Monday, 2 August 2021

ಮುದ್ದು ಮೋಹನದಾಸರೆ ಎನ್ನನು ಬೇಗ ankita gopalakrishna vittala muddumohana vittala dasa stutih

ಮುದ್ದು ಮೋಹನದಾಸರೆ | ಎನ್ನನು ಬೇಗ

ಉದ್ಧರಿಸಿರಿ ಪ್ರೀತರೆ ಪ.


ಬಿದ್ದಿಹೆ ದುರ್ವಿಷಯಾಂಧ ಕೂಪದೊಳೀಗ

ಶುದ್ಧ ಜ್ಞಾನವನಿತ್ತು ಪದ್ಮನಾಭನ ತೋರಿ ಅ.ಪ.


ಪರಮಯತಿಚರ್ಯರೆ | ಈ ಜಗದೊಳು

ವರ ಭಕ್ತಿವೆಗ್ಗಳರೆ

ತರಳತನದಲಿ ಪಾದಚಾರಿಗಳಾಗಿ

ಧರೆಯ ಕ್ಷೇತ್ರವನೆಲ್ಲ ಚರಿಸಿರ್ಪ ವಶಗೈದು

ಹರಿಯ ಮೆಚ್ಚಿಸಿ ದಾಸಭಾವದಿ

ಪರಿಪರಿಯ ಅಂಕಿತದಿ ಶಿಷ್ಯರ

ಪರಮ ಸಂಭ್ರಮಗೊಳಿಸಿ ಮೆರೆಯುತ

ಸಿರಿವರನ ಪದಸಾರಿದಂಥ 1

ಶೀಲವಂತರೆ ನಿಮ್ಮನು | ಕೊಂಡಾಡೆ ಈ

ಸ್ಥೂಲಮತಿಗೆ ಸಾಧ್ಯವೆ

ಕಾಲಕಾಲದಿ ಹರಿಲೀಲೆಯ ಪಾಡುತ

ನೀಲವರ್ಣನ ಹೃದಯಾಲಯದಿ ಕಂಡು

ಮೂಲರೂಪಿಯ ಪಾದಕಮಲದಿ

ಲೋಲುಪಡುತಲಿ ಓಲ್ಯಾಡಿದ ಬಹು

ಶೀಲಗುಣಗಣಪಾಲರೆ ಎನ್ನ

ಪಾಲಿಸಿರಿ ಸಿರಿಲೋಲನ ತೋರಿ 2

ಸಂದೇಹವಿನ್ಯಾತಕೆ | ಮಂತ್ರದ ಮನೆ

ಮಂದಿರದೊಳಗಿರೆ

ಬಂದಿರಿ ದಾಸತ್ವದಿಂದ ಧರೆಯೊಳು

ನಂದಕಂದನ ಲೀಲೆ ಅಂದ ಪಾಡುತಲಿ

ಅಂದು ಗ್ರಂಥಗಳನೋದಿ ಪದವನು

ಒಂದು ರಚಿಸಿ ಸಾಲದೆ ಮು-

ಕುಂದನಾ ಗುಣವೃಂದ ಪೊಗಳಲು

ಚಂದದಿಂದ ವಸುಂಧರೆಯೊಳು 3

ವರತತ್ವ ಅಂಶದಲಿ | ಶ್ರೀ ಗುರುವಿಗೆ

ತಾರಕರೆನಿಸಿದಿರಿ

ಸಾರಿರೆ ನಿಮ್ಮ ಪದ ಸ್ವಪ್ನದೊಳು ತೋರಿ

ತೀರುಥವನೆ ಕೊಟ್ಟು ಸುಮ್ಮನಿರಲು ಗುರು

ಸಾರಿ ಬಂದು ಬದಿಯಲಿ ನಿಂದು

ಭೂರಿ ಕರುಣವ ಮಾಡಬೇಕೆಂದು

ತೋರಿ ಪೇಳಲು ಹರಿ ನಿರ್ಮಾಲ್ಯ

ಅಪಾರ ಕರುಣದಿ ಕೊಟ್ಟು ಪೊರೆದಿರಿ 4

ಸ್ತುತಿಸಲಳವೆ ನಿಮ್ಮನು | ಈ ಜಡಮತಿ

ಕೃತಕವಲ್ಲವು ಇದಿನ್ನು

ಅತಿಪ್ರೇಮ ಗುರುಗಳ ಹಿತದಿಂದ ನುಡಿದುದು

ಚ್ಯುತದೂರ ಗೋಪಾಲಕೃಷ್ಣವಿಠ್ಠಲನ

ಸತತ ಸ್ತುತಿಸುವ ಮತಿಯ ಪಾಲಿಸಿ

ಪಥವ ತೋರಿರಿ ಕರ್ಮಜರೆ ಬೇಗ

ಸತತ ಶ್ರೀ ಗುರು ವ್ರತವ ಪಾಲಿಪ

ಮತಿಯ ದೃಢದಲಿ ಹಿತದಿ ಕರುಣಿಸಿ 5

****


No comments:

Post a Comment