Tuesday, 1 June 2021

ನಿನ್ನ ನೋಡಿ ಧನ್ಯನಾದೆನು ಶ್ರೀರಂಗನಾಥ ankita venkatakrishna

by yadugiriyamma 

 ದ್ವಾದಶನಾಮ ಸ್ತುತಿ

ನಿನ್ನ ನೋಡಿ ಧನ್ಯನಾದೆನು ಶ್ರೀರಂಗನಾಥ ಪ


ನಿನ್ನ ನೋಡಿ ಧನ್ಯನಾದೆ ಪನ್ನಗಶಯನ ರಂಗ

ಮನ್ನಿಸಿ ರಕ್ಷಿಸು ಎನ್ನ ಮುನ್ನಜನ್ಮ ಬಾರದಂತೆ ಅ.ಪ.


ಆಚಾರ್ಯರಿಗೆ ಅಭಿವಂದಿಸಿ ಅಜನರಾಣಿಯನ್ನು ಭಜಿಸಿ

ಅರ್ಚ ಶೇಷಶಯನ ಲಕ್ಷ್ಮಿಗೆರಗಿ ಕೇಶವ ನಿಮ್ಮ ಸ್ತುತಿಸುವೆ 1

ಆದಿಸೃಷ್ಟಿಯಲ್ಲಿ ಬ್ರಹ್ಮನ ನಾಭಿಕಮಲದಲ್ಲಿ ಸೃಷ್ಟಿಸಿ

ವೇದಸಾರವಾದ ಪ್ರಣವ ಓದಿ ಪೇಳಿದ ನಾರಾಯಣ 2

[ಆರ್ತಿ]ಯಿಂದ ಅಜನು ನಿಮ್ಮ ಮೂರ್ತಿಗಾಗಿ ತಪವ ಮಾಡೆ

ಅರ್ತಿಯಿಂದ ಒಲಿದು ಬಂದ ಮಧುವೈರಿ ಮಾಧವಾ 3

ಪ್ರಣವಾಕಾರ ವಿಮಾನದಲ್ಲಿ ನಾಲ್ಕು ವೇದಶೃಂಗವಿರಲು

[ವಿಷ್ಣು] ಪರವಾಸುದೇವರಿಂದ ಬಂದ ಶ್ರೀಗೋವಿಂದ 4

ಸತ್ಯಲೋಕದಲ್ಲಿ ನಿಂತು ನಿತ್ಯಪೂಜೆಯನ್ನು ಗ್ರಹಿಸಿ

ಮತ್ತೆ ಇಕ್ಷ್ವಾಕುಗೊಲಿದ ವಿಶ್ವಮೂರುತಿ ವಿಷ್ಣುವೇ 5

ಸರಯು ತಮಸ ತೀರಮಧ್ಯದಿ ಹರಿಯೆ ನಿಮ್ಮನಿರಿಸಿ ದೊರೆಯು

ಪರಮಪುರುಷನಿಂದ ಪೂಜೆ ಗ್ರಹಿಸಿದ ಮಧುಸೂದÀನ 6

ರಾಜ್ಯಾಭಿಷೇಕ ಕಾಲದಲ್ಲಿ ರಾಮಚಂದ್ರರು ರಾಕ್ಷಸೇಂದ್ರಗೆ ಕೊಡಲು

[ರಾಜ್ಯವ] ಕಾವೇರಿ ಮಧ್ಯದಿನಿಂದು ತ್ರಿಜಗವಳೆದ ತ್ರಿವಿಕ್ರಮ 7

ಫಾಲ್ಗುಣ ಮೀನ ಉತ್ತರ ಫಲ್ಗುನೀ ನಕ್ಷತ್ರದಲ್ಲಿ

ಬಾಲನಾಗಿ ಚಂದ್ರಪುಷ್ಕರಿಣಿ ತೀರದಿ ನಿಂದ ವಾಮನ 8

ಧರ್ಮವರ್ಮದೊರೆಯು ತನ್ನ ಕನ್ನಿಕೆಯನು ಕೊಡಲು

ಜಾಮಾತನೆನಿಸಿ ಗ್ರಹಿಸಿ[ದ] ಶ್ರೀದೇವಿ ಸಹಿತ ಶ್ರೀಧರ 9

ಮಳೆಯನಿಟ್ಟು ಧ್ವಜವಕಟ್ಟಿ ಸುರರ ಕರದು ಯಾಗವ ಮಾಡಿ

ಯಾತ್ರದಾನದ [ತಳೆದ] ಹೃದಯವಾಸ ಹೃಷಿಕೇಶವ 10

ವೀರ ಮರುದಿನದಿ ಜಟಾಶೋಧಕರ ಮಂಟಪದಿ ನಿಂದು (?)

