rudra deva
ಕಂಡೆ ನಾನೀಗ ಈ ದಿವ್ಯ ಪಾದ ಭೂ-
ಮಂಡಲದೊಳು ಚರಿಸಿ ಉದ್ಧರಿಪ ಪಾದ ಪ.
ಹರಿಗೆ ಹಾಸಿಗೆಯಾಗಿ ಹರುಷಪಡುವ ಪಾದ
ಹರಿಯ ಮಂದಿರಲ್ಲಿ ಇರುವ ಪಾದ
ಹರ ಪುರಂದರರಿಗೆ ಪೂಜ್ಯವಾಗಿಹ ಪಾದ
ಹರ ಪದವಿಯಿಂ ಬಂದು ಮೆರೆವ ಪಾದ 1
ವಾರುಣಿ ದೇವಿಗೆ ವರನೆನಿಸಿದ ಪಾದ
ಶ್ರೀ ರಾಮಗೆ ಕಿರಿಯನಾದ ಪಾದ
ಘೋರ ಇಂದ್ರಾರಿಯ ಸಂಹರಿಸಿದ ಪಾದ
ದ್ವಾರಕಾಪುರದಲ್ಲಿ ಮೆರೆವ ಪಾದ 2
ವಾಯುದೇವರು ಜೊತೆಗೆ ವಾದವಾಡಿದ ಪಾದ
ನೋಯದೆ ಭೂಮಿಯನು ಪೊತ್ತಿಹ ಪಾದ
ಶ್ರೀಯರಸನ ಪಾದಪದ್ಮ ಸೇವಿಪ ಪಾದ
ಬಾಯಬಿಡುತಿರೆ ಸುರರು ಸುಧೆ ಕಡೆದ ಪಾದ 3
ಸಪ್ತೆರಡು ಭುವನದಲಿ ಗುಪ್ತವಾಗಿಹ ಪಾದ
ಚಿತ್ತದಭಿಮಾನಿಗೆ ಸೇವಕನಾದ ಪಾದ
ಮತ್ತೆ ಮನ ಅಹಂಕಾರ ತತ್ವದೊಡೆಯನ ಪಾದ
ತೃಪ್ತ ಶರಣರಿಗೀವ ಕರುಣ ಪಾದ 4
ಘೋರರೂಪವ ತೊರೆದು ಸೌಮ್ಯವಾಗಿಹ ಪಾದ
ಸೇರಿದವರನು ಪೊರೆವ ಶ್ರೇಷ್ಠ ಪಾದ
ಹಾರೈಸಿ ಗೋಪಾಲಕೃಷ್ಣವಿಠ್ಠಲನ ಪಾದ
ಸಾರಿ ಭಜಿಸುತ ಸೌಖ್ಯ ಪೊಂದಿರುವ ಪಾದ 5
****
No comments:
Post a Comment