ಶ್ರೀವ್ಯಾಸತತ್ವಜ್ಞತೀರ್ಥ ವಿರಚಿತ ಶ್ರೀನರಸಿಂಹದೇವರ ಪ್ರಾರ್ಥನಾ ಸುಳಾದಿ
(ಗುರುಗಳಾದ ಶ್ರೀಭುವನೇಂದ್ರತೀರ್ಥರಿಂದ ಆಶ್ರಮ ಸ್ವೀಕರಿಸಿದ ನಂತರ, ಶ್ರೀವಿಭುದೇಂದ್ರತೀರ್ಥ ಕರಾರ್ಚಿತ ಷೋಡಶ ಬಾಹು ನರಸಿಂಹದೇವರನ್ನು ಕೊಟ್ಟಾಗ ಮಾಡಿದ್ದು.)
ರಾಗ ನೀಲಾಂಬರಿ
ಧ್ರುವತಾಳ
ಸೃತಿ ವಾರಾಧಿಯೊಳಗೆ ಶಳವಿಗೆ ಪೋಗುವಂಗೆ
ಗತಿಯಾಗಿ ಧಡಕೆ ಸೇರಿಸಿದ್ಯೋ ಸ್ವಾಮಿ
ಯತಿ ಮಾಡಿ ಕೂಡಿಸಿದಿ ನಿನ್ನ ಪಾದಾಂಬುಜದಲ್ಲಿ
ರತಿ ಕೊಟ್ಟು ಉದ್ಧರಿಸೊ ವಾಸುದೇವವಿಟ್ಠಲ ॥ 1 ॥
ಮಟ್ಟತಾಳ
ಮುದಕಿಯ ಕೈಯಲ್ಲಿ ಪುಲಿವಶವಾದಂತೆ
ಮದಡನ ಕೈಯಲ್ಲಿ ಸಿಕ್ಕಿದ್ಯೋ ನರಹರಿಯೆ
ಒದಗಿ ಸೇವೆಯ ಮಾಡಲಾರೆ ಜರೆಯು ಬಂತು
ಮುದದಿ ತುತಿಯ ಮಾಡಲಾಪಿನೆ ಸಹಸ್ರ
ವದನಗೆ ವಶವಲ್ಲ ವಾಸುದೇವವಿಟ್ಠಲ ॥ 2 ॥
ತ್ರಿವಿಡಿತಾಳ
ದಾನವಿಲ್ಲದಾಶ್ರಮ ಯಜನವು ಮೊದಲಿಲ್ಲ
ಸ್ನಾನ ಮಾತ್ರವು ಮಾಡಿ ನಿನ್ನ ಮೂರುತಿಗಳನು
ಧ್ಯಾನವ ಮಾಡಿಸೊ ಅನುದಿನ ತಪ್ಪದೆ
ಹೀನರ ಕೃತಿಯನ್ನೆ ಖಂಡನೆ ಮಾಡಿಸೊ
ಜ್ಞಾನ ಪುಟ್ಟುವಂತೆ ಪ್ರವಚನ ಮಾಡಿಸೊ
ದೀನವತ್ಸಲ ವಾಸುದೇವವಿಟ್ಠಲರೇಯಾ ॥ 3 ॥
ಅಟ್ಟತಾಳ
ಪಾಮರ ಜನರೊಳು ಸಿಕ್ಕಿದೆ ನಿನ್ನಯ
ನಾಮವ ಪೇಳುವ ಜನರನ್ನ ಕಾಣಿನೊ
ಸ್ವಾಮಿ ಏನುಗತಿ ಎನ್ನ ಹೃದಯವೆಂಬ
ಧಾಮದಿ ಪೊಳಿಯೊ ವಾಸುದೇವವಿಟ್ಠಲ್ಲ ॥ 4 ॥
ಏಕತಾಳ
ಕಾಕ ಕುಲದೊಳು ಕೋಕಿಲ ದಣಿವಂತೆ
ಕೂಕ ಜನರೊಳು ಸಿಕ್ಕಿದೆ ನರಹರೆ
ಲೋಕಧ್ಹರಟಿಗಳಲ್ಲದೆ ಉತ್ತಮ -
ಶ್ಲೋಕನ ವಾರ್ತಿ ನುಡಿವವರಿಲ್ಲವೋ
ಪಾಕಶಾಸನನನುಜ ಪೊರಿಯೊ ಕೇಳೆನ್ನ
ವಾಕು ಹೇ ವಾಸುದೇವವಿಟ್ಠಲ ॥ 5 ॥
ಜತೆ
ಯಾತಕ್ಕೆ ನರಸಿಂಹ ನೀನೆವೇ ಎನ್ನ ಬೆ -
ನ್ನಾತು ರಕ್ಷಿಸೊ ವಾಸುದೇವವಿಟ್ಠಲರೇಯಾ ॥
ಲಘುಟಿಪ್ಪಣಿ:
ಸೃತಿ ವಾರಾಧಿಯೊಳಗೆ = ಸರತಿನೊಳಗೆ ;
ಕೂಕ ಜನರೊಳು = ಕುಹಕ ಜನರೊಳು ;
****
No comments:
Post a Comment