Monday, 31 May 2021

ತಾರತಮ್ಯವೆ ಕೇಳಿ vijaya vittala ankita suladi ಗುಣ ತಾರತಮ್ಯ ಸುಳಾದಿ TAARATAMYAVE KELI GUNA TARATAMYA SULADI

 Audio by Vidwan Sumukh Moudgalya


ಶ್ರೀ ವಿಜಯದಾಸಾರ್ಯ ವಿರಚಿತ  ಆರೋಹಣ ಗುಣ ತಾರತಮ್ಯ ಸುಳಾದಿ 


 ರಾಗ : ಭೈರವಿ   ಧ್ರುವತಾಳ 


ತಾರತಮ್ಯವೆ ಕೇಳಿ ನೀಚಕ್ರಮಾನುಸಾರ

ಮೂರಾರು ಭಕುತಿ ಭೇದ ಜ್ಞಾನದಿಂದ

ಮೂರು ಮೂರು ಮೂರು ವಿಧದೊಳು ನಿತ್ಯ ಸಂ-

ಸಾರಿಗಳುಂಟು, ಸ್ವರ್ಗ ನಿರಯ ಭೂ ಪ್ರಾಚುರ್ಯರು

ಧಾರುಣಿಯೊಳಗಿವರಿಗಭಿಧಾನವಿಲ್ಲಾ ವಿ-

ಸ್ತಾರ ರಾಜಸದವರು ಪ್ರಸಿದ್ಧಾ

ಘೋರ ತಾಮಸಿಗಳಿಗೆ ತಾರತಮ್ಯವೆ ಉಂಟು

ಬೀರುವೆ ಮತ್ತೊಂದು ಬರಹದಲ್ಲಿ

ಸಾರುವೆ ತಿಳಿ ಸರ್ವಜೀವಿಗಳೊಳು ಅ-

ಪಾರ ನೀಚನು ನೀಚತಮ ಕಲಿಯು

ಸಾರುವೆ ಎಲ್ಲಿಂದಿತ್ತ ಮುಕ್ತಿಯೋಗ್ಯ ಜನರನ್ನು

ಹಾರೈಸಿ ಮನೋವಾಚಾ ಕಾಯದಲ್ಲಿ

ಬಾರಿ ಬಾರಿಗೆ ಇದನೆ ಪಠಿಸಿದವರಿಗೆ ವಿ-

ಕಾರವಿಲ್ಲಾ ಕಾಣೊ ಇದ್ದ ಜ್ಞಾನ

ವೈರಾಗ್ಯ ಪುಟ್ಟುವದು ಅಶೇಷವಾಗಿ, ತತ್ತ

ದ್ವಾರದಿಂದಲಿ ಬಿಂಬ ಕಾಂಬುವರು

ಸಾರಿರೈಯ್ಯ ಸಾರಿ ಕೆಲಸಾರದೆ ಹರಿ ಬಂದು

ಸಾರೆದಲ್ಲಿ ಪೊಳೆವ ಅಡಿಗಡಿಗೆ

ಆರಾದರೇನು ಮತ್ತಾವನಾದರೆ ಏನು

ತಾರತಮ್ಯವ ತಿಳಿಯದಲೆ ಮುಕ್ತಿ ಇಲ್ಲಾ

ವಾರಿಯ ನೆಲೆಗಂಡು, ತಿರುಗಾಡಿದಂತೆ:ವಿ-

ಚಾರ ಲೇಶಾವಿಲ್ಲಾ ಚಿತ್ತಾದಲ್ಲಿ

ಮಾರುತ ಮೆಚ್ಚುವನು ಮುದದಿಂದ ಪಾಲಿಸುತ್ತ

