Monday, 2 August 2021

ನಿಜ ಭಕ್ತಿ ತೋರಿದನು ಜಗಕೆ ಕೃಷ್ಣ್ಣಾ ವಿಜಯನಾ ಸತಿಯರಿಬ್ಬರ ankita gopalakrishna vittala

ನಿಜ ಭಕ್ತಿ ತೋರಿದನು ಜಗಕೆ ಕೃಷ್ಣ್ಣಾ

ವಿಜಯನಾ ಸತಿಯರಿಬ್ಬರ ನೆವದಿ ಮುದದೀ ಪ.


ಹಸ್ತಿವರದನು ತಂಗಿಯರ ನೋಡಬೇಕೆಂದು

ಹಸ್ತಿನಾಪುರಕೆ ಬಂದ್ಹರುಷದಿಂದ

ಚಿತ್ತ ನಿರ್ಮಲದಿ ಪಾಂಡವರು ಪೂಜೆಸೆ ನಲಿದು

ಭಕ್ತಿ ಭಾವಕೆ ಮೆಚ್ಚಿ ದ್ರೌಪತಿಗೆ ವಲಿದೂ 1

ಅಣ್ಣನೆಂಬುವ ಭಾವದಲಿ ಸುಭದ್ರೆಯು ಇರಲು

ಘನ್ನ ಮಹಿಮನು ಎಂದು ದ್ರೌಪತಿಯು ತಿಳಿದೂ

ಸ್ವರ್ಣಗರ್ಭನ ಪಿತನು ಈರೇಳು ಜಗದೊಡೆಯ

ಎನ್ನ ಭಾಗದ ದೈವ ಸಲಹೆಂದು ನುತಿಸೇ 2

ಅಂತರಂಗದ ಭಕ್ತಿ ಆನಂದಮಯ ತಿಳಿದು

ಕಂತುಪಿತ ಕರಗಿದಾ ಮಮತೆ ಪ್ರೇಮದಲಿ

ಶಾಂತಚಿತ್ತಳೆ ತಂಗಿ ದ್ರೌಪತಿಯೆ ಬಾರೆನುತ

ಇಂತು ನುಡಿನುಡಿಗೆ ಆಡಲು ಕರುಣೆಯಿಂದ 3

ಕೇಳಿ ಇದನು ಸುಭದ್ರೆ ತಾಳಲಾರದೆ ಅಜ್ಞ

ಬಾಲೆ ನಿಜ ತಂಗಿ ನಾನಿರಲು ಐವರಿಗೆ

ಲೋಲೆಯಾದವಳೆ ಬಲು ಮೇಲಾದವಳೆ ಎಂದು

ಬಾಲಚಂದ್ರನ ಪೋಲ್ವ ಮುಖ ಬಾಡಿಸಿರಿಲೂ 4

ಕಂಡು ಕಮಲಾಕಾಂತ ವಡಹುಟ್ಟಿದಳ

ಬೆಂಡಾದ ತೆರವ ಪೇಳೆನಲು ಖತಿಯಿಂದಾ

ಪುಂಡರೀಕಾಕ್ಷ ಎನ್ನುಳಿದು ನಿಜ ಭಾವದಲಿ

ಕಂಡವರ ಸುತೆ ನಿನಗೆ ಮಿಗಿಲಾದಳೆನಲೂ 5

ಸಚ್ಚಿದಾನಂದ ವಿಗ್ರಹ ನಗುತ ನೆನೆದನೊಂ

ದಚ್ಚರಿಯ ಕೌತುಕವ ತೋರ್ವೆನೆಂದೂ

ಅಚ್ಛಿದ್ರ ಅಕ್ಲೇಶ ಆನಂದಮಯ ತಾನು

ಕಚ್ಚಿ ಬೆರಳನು ಕ್ಲೇಶ ಪಡುತ ವರಲಿದನೂ 6

