ಯಾಕೆನಗೆ ವೈರಾಗ್ಯ ಪುಟ್ಟಲಿಲ್ಲವೊ ದೇವ
ಏನು ಪಾಪಿಯೊ ಜಗದಲಿ ಪ.
ಸಾಕು ಸಾಕೀ ವಿಷಯ ಚಿಂತನೆಯ ಬಿಡಿಸಿನ್ನು
ಲೋಕನಾಯಕನೆ ಸ್ವಾಮಿ ಅ.ಪ.
ಅಸನವಸನಗಳಿಗೆ ಆಲ್ಪರಿದು ಅನ್ಯರಿಗೆ
ಬಿಸಜನಯನನೆ ಕಾಲಹರಣೆಯನೆಗೈದೆ
ವಸುದೇವಸುತ ನಿನ್ನ ಅರಘಳಿಗೆ ನೆನೆಯದಲೆ
ಹಸಿವು ತೃಷೆಯಿಂ ಬಳಲಿ ಬೆಂಡಾದೆನಯ್ಯಾ 1
ಇಂದ್ರಿಯಗಳೆಲ್ಲವನು ಬಂಧನದೊಳಗೆ ಇರಿಸಿ
ಇಂದಿರೇಶನೆ ನಿನ್ನ ಧ್ಯಾನಿಸದಲೆ
ಮಂದಮತಿಯಿಂದ ನಾ ಮಮಕಾರದಲಿ ಬಿದ್ದು
ಮಂದ ಜನರೊಡನಾಡಿ ಮಾಯಕೊಳಗಾದೆ 2
ಭಕ್ತಿಮಾರ್ಗವ ಕಾಣೆ e್ಞÁನ ಮೊದಲೆ ಅರಿಯೆ
ಮುಕ್ತಿಗೊಡೆಯನೆ ಎನ್ನ ಮುದದಿಂದ ಸಲಹೊ
ಯುಕ್ತಯುಕ್ತಿಗಳರಿಯೆ ಸುತ್ತುತಿಪ್ಪೆನೊ ಭವದಿ
ಶಕ್ತ ನೀ ಒಳಗಿದ್ದು ಎನ್ನ ಕಾಡುವರೆ 3
ಕರ್ಮಮಾರ್ಗವ ತೊರೆದು ನಿರ್ಮಲದಲಿ ನಿನ್ನ
ಒಮ್ಮೆಗಾದರೂ ಮನದಿ ನೆನೆಯಲಿಲ್ಲ
ರಮೆಯರಸನೆ ಶ್ರೀ ಗುರುಗಳಂತರ್ಯಾಮಿ
ಕರ್ಮತ್ರಯಗಳ ಕಡಿದು ಕರುಣದಲಿ ಕಾಯೊ4
ಪಾಪರಹಿತನೆ ಎನ್ನ ಪಾಪ ಕರ್ಮಗಳೆಲ್ಲ
ಈ ಪರಿ ನುಡಿದೆ ನೀ ಪರಿಹರಿಸಿ ಕಾಯೋ
ಗೋಪಾಲಕೃಷ್ಣವಿಠ್ಠಲನೆ ನೀನಲ್ಲದಲೆ
ಈ ಪಾಪಿಯನು ಕಾಯ್ವರಾರೊ ಶ್ರೀ ಹರಿಯೆ5
****
No comments:
Post a Comment