ಸೇರಿಸುವನು ವೇಗ ಸುಜನರೊಡನೆ

ನಾರಾಯಣ ಸರ್ವಾಧಿಷ್ಠಾನದಲ್ಲಿ ಎನ್ನ

ಶಾರೀರದೊಳು ನಿಂದು ನುಡಿಸಿದ ಮಾತು

ಸ್ವಾರಸ್ಯವಾಗಲಿ ಆಗದೆ ಪೋಗಲಿ ಉ-

ದ್ದಾರ ಮಾಡುವದು ತಪ್ಪು ತಿದ್ದಿ

ಸೇರದು ಇದು ಮೂಲ ದುಷ್ಟ ಜನರ ಮನಕೆ

ಬಾರದು ಚನ್ನಾಗಿ ಒಲಿಸಿ ಪೇಳೆ ಭಾವ

ಓರಂತೆ ಎಲ್ಲ ಕೇಳಿ ಮುಕ್ತರ ಸ್ವಭಾವ

ಮೀರಿದಾನಂದದಿಂದ ಹಿಗ್ಗುತಿಹರು

ಮೂರಾರುಲಕ್ಷ ಕೋಟಿ ಸಂಖ್ಯೆ ಇಲ್ಲದ ನಮ-

ಸ್ಕಾರ ಮಾಡುವೆನು, ತ್ರಿಕರಣದಿ

ಮೂರು ಭುವನದೊಳು ಸತ್ಕೀರ್ತಿವಂತರಾದ

ಧೀರ ಶ್ರೀಪಾದರಾಯ ವ್ಯಾಸರಾಯ

ಚಾರು ವಿಜ್ಞಾನ ದೀಪ್ತಾ ಪುರಂದರ ರಾಯ ಈ

ಮೂರು ಮಂದಿಯ ಪರಿಪೂರ್ಣವಾದ

ಕಾರುಣ್ಯದಳತಿಗೆ ಅರ್ಹನಾಗಿ ಹರಿಯ

ಚಾರಿತ್ರೆ ಪೇಳುವಂತೆ ಹರಿಕೆ ಇತ್ತು

ವಾರವಾರಕ್ಕೆ ಗುಣವಂತನ್ನ ಮಾಡುವ

ಭಾರ ನಿಮ್ಮದು ಎಂದೆಂದಿಗಾದರು

ಆರುವರ್ಗವ ಗೆದ್ದು ಪೂರ್ವೋತ್ತರವ ತಿಳಿವ

ದಾರಿಯ ತೋರುವುದು ಬಡುವೆ ದೈನ್ಯ

ವಾರಣದಿಂದಲಿ ತೃಣಲತೌಷಧ ಗುಲ್ಮ

ಭೂರುಹ ಇವು ಸ್ಥಾವರವೆನಿಪವು

ವಾರಿಸಂಚಾರ. ಕ್ರಿಮಿ ಪಕ್ಷಿ ಮೃಗಂಗಳೆಲ್ಲ

ನೂರು ಗುಣಧಿಕಾಧಿಕ, ಸ್ಥಾವರ ನೋಡೆ

ಬ್ಯಾರೆ ಬ್ಯಾರೆ ಎಣಿಸೆ ಒಂದರಿಂದಾರಂಭಿಸಿ

ನೂರು ಪರಿಯಂತರ ಸಾಗುತಿದೆಕೋ

ಈ ರೀತಿಯಲ್ಲಿ ಉಂಟು ಇವು ಜಂಗಮಗಳೆನ್ನಿ

ಪೂರುತಿಯಲ್ಲಿ ಎಲ್ಲಾ ಮುಂದೆ ಕೇಳಿ

ಮೂರೊಂದು ಜಾತಿ ವರ್ನ ಮನಜೋತ್ತಮರೆ ಉಂಟು

ಹಾರುವ ರಾಜನ್ಯ ವೈಶ್ಯ ಶೂದ್ರ

