Sunday, 1 August 2021

ಇದೇ ಇದೆ ಉಡುಪಿಪುರ ನಮ್ಮ ಪದುಮನಾಭನು ನೆಲೆಸಿರುವ ಮಂದಿರ ankita gopalakrishna vittala

ಇದೆ ಇದೆ ಉಡುಪಿಪುರ ನಮ್ಮ

ಪದುಮನಾಭನು ನೆಲೆಸಿರುವ ಮಂದಿರ ಪ.


ಬಂದ ಆಯಾಸಗಳೊಂದು ಕಾಣಿಸದಿನ್ನು

ಸಿಂಧು ತಡಿಯಲಿಪ್ಪ ಪಟ್ಟಣ ನೋಡೆ

ಸುಂದರ ಗೋಪುರ ಅಂದವಾಗಿಹ ಬೀದಿ

ಬಂದೆವೆ ಗುರು ಹಿರಿಯರ ಕೃಪೆಯಿಂದ 1

ಮೊದಲೆ ತೋರುವುದು ಶ್ರೀ ರಾಘವೇಂದ್ರ ಮಠ

ಅದರ ಬದಿಯಲ್ಲೆ ಕೃಷ್ಣಪುರ ಮಠವು

ಅದರೆದರಲ್ಲೆ ಶಿರೂರು ಶ್ರೀಗಳ ಮಠ

ಎದುರೆ ಕಾಣುವುದೆ ಕನಕ ಮಂಟಪವು 2

ಕಿಂಡಿಯಲ್ಲಿ ನೋಡಿ ಪುಂಡರಿಕಾಕ್ಷನ

ಕಂಡು ವಂದಿಸಿ ಮಹಾದ್ವಾರಕೆ ಬನ್ನಿ

ಮಂಡೆ ಬಾಗಿಸಿ ಬನ್ನಿ ಮಹಾಪ್ರದಕ್ಷಿಣಿಗಾಗಿ

ಕಂಡು ಸಾಗಿರಿ ಮುಂದೆ ಕಾಣೂರು ಮಠವ 3

ಎರಡನೆಯ ಬೀದಿಯಲಿ ಬಲದ ಮಹಾದ್ವಾರ

ಗಿರಿಜೆಯರಸ ಚಂದ್ರೇಶ್ವರನ ಗುಡಿ

ಎರಗಿ ಮುಂದ್ವರಿಯೆ ಎಡದಲ್ಲಿ ಸೋದೆಯ ಮಠ ಅ

ದರ ಪಕ್ಕವೆ ಪುತ್ತಿಗೆ ಮಠ ನೋಡಿ 4

ಬರಬರುತ ಬೀದಿ ಎರಡು ಪಕ್ಕಗಳಲ್ಲಿ

ಇರುವ ಅಂಗಡಿ ಸಾಲು ವ್ಯಾಸಾದಿ ಮಠಗಳ್

ನಿರರುತಿ ಕೋಣದಿ ಆದಮಾರು ಮಠ ಅ

ದರ ಪಕ್ಕವೆ ಪೇಜಾವರ ಮಠವೆನ್ನಿ 5

ಮುಂದೆ ಒಂದೆರಡ್ಹೆಜ್ಜೆಯಿಂದ ಬರಲು ಅಲ್ಲಿ

ಸುಂದರವಾದ ಪಲಿಮಾರು ಮಠ

ಅಂದ ನೋಡುತ ಸಾಗಲರ್ಧ ಪ್ರಥಮ

ಬೀದಿಯಿಂದ ಬಲಗಡೆ ತಿರುಗೆ ಅನಂತೇಶ್ವರ 6

ಚತುರ ಬೀದಿಯ ಮಧ್ಯೆ ರಾಜಿಸುತಿಹ ಗುಡಿ

ಅತಿ ಉನ್ನತವಾದ ಗರುಡಸ್ಥಂಭ

ಪ್ರಥಮ ಪ್ರದಕ್ಷಿಣೆ ದ್ವಾರ ದರ್ಶನಗಳು

ಗತಿಸಿ ಪೋದುವು ನಮ್ಮ ಪಾಪರಾಶಿಗಳು 7

ನಡೆಯಿರಿ ನಡೆಯಿರಿ ಕೃಷ್ಣನ ಮಠದೆಡೆ

ಬಡಿಯುತಲಿಹರು ನಗಾರಿಗಳು

ತಡೆಯದೆ ತೆಗೆವರು ಮಹಾದ್ವಾರವೀಗಲೆ

ಒಡೆಯ ಕೃಷ್ಣನ ನೋಡ ಬಲ್ಲಿರೆಲ್ಲ 8

ಬೆಳಗು ಝಾವದ ನಾಲ್ಕು ತಾಸಿನ ಭೇರಿಯು

ಒಳಗೆ ಪೋಗಿರಿ ಎಂದು ಕೂಗುತಿದೆ

ಬಲು ಬೇಗ ಸ್ನಾನ ಮಾಡುತ ಮಧ್ವಸರಸಿನೋಳ್

ಚಲುವ ಕೃಷ್ಣನ ನೋಡ ಬನ್ನಿರೆಲ್ಲ 9

ಮುನಿವರರೆದ್ದು ಸ್ನಾನವಗೈದು ಉಷಃಕಾಲ

ಘನಪೂಜೆಗೈದು ಪೊಂಗಲು ದೋಸೆಯ

ಮುನಿವರದಗೆ ನೈವೇದ್ಯವರ್ಪಿಸಿ ತಮ್ಮ

ಮನದಣಿಸುತ್ತಲಾನಂದಿಪರು 10

ಬಾಲತೊಡಿಗೆಯನಿಟ್ಟ ಬಾಲರೂಪನ ನೋಡಿ

ನೀಲಮೇಘಶ್ಯಾಮ ನಿರ್ಮಲಾತ್ಮ

ಆಲಯದೆಡಬಲ ಗರುಡ ಮುಖ್ಯಪ್ರಾಣ

ಓಲೈಸೆ ಗೋಪಾಲಕೃಷ್ಣವಿಠಲನ 11

***

 

No comments:

Post a Comment