Tuesday, 20 July 2021

ವೆಂಕಟ ಬಾರೋ ರಿಪುಸಂಕಟ ಬಾರೊ ankita vijaya vittala

ರಾಗ -  :  ತಾಳ -


ವೆಂಕಟ ಬಾರೋ ರಿಪುಸಂಕಟ ಬಾರೊ

ಕಿಂಕರರಿಗೊಲಿದ ನಿಶ್ಶಂಕ ಬಾರೋ ll ಪ ll


ಪೊಂದೇರಿನೊಳಗೆ ಭೂಮಿ ಇಂದಿರೆಗೂಡಿ

ಚಂದದಿಂದಲೊಪ್ಪುತಿಹ ಇಂದುವದನ

ಮಂದರೋದ್ಧಾರನೆ ಮಹಾನಂದ ಮೂರುತಿ

ವೃಂದಾರಕ ವಂದ್ಯ ಪಾದ ವಂದಿಪೆ ನಿಂದು ll 1 ll


ಲೌಕೀಕ ವಿಲಕ್ಷಣ ಅನೇಕ ಏಕ 

ಸಾಕಾರ ವಿಗ್ರಹ ಪುಣ್ಯಶ್ಲೋಕ ವಿಭುವೆ

ಪ್ರಾಕೃತ ರಹಿತಗಾತ್ರ ಲೋಕಪಾವನ

ಶೋಕ ಮೂಲನಾಶನ ವಿಶೋಕ ಜನಕ ll 2 ll


ಆಗಮ ಮಣಿ ಖಣಿಯೆ ಅಗಣಿತ ಬಂಧು

ಅಗ ನಗ ಧಾರಕನೆ ನಾಗ ಭಂಜನ

ಆಕಾಶ ಗಂಗೆಯ ಅಂಗುಷ್ಟದಿ ಪೆತ್ತನೆ

ಆಗಲೀಗಲೆನ್ನದಲೆ ಸಾಗಿ ವೇಗದಿ ll 3 ll


ಅಂಗ ಅಂಗೀ ಭಾವದಿಂದ ಅಂಗದೊಳಿದ್ದು

ಸಂಗಡ ತಿರುಗುವ ನೀಲಾಂಗ ನಿಸ್ಸಂಗ

ಡಿಂಗರಿಗ ಹೃತ್ಕಮಲ ಭೃಂಗ ಜಗದಂತ-

ರಂಗ ರಂಗರಾಜ ಸುಖಸಂಗ ಅಸ್ಸಂಗ ll 4 ll


ಆಪ್ತಕಾಮ ಅಮೃತಾಂಗ ಗುಪ್ತ ಮಹಿಮ

ತಪ್ತಕಾಂಚನ ಸನ್ನಿಭ ವ್ಯಾಪ್ತ ನಿತ್ಯಾ

ತೃಪ್ತ ತೃಣ ಬೊಮ್ಮಾದಿ ನಿರ್ಲಿಪ್ತ ವ್ಯಾಪ್ತಾ

ಸಪ್ತ ಸಪ್ತ ಲೋಕೇಶ ಅತೃಪ್ತ ಲೀಲ ll 5 ll


ನಿರ್ದೋಷ ವಸ್ತು ನೀನೆಂದು ನಿರ್ಧಾರ ಮಾಡಿ

ಪೊಂದಿಪ್ಪವು ನಿನ್ನಲಿ ನಾಲ್ಕು ನಿರ್ದೋಷಂಗಳು

ಭದ್ರ ಫಲದಾಯಕ ಸಮುದ್ರಶಯನ

ಮಧ್ಯ ಜೀವಿ ವಂದ್ಯ ಸುಪ್ರಸನ್ನ ಮೋಹನ್ನ ll 6 ll


ಜೀವಾಭಿಮಾನಿ ಗಿರೀಶ ದೇವ ದೇವೇಶ

ಜೀವರಾಶಿಗಳ ಸ್ವಭಾವ ಪ್ರೇರಕ

ಜೀವನನಾಗಿ ನಮ್ಮ ಕಾವುತಿಪ್ಪ ರಾ-

ಜೀವ ನಯನ ವಿಜಯವಿಟ್ಠಲ ಪೂರ್ಣ ll 7 ll

***

 

No comments:

Post a Comment