ಆರೈದು ಕೇಳುವುದು ಅನುಲೋಮ ಪ್ರತಿಲೋಮ

ವಾರುತಿ ಎಂಬೋದಕ್ಕು ಇವರಿವರೊಳಗೆ

ತುರಿಯಾಶ್ರಮ ವಾನಪ್ರಸ್ಥ ಗೃಹಸ್ಥ ಬ್ರಹ್ಮ-

ಚಾರಿ ಎಂಬೋದಿಪ್ಪದು ಪರಿಪರಿ ವಿಧದಿ

ವಾರಣದಿ ಜಂಗಮರ ನೋಡೆ ಮನುಜೋತ್ತಮರು

ನೂರು ಗುಣದಿಂದ ವೆಗ್ಗಳರು

ಧಾರುಣಿಪತಿಗಳು ಇವರಿಗಿಂತಲಿ ನಿತ್ಯ

ನೂರುಗುಣದಿಂದ ಉತ್ತಮರು

ನಿರಂಶವುಳ್ಳ ಮನುಜ ಗಂಧರ್ವರೆಲ್ಲಾ ಒಂದು

ನೂರು ಗುಣದಿಂದಧಿಕ ಕ್ಷಿತಿಪರ ನೋಡೆ

ನಾರದಾಮುನಿವಂದ್ಯ ವಿಜಯವಿಠ್ಠಲರೇಯ 

ಆರಾಧಿಸಿ ಕೊಂಬನೀ ಪರಿ ಇವರಿಂದ ॥೧॥


 ಮಟ್ಟತಾಳ 


ಸುರ ಗಂಧರ್ವರೊಳು ಅಷ್ಟೋತ್ತರ ಜನರಾ

ವಿರಹಿತರನ ಮಾಡಿ ಉಳಿದವರನೆ ಸ್ತುತಿಸಿ

ನರ ಗಂಧರ್ವ ನೋಡಿ ಕೊಳಲಾಗಿ

ಎರಡೈವತ್ತು ಗುಣಕೆ ಉತ್ತಮರೆನ್ನಿ

ಚಿರಪಿತೃಗಳು ಶತಗುಣದಿಂದಧಿಕರಯ್ಯ

ಹರಿಯಂಗಸಂಗ ಗೋಪಿಕಾಜನ ಉತ್ತು-

ಮರು ಕಾಣೊ ನೂರು ಗುಣ ಇವರಿಗಿಂತ

ತರುವಾಯ ಅಜಾನಜ ದೇವತೆಗಳು

ಸುರ ಗಂಧರ್ವರೊಳು ಪೇಳಿದ ಶತ ಜನರು

ಎರಡೈವತ್ತು ಗುಣ ಕಡಿಮೆ ನೂರು ಕೋಟಿ

ಪರಮ ಋಷಿಗಳು ಸರಿಯೆನ್ನಿ ಅಜಾನಜರಿಗೆ

ಹಿರಿದಾಗಿ ತಿಳಿ ಗೋಪೀ ಜನರಿಗಿಂತ

ಎರಡು ಗುಣದಿಂದ ಉತ್ತಮರು ಇವರು

ಎರಡೆಂಟು ಸಾವಿರ ಮೇಲೆ ನೂರು ಮಂದಿ

ಸುರಮೊಗನ ಮಕ್ಕಳು ಕೃಷ್ಣನ ಸತಿಯರು

ಅರಿವದು ಮೂವತ್ತು ಜನ ಚಾರಣರು, ದೈ-

ತ್ಯರು ಇಷ್ಟೇಮಂದಿ ಸರುವ ಜಾತಿಗಳೊಳಗೆ

ಮಿರುಗುತಿಪ್ಪರು, ಎಪ್ಪತ್ತು ಜನರುವೊಂದೆ

ಸರಿಗುಣದವರಯ್ಯಾ ಅಜಾನರ ಸಮರು

