Audio by Mrs. Nandini Sripad
ಶ್ರೀವಿಜಯದಾಸಾರ್ಯ ವಿರಚಿತ
ಸಾಧನ ಸುಳಾದಿ
(ಶ್ರೀಹರಿಯನ್ನು ನಂಬಲು ಸಂಸಾರ ನಿವೃತ್ತಿ)
ರಾಗ ನಾಟಿ
ಧ್ರುವತಾಳ
ನಂಬದಿರು ಸಂಸಾರವೆಂಬೋದೆ ಕಾಳಕೂಟ -
ದಂಬುಧಿಗೆ ಅತಿ ಮಿಗಿಲು ಹಂಬಲಿಸದಿರು
ಡಿಂಬವು ತ್ರಿವಿಧವೆಂಬೋದು ವೇದಸಿದ್ಧ
ಡಂಭಕ ಮಾಯಕದಂಬ ತಿಳಿಯಲೊಶವೆ
ಶಂಬರಾರಿ ಕುಟುಂಬಕ್ಕೆ ಸಿಲುಕಿ
ಗುಂಭವಾದ ಜ್ಞಾನ ಭಕುತಿಯ ಮರೆದು
ಉಂಬೊ ತಿಂಬದರಲ್ಲಿ ಸಂಭ್ರಮವಾಗಿ ನಲಿವೆ
ಕುಂಭಿಣಿಯೊಳು ವಿಷವೆಂಬೊದೆ ಬಯಸುತ
ಅಂಬುಜ ಪಾಣಿ ಸದಾ ವಿಜಯವಿಟ್ಠಲನ ಪಾ -
ದಾಂಬುಜ ನೆನೆಯದೆ ಕುಂಭಿಪಾಕಕ್ಕಿಳಿವೆ ॥ 1 ॥
ಮಟ್ಟತಾಳ
ಉಸುಗಿನ ಮನೆ ಮಾಡಿ ಕುಸಿಯ ಗುದ್ದಿದರದು
ವಸುಧಿಗೆ ಬೀಳದಲೆ ಹಸನಾಗಿ ನಿಲ್ಲುವದೆ
ಅಸುವು ನಿನ್ನದು ಎಂದು ಅಸುರ ವಿಜ್ಞಾನದಲಿ
ಅಸಜ್ಜನ ನಡತೆಯಲಿ ಕುಶಲದಲ್ಲಿರದಿರೂ
ಅಸುರಾಂತಕ ದಾತ ವಿಜಯವಿಟ್ಠಲ ಹರಿಯಾ
ರಸನೇಂದ್ರಿಯದಲಿ ನೆನಸದಿದ್ದಡೆ ಮಾ -
ಹಿಷ ಗಮನನು ಖಂಡ್ರಿಸದಿಪ್ಪನೆ ಮರುಳೆ ॥ 2 ॥
ತ್ರಿವಿಡಿತಾಳ
ಆದಿಮೂಲ ಮೂರ್ತಿ ನಾರಾಯಣ ಜಗ -
ದಾದಿ ಕರ್ತ ಸಿದ್ಧ ಸರ್ವಸಮರ್ಥ
ಕ್ರೋಧನಲ್ಲ ದಯಾವಂತ ಇನ್ನೊಬ್ಬರಿಗಲ್ಲಾ
ಭೇದವಖಿಳ ಜೀವಕಪಾರ ಮಹಿಮನು
ಸಾಧನವರಿತು ಅವರವರಿಗೆ ಫಲವೀವಾ
ವ್ಯಾದಿಶ ನಾಮರಂಗ ವಿಜಯವಿಟ್ಠಲರೇಯನ
ಆದರಿಸಿ ಸಂಸಾರ ರೋದನ ಗೆಲ್ಲು ॥ 3 ॥
ಅಟ್ಟತಾಳ
ಶಾರೀರಧಾರಿಯಾದ ಮೇಲೆ ದೋಷ -
ಪಾರವಾಗಿ ಒಂದು ತೊಲಗದಲ್ಲಿಪ್ಪವು
ಘೋರ ಕರ್ಮದ ನಿಬಿಡರಾಧಿಸಲು ಪುಣ್ಯ
ಜಾರಿ ಪೋಗುವದು ಪ್ರಾಪುತವಾಗದೆ
ನಾರಾಯಣನ ಪಾದವಾರಿಜ ಮರೆದರೆ
ತೀರದು ಸಂಸಾರ ಬಂಧನವು
ಕ್ರೂರ ವಿಷಯಂಗಳ ದಾರಿಯ ಮೆಟ್ಟದೆ
ಸೂರೆಗೊಡು ಮನ ಸದ್ಭಕ್ತಿಗೆ
ಬೀರು ಸ್ವಭುಜನಾಮ ವಿಜಯವಿಟ್ಠಲನೆಂದು
ಪಾರಾಗು ಸಂಸಾರ ವಾರಿಧಿ ವೇಗ ॥ 4 ॥
ಆದಿತಾಳ
ಕಂಡ ದೇವರಿಗೆ ಬಾಗೆ ಮಂಡೆ ಪರಟಿಗಟ್ಟುವದು
ಪಿಂಡಾಂಡದಲ್ಲಿ ಬಂದು ಭಂಡು ಬೀಳೋದು ತಪ್ಪದು
ತಂಡ ತಂಡದ ಸಂಸಾರ ದಂಡ ಕೊಳದಿ ಬಾಳಬೇಕು
ಮಂಡಲೇಶ ನೆಗ್ರೋಧ ವಿಜಯವಿಟ್ಠಲರೇಯಗೆ
ದಂಡಾಕಾರವಾಗಿ ನಮಿಸೆ ಹಿಂಡು ಪಾಪದಿಂದ ಮುಕ್ತಿ ॥ 5 ॥
ಜತೆ
ನಮ್ರೀ ಭೂತನಾಗೆ ಸಂಸಾರ ಪರಿಸುವಾ
ಅಮೃತಾಂಶವೆ ನಾಮ ವಿಜಯವಿಟ್ಠಲ ಸ್ವಾಮಿ ॥
***
No comments:
Post a Comment