ಶ್ರೀವ್ಯಾಸತತ್ವಜ್ಞತೀರ್ಥ ವಿರಚಿತ (ವಾಸುದೇವವಿಟ್ಠಲ ಅಂಕಿತ)
ಶ್ರೀನರಸಿಂಹದೇವರ ಸುಳಾದಿ
ರಾಗ ನಾಟಿ
ಧ್ರುವತಾಳ
ಶ್ರೀನಾರಸಿಂಹ ದೇವ ನೀನೆ ಸಾರ ಹೃದಯ
ಕಾರಣ ಕಾರಣಕನಿಮಿತ್ಯ ಬಂಧೊ
ತೋರದೊ ಮುಂದಿನ ಮಾರಿ ಎನಗೆ ಇನ್ನು
ತೋರಿಸೊ ಪರಿಹಾರದುಪಾಯವ
ತೋರಿಪ ದೇವ ನೀ ಇನ್ನೊಂದು ಎನಗಿಲ್ಲ
ಕಾರುಣಿಕ ದೇವತಿ ನೀನೆ ಸ್ವಾಮಿ
ಮಾರಿಗೆ ಮಾರಿಗೂ ನಿನ್ನ ಹೊರತಿನ್ನಿಲ್ಲ
ಸಾರಿದೆ ನಿನ್ನಂಘ್ರಿ ದುರ್ಗ ದುರ್ಗಾ
ಶ್ರೀರಮಣನೆ ನಿನ್ನ ಚರಣಕ್ಕೆ ಎನ್ನಯ
ಕೊರಳ ಕಟ್ಟಿದೆನೊ ಬಿಡಸಲ್ಲದೊ
ತೋರಿದ ಮೇಲಿನ್ನು ವಾಸುದೇವವಿಟ್ಠಲ
ಭಾರ ಕರ್ತೃವೆ ಎನ್ನ ಕೈಪಿಡಿಯೊ ॥ 1 ॥
ಮಟ್ಟತಾಳ
ನಿನಗಾರೆದರಿಲ್ಲ ಎನಗನ್ಯ ಗತಿಯಿಲ್ಲ
ಮನವಂಜಿಸುತಿದೆ ಹರಕು ದುರಿತವೊ
ಮನದಲ್ಲಿ ತನುವಿಲಿ ನೀನೇವೆ ಚೆನ್ನಾಗಿ
ಘನ್ನ ಧೈರ್ಯವನೀಯೋ ವಾಸುದೇವವಿಟ್ಠಲ ॥ 2 ॥
ರೂಪಕತಾಳ
ಎನ್ನಪರಾಧಗಳೆಣಿಸೆನೆಂದರೆ ಅದರ
ಕೊನೆಯಿಲ್ಲ ಮೊದಲಿಲ್ಲ ಹುರುಳಿಲ್ಲವೊ
ಕ್ಷಣ ಕ್ಷಣಕ್ಕ್ಹೊಸ ಪರಿ ಮಾಡುವೆನಲ್ಲದೆ
ಅನುತಾಪ ಇನಿತಿನ್ನ ಬಡಬಲ್ಲಿನೆ
ನಾನು ನಿನ್ನಯ ಪಾದ ನೆನೆಯದೆ ಪೋದೆನೊ
ಮನುಜ ಪಶು ಎಂದು ಎನ್ನಲ್ಲಿ ದಯ ಮಾಡೊ
ಅನಿಮಿತ್ಯ ಬಂಧು ವಾಸುದೇವವಿಟ್ಠಲರೇಯಾ ॥ 3 ॥
ಝಂಪಿತಾಳ
ಎನ್ನಯ ಸಾಧನ ಕಾಲ ನಾ ಬಲ್ಲೆನೆ
ಉನ್ನತ ಫಲವು ತಿಳಿಯಲೀ ಬಲ್ಲೆನೆ
ಮುನ್ನೆ ಬಾಹುವ ಮಾರಿ ಹಾರ್ಹೊಡಿಯ ಬಲ್ಲೆನೆ
ಪೂರ್ಣಮತ್ತ್ಯಾಗಮವ ಮತ್ತೊಮ್ಮೆ ಮತ್ತೊಮ್ಮೆ