ಮರೆಯದಿರಿವರೊಳಗೆ ಸಿದ್ಧರು ನೂರು ಜನ

ಶರಣ ವತ್ಸಲ ನಮ್ಮ ವಿಜಯವಿಠ್ಠಲರೇಯ 

ಮರೆಯದೆ ಇನಿತು ಮಾಡಿ ಕೊಡುತಲಿಪ್ಪ ॥೨॥


 ರೂಪಕತಾಳ 


ಪುಷ್ಕರ ಪರ್ಜನ್ಯನ ಮಡದಿ ಸಹ  ಕೆಲವು ಸುಮ

ನಸರು ಉತ್ತಮರು ಅಜಾನಸುರರ ನೋಡಿ

ಬಿಸಜಮಿತ್ರನ ಪುತ್ರ ಶನೈಶ್ಚರನೆಂಬುವನು

ದಶಗುಣವೆಗ್ಗಳನು ಎಂದೆಂದಿಗೆ

ಉಷಾದೇವಿ ಉತ್ತಮ ಶನಿಕಿಂತ ಲಾಲಿಪುದು

ಶಶಿತನುಜ ಬುಧನು ಇರುತಿಪ್ಪನು ಸ್ವಲ್ಪದಲ್ಲಿ

ವಸುಜೇಷ್ಠನ ನಾರಿ ಸ್ವಾಹಾದೇವಿ ಉಷಾಗಿಂತ

ದಶಗುಣಕೆ ಉತ್ತಮಳು ಕೆಲವು ದೇವತಿಗಳು

ಬೆಸವೆ ಕಿಂಚಿತು ವೆಗ್ಗಳರಕೆಯ ನೋಡೆ

ಪೆಸರುಳ್ಳ ಜಯಂತ ಇವರಿಗೆ ಸಮಗುಣನು

ಅಸಮ ಪರ್ಜನ್ಯ ಸಂಜ್ಞ ಗಂಗಾ ರೋಹಿಣಿ ಮ-

ಹಿಷವಾಹನ ರಾಣಿ ಶಾಮಲಾ ಕೋಮಲಾ

ಕುಶಲದಿಂದಲಿ ಕೇಳಿ ಸ್ವಾಹಾ ದೇವಿಗಿಂತ ರಂ-

ಜಿಸುವರು ಒಂದು ಗುಣದಿಂದಧೀಕರು 

ತ್ರಿದಶಗುಣ ಬಡಿಗ್ಯಾ ಇವರಿಗಿಂತ ಉತ್ತಮ

ವಶವಾಗಿ ಸುಮನಸರ ಪ್ರೀತಿ ಬಡಿಸುತಿಪ್ಪ

ಪಶುಪಾಲ ಗೋಪಾಲ ವಿಜಯವಿಠ್ಠಲ ರೇಯನ

ಹಸನಾಗಿ ಎಣಿಸಿ ಪೂಜಿಸುವರು ಚಿತ್ತದಲಿ ॥೩॥


 ಝಂಪೆತಾಳ 


ಮತ್ತೆ ಊರ್ವಶಿ ರಂಭೆ ಮೊದಲಾದವರು ತೊಂ-

ಬತ್ತೆರಡು ಜನರೆಂಟು ಮಂದಿ ಗಂಧರ್ವರು 

ಪಿತೃಗಳು ಏಳು ಜನ ಬಲ್ಯಾದಿಗಳು ದೇ-

ವೋತ್ತಮರು ಇದರಷ್ಟೆ ಮನುಗಳು ಹನ್ನೊಂದು 

ಹತ್ತು ಹತ್ತು ನೂರು ಮಂದಿ ಅರಸುಗಳು ಉಂಟು ಎಂ-

ಭತ್ತು ಋಷಿಗಳು ಇವರು ಸಮರು ಸತತಾ

ತತ್ತಳಿಸುತ್ತಿಪ್ಪರು ಎಲ್ಲೆಲ್ಲಿ ಕರ್ಮದೇ-

