಆಲಯವ ತಿರುಗಿದ ಶ್ರೀರಾಮಚಂದ್ರ
ನೀಲವರ್ಣ ನಿಗಮಗೋಚರ
ವೇಲಾಪುರದ ಸೋರುಮುಡಿಯ
ಬಾಲೆಯನು ಸೋಲಿಸಿ ಕಾಲದಲ್ಲಿ ಕಲ್ಕ್ಯನಾದ 1
ಮಡುವಿನಲ್ಲಿ ಅಡಗಿಯಿರುವ ಪೊಡವಿ ದೊಡ್ಡನೆತ್ತಿ ಪೊರೆವ
ಅಡವಿಯಲ್ಲಿ ಆಡುತಿರುವ ಕಡುಕ್ರೂರ ಹಿಡಿದ ಹಟವ
ಹುಡುಗನಾಗಿ ಪೊಡವಿ ಬೇಡಿದ ಕೊಡಲಿ ಪಿಡಿದು
ಕಡಿದು ಕ್ಷತ್ರಿಯರ ಕುಲವ ತರಿದನೆ ರಾವಣಾದಿ
ಪಡೆಯನೆಲ್ಲ ಸಂಹರಿಸಿದ ಶ್ರೀರಾಮಚಂದ್ರ
ತುಡುಗು ಮಾಡಿ ಗಡಿಗೆ ಪಾಲ ಕುಡಿದು ಕಡಹದಲ್ಲಿ ಅಡಗಿ
ಬಿಡದೆ ತ್ರಿಪುರವ್ರತಕೆಡಿಸಿ ಪಿಡಿದು ತೇಜಿಯ ನಡೆಸುತಿಹನು 2
ನೀರಪೊಕ್ಕು ವೇದತಂದು ಭಾರಪೊತ್ತು ಬೆನ್ನಲಿಟ್ಟು
ಕೋರೆಹಲ್ಲು ತೋರುವ ಕ್ರೂರವದನ ಅಪಾರ ಮಹಿಮ
ಮೂರು ಪಾದ ಭೂಮಿ ಬೇಡಿದ ವಿಪ್ರರ ಕರೆಸಿ
ಧಾರುಣಿಯನೆ ದಾನ ಮಾಡಿದ ಪರ್ವತಗಳ ತರಿಸಿ
ಶರಧಿಯನ್ನು ಸೇತುಕಟ್ಟಿದನೆ ಶ್ರೀರಾಮಚಂದ್ರ
ಜಾರ ಚೋರ ಮಾರನಯ್ಯ ನಾರೇರಪ್ಪಿ ಮರುಳುಮಾಡಿ
ವಾರಿಜಾಕ್ಷ ಹಯವದನ ಏರಿ ಕುದುರೆ ವೈಹಾಳಿಮಾಡಿದ 3
***
No comments:
Post a Comment