ಚನ್ನಾಗಿ ಪೇಳುವೆನೆಂಬೊದೊಂದೂ
ಮನ್ನದಾಸಿಯು ವಾಸುದೇವವಿಟ್ಠಲರೇಯ
ಬಿನ್ನಪವ ಲಾಲಿಸೊ ಕರುಣಸಿಂಧೊ ॥ 4 ॥
ತ್ರಿವಿಡಿತಾಳ
ಎನ್ನಯ ಆಯುಷ್ಯ ಬೆಳಸಲಿ ಬಲ್ಲಿನೆ
ಉನ್ನತ ಸಾಧನ ಮಾಡುವೇನೆ
ಘನ್ನ ದಯಾನಿಧೆ ನೀನೆವೆ ಎನ್ನಲ್ಲಿ
ಸನ್ನದ್ಧ್ಯನಾಗೆನ್ನ ಸಲಹಬೇಕೊ
ಚಿನ್ನರ ಛಲವನ್ನು ಗೆಲಿಪರೊ ಪಿರಿಯರು
ಚಿನ್ನರೊಳಗೆ ಮೊದಲಿಗನೊ ನಾನೊ
ನಿನ್ನ ಮನಕ ತಂದು ಛಲವ ಗೆಲಿಸಬೇಕು
ಅನ್ಯನೆ ನಾ ವಾಸುದೇವವಿಟ್ಠಲರೇಯಾ ॥ 5 ॥
ಅಟ್ಟತಾಳ
ಮೊದಲು ಮೃಕಂಡು ಸುತ ತನ್ನಾಯುವಿಗೆ ನಿನ್ನ
ಪದರಕ್ಕೆ ಬೀಳಲು ಆತನ್ನ ಬಹುಕಾಲ
ಬದುಕಿಸಲಿಲ್ಲವೆ ಗುರುಸುತ ಯಮಪುರಕೆ
ಪೋದನ್ನ ತರಲಿಲ್ಲೆ ಕಸಿಪುಸುತ ನಿಮಿತ್ತ -
ಕ್ಕೊದಗಿ ಬರಲಿಲ್ಲೆ ವಿಧಿ ಅಸ್ತ್ರವನು ನೀ
ಒದೆದು ಪೊರಿಯಲಿಲ್ಲೆ ಪರಿಕ್ಷಿತುವಿನ ಸ್ವಾಮಿ
ಎದಿರಾರೊ ನಿನಗಿನ್ನು ಎನಗೆ ನುಡಿದ ಮಾತು
ಬದಲಾಡದಿರೊ ವಾಸುದೇವವಿಟ್ಠಲರೇಯಾ
ಸದಮಲ ದಯಪೂರ್ಣ ಪೊರೆಯಬೇಕೆನ್ನ ॥ 6 ॥
ಆದಿತಾಳ
ಕಾಲ ಕಲಿಯುಗ ಕೇಳುವರೆ ಇಲ್ಲ
ಕೀಳು ಜನರುಗಳು ತಾಳರೊ ಧರ್ಮವ
ಬಾಳುವೆನೆನಿತೊ ನೀ ಕೇಳದಿದ್ದರೆ ಕೃಷ್ಣ
ವೇಳ್ಯೆ ವೇಳ್ಯೆಗೆ ದಯಾಳೆ ನಂಬಿದೆ ನಿನ್ನ
ಧಾಳಿಯ ಮಾರಿಯನ್ನು ಸೀಳಿ ಮೊರೆಯನ್ನು
ಕೇಳಿ ನಿನ್ನಯ ಪದ ಧೂಳಿ ಆ ಎನ್ನಯ ಮನ
ಭೂಷಣ ಮಾಡಿ ಬಾಳಿಸು ಬಹುಕಾಲ ವಾಸುದೇವವಿಟ್ಠಲ ॥ 7 ॥
ಜತೆ
ನೀನೆ ದಯಾಸಿಂಧೊ ಆನೇನು ಬೇಡೋದು
ದಾನಿಗಳರಸ ವಾಸುದೇವವಿಟ್ಠಲರೇಯಾ ॥
****
No comments:
Post a Comment