ವತ್ತಿಗಳು ಸಮವೆನ್ನಿ ಇವರೊಳಗಗ್ನಿ ಪುತ್ರರು

ಕಶ್ಯಪ ಋಚಿ ಕರ್ದಮ ಪ್ರಜಾ-

ಪತಿ ಪ್ರಹ್ಲಾದ ಶೃತಿ ಪ್ರಸಿದ್ಧ ಮೊದಲಾದ 

ಸತ್ಯವಂತರು ಸಮಾಯಿನ್ನು ಕೆಲವರು ಉಂಟು 

ಉತ್ತಮೋತ್ತಮ ನಮ್ಮ ವಿಜಯವಿಠ್ಠಲ ರೇಯನ

ನಿತ್ಯದಲಿ ಧ್ಯಾನಿಪರು ಉಪಧಿಷ್ಠರಾಗಿ ॥೪॥


 ತ್ರಿವಿಡಿತಾಳ 


ಒಂದು ಕಡಿಮೆ ಐವತ್ತು ಮರುತುಗಳು

ಒಂದು ಹತ್ತು ಜನ ರುದ್ರರೆನ್ನಿ 

ಅಂದದಲ್ಲಿ ಎಂಟು ವಸು ದ್ವಾದಶಾದಿತ್ಯ 

ಮುಂದೆ ವಿಶ್ವ ದೇವತಿಗಳು ಹತ್ತು 

ವೃಂದಾರಕರ ವೈದ್ಯ ದ್ಯಾವಾ ಪೃಥಿವಿ ಗುರು

ಒಂದೆರಡು ಪಿತೃಗಳು ಋಭು ಪ್ರಧಾನ

ಗಂಧವಾಹನನ ಕೂಡಿಸಿ ನೋಡಲು 

ಅಂದೆ ಎಂದೆಂದಿಗೆ ಶತಸ್ಥರು ಕಾಣಿರೋ

ನಂದದಲಿ ಇಲ್ಲಿ ತಿಳಿವ ಪ್ರಮೇಯಗಳುಂಟು 

ಹಿಂದೆ ಪೇಳಿದ ಉಕ್ತರುಗಳ ಗುಣಿಸುವದು 

ಅಂದೆ ಗರಳ ಕುಡಿದ ವಾಯು ಅಹಂಕಾರಿಕ

ಕುಂದದೆ ಪ್ರವಹ ಇವರು ಮೂರುಮಂದಿ ಪಿತೃ-

ವೃಂದಾರಕರ ಗುರು ಸಹಿತವಾಗಿ 

ಸಂದೇಹ ವಿಡಿಯದೆ ಗುಣಿತ ಮಾಡುವದು ; ಹ-

ನ್ನೊಂದು ನಾಲ್ಕು ಜನರ ಬಿಟ್ಟು ಉಳಿದ 

ಸಂದೋಹಗಳ ನೋಢು ಎಂಭತ್ತೈದು ಮಂದಿ 

ಒಂದೆ ಸಮರು ಧನಪ ಗಣಪಾ ಮತ್ತೆ ವಾಯು 

ನಂದನಾ ವಿಶ್ವಕ್ಸೇನರು ಇವರೊಳು 

ಪೊಂದಿದವರೆನ್ನು  ಇವರ ತರುವಾಯ 

ಸಂದಿಪ್ಪರು ನಿತ್ಯ ಪ್ರಾವಹಿ ನೈರುತ್ಯ 

ವಂದಿಸುವದು ತಾರಾಮಿತ್ರನೆಂಬುವನು ಗುಣ-

ದಿಂದ ಸಮಕಾಣೋ ಕ್ಷಿತಿಯೊಳಗೆ 

ಶಿಂಧು ಸಯನ  ನಮ್ಮ ವಿಜಯವಿಠ್ಠಲ ರೇಯ

ತಂದೆ ತಾಯಿಯಾಗಿ ಸರ್ವರನ ಸಲಹುವಾ ॥೫॥


