ಇದು ಏನು ಕೌತುಕವೊ ಹನುಮರಾಯ
ಪದುಮನಾಭನ ದಯಾಪಾತ್ರ ಶುಭಕಾಯ ಪ.
ಅಂಜನೆಯ ಸುತನಾಗಿ ಅಂದು ಶ್ರೀ ರಾಮರಡಿ
ಕಂಜಗಳ ಸೇವಿಸುತ ಮುದ್ರಿಕೆಯನು
ಕಂಜಾಕ್ಷಿಗಿತ್ತು ಕ್ಷೇಮವನರುಹಿ ಬಂದಾಗ
ಸಂಜೀವ ನಿನಗಿಷ್ಟು ತೊಡಿಗೆ ಕೊಟ್ಟಳೆ ದೇವಿ 1
ಮರುವಾರ್ತೆ ತಂದು ರಾಮಗರುಹಿ ಸೇತುವೆಯ
ಗಿರಿಯಿಂದ ಕಟ್ಟಿ ಕಾರ್ಯವ ಸಾಧಿಸೆ
ಸಿರಿಸಹಿತ ಶ್ರೀ ರಾಮ ರಾಜ್ಯಕೆ ಬಂದಾಗ
ಮರುತ ನಿನಗಿಷ್ಟು ಆಭರಣ ಕೊಟ್ಟನೆ ಪೇಳು 2
ಎಲ್ಲೆಲ್ಲಿ ನಿನ್ನ ಕೀರ್ತಿಯ ಕೇಳೆ ಕೌಪೀನ
ವಲ್ಲದಲೆ ಮತ್ತೊಂದರ್ಹಂಬಲಿಲ್ಲ
ಮಲ್ಲ ವೈರಾಗ್ಯದಲಿ ಎಂಬುದನು ಕೇಳಿದೆನು
ಇಲ್ಲಿ ನೋಡಲು ಇಷ್ಟು ವೈಭವವ ಪಡುತಿರುವೆ 3
ರಾತ್ರೆಯಲಿ ಕೀಚಕನ ಕೊಲ್ಲಲೋಸುಗ ಅಂದು
ಮಿತ್ರೆ ರೂಪವ ಧರಿಸಿ ಶೃಂಗರಿಸಿಕೊಂಡು
ಕತ್ತಲೊಳು ನೋಡಿಕೊಳ್ಳಲು ಆಗಲಿಲ್ಲೆಂದು
ಹಸ್ತ ಕಡಗ ಹರಡಿ ಇಟ್ಟು ಮೆರೆಯುವೆಯೊ 4
ಹುಟ್ಟುತಲೆ ಸಂನ್ಯಾಸ ತೊಟ್ಟು ಬ್ಯಾಸತ್ತೊ ನಡು
ಪಟ್ಟಿ ಉಡುದಾರ ಉಡುಗೆಜ್ಜೆ ಕಾಲ್ಗಡಗ
ಇಟ್ಟು ನಾನಾ ಬಗೆ ಕದರುಂಡಲಿಯಲಿ ನೆಲಸಿ
ಶ್ರೇಷ್ಠ ಗೋಪಾಲಕೃಷ್ಣವಿಠ್ಠಲನ ಪ್ರಿಯನಾದಿ 5
***
No comments:
Post a Comment