Thursday, 2 December 2021

ಕೊಳಲನೂದುವ ನಮ್ಮ ಚಲುವ ಕೃಷ್ಣಯ್ಯ ankita gopalakrishna vittala KOLALANOODUVA NAMMA CHELUVA KRISHNAYYA



ಕೊಳಲನೂದುವ ನಮ್ಮ ಚಲುವ ಕೃಷ್ಣಯ್ಯ

ನಳಿನಾಕ್ಷಿಯರ ಮಧ್ಯೆ ಪೊಳೆವ ರಂಗಯ್ಯ ಪ.


ಕರದ್ವಯದಲಿ ಶಂಖ ಚಕ್ರಪಿಡಿದಿಹ

ಕಿರುನಗೆ ನಗುತ ಸುಲಿಪಲ್ಲಿನ ಚಲುವ

ಸ್ವರಗಳ ಪಿಡಿಯುತ ವೇಣು ನುಡಿಸುವ

ಸರಸಿಜನಾಭ ಹೃನ್ಮಂದಿರದಿ ಮೆರೆವ 1


ಜಗವ ಮೋಹಿಸುವಂಥ ನಗೆಯ ಮೊಗ ಚೆಲುವ

ಹೆಗಲು ಎಡದಲ್ಲಿ ಗಲ್ಲ ತಗುಲಿಸಿ ಇರುವ

ಖಗವಾಹನ ಹಸ್ತ ಸತಿ ಹೆಗಲಲಿ ಇಡುವ

ನಗಧರ ನರ್ತನವಾಡಿ ಮುದವೀವ 2


ಕಾಲಕಡಗ ಗೆಜ್ಜೆ ಪಾಡಗರುಳಿಯು

ಮೇಲೆ ಪೀತಾಂಬರ ಜರಿಯ ವೈಭವವು

ಸಾಲ ಮುತ್ತಿನಹಾರ ಪದಕದ್ವಜ್ರಗಳು

ಓಲಾಡುವ ನೀಲಾಂಬರ ಹೊದ್ದಿಹ ಒಲಪು 3


ಕಂಠ ಕೌಸ್ತುಭಮಣಿ ಅಧರದ ಕೆಂಪು

ಒಂಟಿ ಚೌಕುಳಿ ಕರ್ಣ ಕದಪು ಕನ್ನಡಿಯು

ಬಂಟರಾದವರನ್ನು ಪೊರೆಯುವ ದೃಷ್ಟಿ ವೈ -

ಕುಂಠನ ನಾಸಿಕ ಫಣೆಯ ತಿಲುಕವು 4


ಶ್ರೀಪತಿ ಮುಂಗುರುಳು ಶಿರದಲ್ಲಿ ಮಕುಟ

ಪಾಪವ ದಹಿಸುವ ಪಾವನ ವೇಣು

ಆಪಾದ ಮೌಳಿಯ ರೂಪದ ಚಲುವ

ಗೋಪಾಲಕೃಷ್ಣವಿಠ್ಠಲ ಎನ್ನ ಕಾವ 5

****


No comments:

Post a Comment