 ಧೃವತಾಳ 


ಎರಡುಗುಣಾಧಿಕ್ಯರು ; ಕ್ರಮದಿಂದ ಇವರೆಲ್ಲಾ

ಪರಜನ್ಯನ್ನ ನೋಡಿ ಕೊಳಲಾಗಿ ಇತ್ತಲು 

ಮರೀಚ್ಯಾದಿಗಳು ಸಪ್ತ ಕೌಶಿಕ ವೈವಸ್ವತ 

ಇರದೆ ಒಂಭತ್ತು ಮಂದಿ ಸಮ ಮಿತ್ರಗಿಂದುತ್ತಮರು 

ತರುವಾಯ ಪ್ರಸೂತಿ ಅಗ್ನಿ ಭೃಗು ಋಷಿ ಮೂ-

ವರು ಸಮ ಮರೀಚ್ಯಾದಿಗಳಿಗೆ ದ್ವಿಗುಣದಿಂದಧಿಕರು 

ಸುರಮುನಿ ನಾರದನು ಇವರಿಗಿಂತುತ್ತಮನು 

ವರುಣದೇವನು ನಾರದಗಿಂತ ಪಾದಾರ್ಧ 

ಹಿರಿದು ಕಾಣೋ ಗುಣದಜಂದಲಿ ಎಣಿಸೆ 

ತರಣಿ ಸೂನು ಧರ್ಮ ವಿವಸ್ವಾನ್ ಸೂರ್ಯ ಚಂದ್ರ

ತರುಣಿ ಮಾನವಿ ಇವರು ಜನ ನಾಲ್ಕು ಸಮರೈಯ್ಯ 

ವರುಣಗಿಂದಲಿ ಒಂದರ್ಧ ಗುಣಾಧಿಕ್ಯರು 

ಪರಮಪುರುಷ ನಮ್ಮ ವಿಜಯವಿಠ್ಠಲ ರೇಯನ

ಕರುಣದಿಂದಲಿ ಈ ಪರಿ ಸುಖಿಸುತಿಪ್ಪರು ॥೬॥


 ರೂಪಕತಾಳ 


ಮರೀಚಿ ನಾಮದಲ್ಲಿಪ್ಪ ಪ್ರವಾಹ ವಾಯು 

ತರಣಿಗಿಂದಲಿ ನೋಡಿ ಎರಡು ಗುಣದಿಂದುತ್ತಮ ಕಾಣೋ

ಸುರನಾಯಕನ ರಾಣಿ ಶಚಿದೇವಿ ಅನಿರುದ್ಧ 

ಗುರು ದಕ್ಷ ಪ್ರಜೇಶ್ವರ ಸ್ವಾಯಂಭುವ ಮನು 

ಗುರು ರತಿ ಮೊದಲಾಗಿ ಎಣಿಸು ಒಂದೇ ಸಮನೆಂದು 

ಇರುತಿಪ್ಪರು ನಾಸಿಕ್ಯರಿಂದಧಿಕ ಗುಣದವರೆನ್ನಿ ಅಹಂ-

ಕಾರಿಕ ಪ್ರಾಣ ಗುರುಗಳಿಗಿಂತ ಹತ್ತುಗುಣಕೆ ಹಿರಿಯ 

ನರಪ್ರಾಣ ವಿಜಯವಿಠ್ಠಲರೇಯನ ಲೀಲೆಗೆ 

ಶರಣೆಂದು ಕೊಂಡಾಡಿ ಮನಮುಟ್ಟಿ ನಲಿದಾಡೆ ॥೭ ॥


 ಅಟ್ಟತಾಳ 


ವೃತ್ರಾರಿ ಮನುಮಥ ಒಂದೇ ಸಮರು ಮ-

ರುತ್ತಾಹಂಕಾರಿಕನಿಂದಲಿ ನೋಡಲು 