ಬಾರಮ್ಮಾ ತಂಗಿ ಸುಭದ್ರೆ ಬೆರಳಲಿ ರಕ್ತ

ಸೋರುತಿದೆ ಬೇಗೊಂದು ಚಿಂದಿ ತಾರೆ

ತಾರೆನಲು ಗಡಬಡಿಸಿ ಮನೆಯಲ್ಲ ಹುಡುಕತಲಿ

ತೋರದಲೆ ಒಂದ್ಹರಕು ಬಟ್ಟೆ ಕಂಗೆಡುತಾ 7

ಎತ್ತ ನೋಡಿದರತ್ತ ಪಟ್ಟೆ ಪೀತಾಂಬರವು

ಉತ್ತಮಾ ವಸನ ಕಂಚುಕ ಮಕುಟ ಮೆರೆಯೇ

ಚಿತ್ರದಾ ವಸನ ಅರಮನೆಯಲ್ಲಿ ತುಂಬಿರಲು

ಮತ್ತದರ ಮಮತೆ ಅಣ್ಣನಿಗೆ ಅಧಿಕವಾಗೆ 8

ಬರಲಿಲ್ಲ ಸುಭದ್ರೆ ಬಾರಮ್ಮ ದೌಪದಿಯೆ

ವರ ತಂಗಿ ಬೇಗ ಕೊಡೆ ಹರಕು ಬಟ್ಟೆ

ಸುರಿಯುತಿದೆ ರಕ್ತ ಬೆರಳಿಂದ ನೋಡೆಂದನಲು

ಕಿರುನಗೆಯ ನಗುತ ಶರಗ್ಹರಿದು ಕಟ್ಟಿದಳೂ 9

ಬಂದಳಾ ವೇಳೆಯಲಿ ಸುಂದರಾಂಗಿ ಸುಭದ್ರೆ

ನಿಂದು ನೋಡಿದಳೂ ದ್ರೌಪತಿಯ ಕೃತಿಯಾ

ಮಂದಗಮನೆಯು ನಾಚಿ ಮೊಗವ ತಗ್ಗಿಸಿ ನಿಲಲು

ಇಂದಿರೇಶನು ಇದರ ವಿವರ ತೋರಿದನು 10

ಬೆರಗಾದ ಪರಿತೋರಿ ಸಿರಿಕೃಷ್ಣ ಕೇಳಿದನು

ಜರತಾರಿ ಸೆರಗ್ಹರಿದು ಕಿರುನಗೆಯ ನಕ್ಕಾ

ಪರಿ ಏನೆ ಎಲೆ ತಂಗಿ ನರಳುವೋ ಎನ ನೋಡಿ

ಪರಿಹಾಸ್ಯವಾಯಿತೆ ನಿನಗೆ ಎಂತೆಂದಾ 11

ಅಣ್ಣಯ್ಯ ನಿನಗೆ ಮಿಗಿಲಾಯಿತೇ ಈ ಶೆರಗು

ಎನ್ನ ಅಭಿಮಾನ ಕಾಯುವ ದೈವ ನೀನೂ

ಘನ್ನ ಮಹಿಮಾಂಗ ನಿನಗಿನ್ನು ಕ್ಲೇಶಗಳುಂಟೆ

ನಿನ್ನ ಲೀಲೆಗೆ ಹರುಷ ಉಕ್ಕಿತೆಂದನಲೂ 12

ಹೇ ನಾರಿ ನಾನನಾಥರಿಗೆ ನಾಥನು ಮುಂದೆ

ನೀನಿತ್ತ ವಸನ ಅಕ್ಷಯವಾಗಲೆಂದು

ಶ್ರೀನಾಥ ದ್ರೌಪದಿ ಸುಭದ್ರೆಯ ಮನ್ನಿಸಿ ಮೆರೆದe್ಞÁನಿ ಜನಪ್ರಿಯನು ಗೋಪಾಲಕೃಷ್ಣವಿಠಲಾ13

****


No comments:

Post a Comment