[ಧೀರ] ಮುದುಕಿಗೊಲಿದು ದಧ್ಯಾನ್ನವ ಉಂಡ ಶ್ರೀಪದ್ಮನಾಭ 11

ನಾಲ್ಕು ದಿವಸದಲ್ಲಿ ನಾಗವೈರಿಯನ್ನು ಏರಿಬಂದು

ಕಲ್ಪವೃಕ್ಷವು ಸರ್ಪವಾಹನ ಏರಿದ ದಾಮೋದರ 12

ಆರು ದಿವಸದಲ್ಲಿ ವರಿಯೂರಿಗೆ ಹೋಗಿ ನಿಮ್ಮ

ನಾರಿಯ ಸಂತೈಸಿ ಮಾಲೆಧರಿಸಿದ ಸಂಕರ್ಷಣ 13

[ಮಾರನೆ] ದಿವಸದಲಿ ಚೂರ್ಣಾಭಿಷೇಕವನು ಧರಿಸಿ

ನಾರಿಮನೆಯಲಿ ನಿಂದು ವಾಸವಾದ ವಾಸುದೇವ 14

ಎಲ್ಲೇಕೆರೆಗೆ ಪೋಗಿ ಭೂಮಿಯೆಲ್ಲ ನೋಡಿ ಹರುಷದಿಂದ

ಅ[ಲ್ಲೆ] ತೇಜಿಯನೇರಿ ತೇರಿನೆದುರೆ ಪೇರಿಬಿಟ್ಟ ಪ್ರದ್ಯುಮ್ನ 15

ಪಂಗುನ್ಯತ್ತರವು ಬರಲು ಉಂಗುರವನು ಬೇಡಿತಂದು

ಅಂಗನೇಯ ಬಾಗಿಲೆದುರೆ ಪ್ರಸಿದ್ಧನಾದ ಅನಿರುದ್ಧ 16

ಸಿಂಧುಶಯನ[ನ] ಬರವನೋಡಿ ಇಂದುಮುಖಿಯು ಕದವಮುಚ್ಚೆ

ತಿಂದ ಪಂಜಿನಪ್ರಹಾರ ಹರುಷದಿಂದ ಪುರುಷೋತ್ತಮ 17

ಪತ್ನಿಯೊಡನೆ ಪ್ರೇಮಕಲಹ ಅರ್ತಿಯಿಂದ ಮಾಡುತಿರಲು ವಿಷ್ಣು

ಚಿತ್ತರ ವಾಕ್ಯದಿಂದ ಅರಸಿಗೇರಿದಾ ಅಧೋಕ್ಷಜಾ 18

ಮಂದರೋದ್ಧರ ತನ್ನ ಇಂದಿರೆಸಹಿತವಾಗಿ

ಬಂದು ಗೋರಥವನೇರಿ ನಾಲ್ಕುಬೀದಿ ಮೆರೆದ ನಾರಸಿಂಹ 19

ವಾರಿಜಾಕ್ಷ ರಥವನಿಳಿದು ಕಾವೇರಿಯಲ್ಲಿ ತೀರ್ಥವಿತ್ತು

ದರ್ಪಣದ ಗೃಹದಿ ನಿಂದ ಅರ್ತಿಯಿಂದ ಅಚ್ಚುತ 20

ಸಪ್ತ ಆವರಣವೆಲ್ಲ ಶಬ್ದವಿಲ್ಲದೆ ಸುತ್ತಿ ಬಂದು

ಭಕ್ತ ಭಾಷ್ಯಕಾರರಿಗೊಲಿದ ದುಷ್ಟಮರ್ದನ ಜನಾರ್ಧನ 21

ಪೃಥವಿಯೊಳಗಾಶ್ಚರ್ಯವಾದ ಪ್ರತಿಯಿಲ್ಲದ ಪಲ್ಲಕ್ಕಿಯೇರಿ

ಅತಿಶಯದಿಂದ ಬಂದ ಉರಗಶಯನ ಉಪೇಂದ್ರ 22

ಅಂದು ಸುರರ ಛಂದದಿಂದ ಮಂದಿರಕ್ಕೆ ಕಳುಹಿ ರಂಗ

ಬಂದು ಭಕ್ತರ ಪಾಪ[ವ] ಪರಿಹರಿಸಿದಾ ಶ್ರೀಹರಿ 23

ಅಷ್ಟು ಚರಿತ್ರೆಯನ್ನು ಕೇಳಿ ಕಟ್ಟಿದ ಕಂಕಣವ ಬಿಚ್ಚಿ

ಶ್ರೇಷ್ಠವಾದ ಸ್ಥಾನದಲ್ಲಿ ಮಂತ್ರಿ ಸಹಿತನಿಂದ ಶ್ರೀಕೃಷ್ಣ 24

ದಕ್ಷಿಣಗಂಗೆಯಾಗಿ ನಿಂದು ಭಕ್ತನ ದ್ವೀಪವನ್ನು ನೋಡುತ

ಮುಕ್ತಿಮಾರ್ಗವನ್ನು ತೋರಿದ ಭಕ್ತವತ್ಸಲ ವೆಂಕಟರಂಗ 25

***


No comments:

Post a Comment