ಐದನೆ ವರ್ಷದ ಅಂತ್ಯ ಭಾಗದೊಳಗೆ
ಐದುವೊ ಮಾರ್ಗವನು ನಿಶ್ಚಯಿಸಿದೆ ಪ.
ಆದಿಮಾಸದ ಶುದ್ಧನವಮಿ ಸ್ಥಿರವಾರದಲಿ
ಮೋದಗುರುಗಳು ಬೋಧಿಸೆ | ದಯದಿ ಅ.ಪ.
ಐದನೆ ತಿಂಗಳಲಿ ಅಂಕುರುವು ಪಲ್ಲೈಸಿ
ಐದು ಇಂದ್ರಿಯವು ಕಲೆತು
ಐದು ಭೂತನ ಕಾಯ ಐದಲಾರದು ಜೊತೆಗೆ
ಐದುವುದು ಕರ್ಮ ಒಂದು
ಈ ದಿವ್ಯ ಮತಿಯೆನಗೆ ಸಾದರದಿ ಪುಟ್ಟಲು
ಮೋದವಾಗುತ ಮನದೊಳು
ಆದಿದೈವನ ಕರುಣವಾದ ಬಳಿಕಿನ್ನೇನು
ಪಾದಪದ್ಮವ ತೋರೆಲೊ | ಸ್ವಾಮಿ 1
ಐದೆರಡು ಒಂದು ಇಂದ್ರಿಯಗಳನೆ ಬಂಧಿಸಿ
ಐದಿಸಿ ಮೂಲಸ್ಥಳಕೆ
ಐದು ರೂಪಾತ್ಮಕನ ಆದರದಿ ಪೂಜಿಸುತ
ಐದೊಂದು ದೂರ ತ್ಯಜಿಸಿ
ಐದು ನಾಲ್ಕು ತತ್ವದಧಿಪತಿಗಳನು
ಆದರದಿ ಧ್ಯಾನಮಾಡಿ
ಐದು ಮೂರು ದಳದಿ ಆದಿತ್ಯನಂತಿರುವ
ಶ್ರೀಧರನ ನುತಿಸಿ ನುತಿಸಿ | ಸ್ತುತಿಸಿ 2
ಐದು ಭೇದಗಳ ಮತ ಸ್ಥಾಪಕರ ಕರುಣದಲಿ
ಐದು ಮೂರನೆ ಖಂಡಿಸಿ
ಐದೆರಡು ರೂಪಕನ ಆದರದಿ ಸ್ತುತಿಸುತ್ತ
ಭೇದಿಸಿ ಹೃದಯಗ್ರಂಥಿ
ಶ್ರೀದ ಶ್ರೀಗೋಪಾಲಕೃಷ್ಣವಿಠ್ಠಲನ ಪದ
ಆದರದಿ ನಂಬಿ ಸ್ತುತಿಸಿ
ಈ ದಾರಿ ಕಾಣಲು ಇದಕೆ ಕಾರಣದಿವ್ಯ
ಮೋದ ಶ್ರೀಗುರು ಕರುಣವೋ | ದಯವೋ 3
****
No comments:
Post a Comment