ವರ್ಣಿಸಲಳವೆ ಕರುಣಾಳು ಗುರುವರ ನಿಮ್ಮ
ವರ್ಣವರ್ಣದ ಚರಿತೆ ಗುಣಗಣಗಳ ಪ.
ವರ್ಣಪ್ರತಿಪಾದ್ಯ ದೇವತೆಗಳಿಗೆ ಅಳವಲ್ಲ
ಇನ್ನಿದನು ಪಾಮರರು ಅರಿಯುವರೆ ಜಗದಿ ಅ.ಪ.
ಪ್ರತಿಪ್ರತಿ ಕಲ್ಪದಲಿ ಅತಿಶಯದ ತಪಚರಿಸಿ
ಪತಿತಪಾವನ ಹರಿಯ ಮನ ಮೆಚ್ಚಿಸಿ
ಕ್ಷಿತಿಯೊಳಗೆ ಅವತರಿಸಿ ದೇವಾಂಶರೆಂದೆನಿಸಿ
ಪತಿತರನು ಪಾವನವಗೊಳಿಪ ಘನಮಹಿಮ 1
ಭಕ್ತರು ಕರೆದಲ್ಲಿ ಆಸಕ್ತಿಯಿಂ ಬಂದು
ಯುಕ್ತಯುಕ್ತಗಳಿಂದ ತತ್ವಗಳನರುಹಿ
ಮುಕ್ತಿಗೊಡೆಯನ ಮಾರ್ಗ ಮುಕ್ತಾರ್ಥ ಜನಕರುಹಿ
ಮುಕ್ತಿಪಥ ಸವಿತೋರ್ವ ಶಕ್ತಿ ಮಹಿಮೆಗಳ 2
ಪದ್ಮನಾಭನ ಪಾದ ಪದ್ಮಸುತ ತಂದೆ
ಮುದ್ದು ಮೋಹನದಾಸರಾಯರೆಂದೆನಿಸಿ
ಮಧ್ವಮತಸಾರಗಳ ಹೀರಿ ಮಕರಂದವನು
ಸಿದ್ಧಿಗೊಳಿಸಿ ಸುಜನಕೀವ ಶ್ರೀ ಗುರುವೆ3
ಕರಿಗಿರಿ ನರಹರಿಯ ಚರಣಕಮಲ ಧ್ಯಾನ
ಅರಘಳಿಗೆ ಬಿಡದೆ ಮನಮಂದಿರದಿ ಸ್ಮರಿಪ
ಕರುಣಜಲನಿಧಿಯೆ ನಿಮ್ಮ ಮೊರೆಹೊಕ್ಕವರ ಕಾಯ್ವ
ಪರಮಪ್ರಿಯರೆಂತೆಂಬ ಬಿರುದುಳ್ಳ ಗುರುವೇ 4
ಕಮಲಾಂತ ಪ್ರೀತ ಶ್ರೀ ಕಮಲನಾಭನ ಪಾದ
ಕಮಲ ಮನದಲಿ ಸ್ಮರಿಪ ಕಮನೀಯ ಗಾತ್ರ
ಕಮಲಾಕ್ಷ ಗೋಪಾಲಕೃಷ್ಣವಿಠ್ಠಲನ ಪದ
ಕಮಲ ಮನದಲಿ ತೋರಿ ಕೃಪೆಯಗೈಯ್ಯುವುದು 5
****
No comments:
Post a Comment