ಯಾಕೆ ಪುಟ್ಟಿಸಿದ್ಯೊ ಭೂಲೋಕದೊಳು ಎನ್ನಂಥ
ಪಾಪಿಷ್ಠರ ಕಾಣೆನೋ ಕೃಷ್ಣಾ ಪ
ಕಾಕು ಮಾಡದೇ ಕಾಯೋ ಶ್ರೀಕಾಂತ ಎನ್ನ
ಪಾತಗಳ ತರಿದು ಕೃಷ್ಣಾ ಅ.ಪ.
ಜನನಿ ಜನಕರು ಮುನ್ನಾ ಘನ ಪ್ರೀತಿಯನ್ನಾ ತನುವನ್ನು
ಬೆಳಸಿದದಕೆ ಕೃಷ್ಣಾ
ಮನಿ ಮನಿ ತಿರುಗಿ ಮುಪ್ಪಿನಲಿ ಸಲಹುವನೆಂದು ಘನವಿದ್ಯೆ
ಕಲಿಸಿದಕೆÉ ಕೃಷ್ಣಾ
ಧನ ತರುವ ಕಾಲದಲಿ ವನಿತೆ ಸುತರಿಗೆ ಮೆಚ್ಚಿ
ಜನನಿ ಜನಕರ ಬಿಟ್ಟೆನೋ ಕೃಷ್ಣಾ 1
ಶುದ್ಧ ವೈಷ್ಣವನಾಗಿ ಪದ್ಧತಿಯನರಿಯದೇ ಅಪದ್ಧಕಾರ್ಯವ
ಮಾಡಿದ ಕೃಷ್ಣಾ
ಮಧ್ವರಾಯರ ಗ್ರಂಥ ಇದ್ದದ್ದೆ ಅರಿಯೆನೊ ಹದ್ದಿನಂದದಿ
ಬಾಳಿದೆ ಕೃಷ್ಣಾ
ಬುದ್ಧಿ ಹೋಯಿತು ಎನಗೆ ಕದ್ದುಂಡು ಕಾಯವನು
ಉದ್ದಾಗಿ ಬೆಳೆಸಿ ಮೆರೆದೆ ಕೃಷ್ಣಾ 2
ಹಣವಿದ್ದವನ ಕಂಡು ಎಣಿಕೆ ಇಲ್ಲದೆ ಸ್ತುತಿಸಿ ತೃಣಕಿಂತ
ಕಡೆಯಾದೆನೋ ಕೃಷ್ಣಾ
ಗುಣವಂತರಾದ ಬ್ರಾಹ್ಮಣರನೆ ನಿಂದಿಸಿದೆ ಕೆಣಕಿ ಹಾಸ್ಯವ
ಮಾಡಿದೆ ಕೃಷ್ಣಾ
ಗಣನೆ ಇಲ್ಲದೆ ಪರರ ಹಣವನ್ನು ಅಪಹರಿಸಿ
ಬಣಗ ಲೆಕ್ಕಸನಾದೆನೋ ಕೃಷ್ಣಾ 3
ಅಟ್ಟಹಾಸದಿ ಮಗನು ಹುಟ್ಟಿದಾ ದಿವಸದಲಿ ಮೃಷ್ಟಾನ್ನವ
ಮಾಡಿಸಿದೆನೋ ಕೃಷ್ಣಾ
ಸೃಷ್ಟೀಶನವತರಿಸಿದುತ್ಕøಷ್ಟ ದಿವಸಲಿ ಬಿಟ್ಟಿಬೇಸರ ಮಾಡಿದೆ ಕೃಷ್ಣಾ
ಇಷ್ಟು ದಿನಗಳು ದುಷ್ಟಕೃತಿಯಲಿ ಮನಸ್ಹಾಕಿ
ಪುಟ್ಟಿಸಿದ ನಿನ್ನ ಮರೆತೆ ಕೃಷ್ಣಾ 4
ಹಿಂದಾದ ಪಾಪಗಳ ಒಂದುಳಿಸದೇ ಕಳೆದು ಮುಂದೆ
ನೀ ಪಾಲಿಸುವುದು ಕೃಷ್ಣಾ
ಇಂದಿನಾರಭ್ಯ ಹೊಂದಿರುವ ತವಪಾದ ದ್ವಂದ್ವಗಳ
ತೋರಿಸುವುದು ಕೃಷ್ಣಾ
ಬಂಧು ಬಳಗವು ನೀನೆ ಮುಂದಿನಾ ಗತಿ ನೀನೆ
ತಂದೆ ಹನುಮೇಶವಿಠಲರಾ ಕೃಷ್ಣಾ 5
****
No comments:
Post a Comment