ಹತ್ತು ಗುಣಾಧಿಕರೆಂದೆನಿಸುವರು ಪಾ-

ರ್ವತ್ತಿ ಸೌಪರ್ಣಿ ವಾರುಣೀ ಒಂದೆ ಸಮ

ಚಿತ್ತಜ ಸುರಪತಿಗಿಂತ ಮೂರು ಗುಣ

ಉತ್ತಮರಾಗಿ ಒಪ್ಪುತಿಹರು ಕೇಳಿ 

ಮಿತ್ರವಿಂದ ಜಾಂಬವತಿ ನೀಲಾ ಭದ್ರಾ

ಮಿತ್ರನಂದನೆ ಲಕ್ಷಣೆ ಇವರಾರು ಜನ -

ರುತ್ತಮರೆನ್ನಿ ಸೌಪರ್ಣಿಗಳಿಗೆ ಗುಣ

ಹತ್ತರ್ಧ ಮೇಲೆ ಶ್ರೀ ಲಕುಮಿಯಾವೇಶವು 

ವ್ಯಕ್ತಿಯಾದಾಗಲು ಶೇಷದೇವರಿಗೆ ಕಿಂ-

ಚಿತ್ತು ನೀಚರು ಕಾಣೋ ಜಾಂಬವತಿ ಅಧಿಕಳು 

ಇತ್ತ ಲಾಲಿಪುದು ಗರುಡ ಶೇಷ ರುದ್ರ -

ರುತ್ತಮರು ಕಾಣೋ ನೂರು ಗುಣ ತಮ್ಮ 

ಪತ್ನಿಯರ ನೋಡೆ ಸರ್ವದಾ ಇದೆ , ಸರ-

ಸ್ವತ್ತಿ ಭಾರತೀ ಇವರು ಒಂದೇ ಸಮ ಐ-

ವತ್ತು ಇದರಷ್ಟೇ ಗುಣದಿಂಧದಿಕರು ಪಾ-

ರ್ವತ್ತಿ ಪತಿ ಶೇಷ ಗರುಡ ದೇವರ ನೋಡೆ 

ಉತ್ತಮೋತ್ತಮ ನಮ್ಮ ವಿಜಯವಿಠ್ಠಲ ರೇಯ

ನಿತ್ಯ ಈ ಪರಿ ಯಿಂದ ನಡಿಸಿಕೊಂಬುವ ಒಲಿದು ॥೮॥


 ಆದಿತಾಳ 


ಭಾರತಿ ವಾಣಿ ನೋಡೆ ವಾಯು ಬ್ರಹ್ಮರೀರ್ವರು 

ನೂರು ಗುಣದಿಂದ ಉತ್ತಮರೆನಿಸುವರು 

ಕ್ಷೀರವಾರಿಧಿ ಸುತೆ ಇವರೆನ್ನೆ ನೋಡಲು 

ಮೀರಿ ಇಪ್ಪಳು ಕೋಟಿ ಗುಣದಿಂದ ಮಿಗಿಲೆನಿಸಿ

ಸಾರುವೆ ಮುಂದೆ ಕೇಳಿ ಸಿರಿದೇವಿಗಿಂತ 

ಪಾರವಾದನಂತ ಗುಣದಿಂದಧಿಕನಾಗಿ 

ನಾರಾಯಣ ನಿತ್ಯ ಕಲ್ಯಾಣ ಮೂರುತಿ 

ಪಾರತಂತ್ರ ದೋಷ ವಿದೂರ ವಿಶ್ವಮಯ

ಮೇರೆ ಇಲ್ಲದೆ ಮೆರೆವ ಸರ್ವೋತ್ತಮನಾಗಿ

ಆರಧಿಸಿದವರಿಗೆ ಅತಿದಯಾಪರನಯ್ಯ

ತಾರತಮ್ಯವ ಕೊಟ್ಟು ಭವ ಮಹಾರ್ಣವದಿಂದಾ

ತಾರ ಮಾಡುವನು ವಿಸ್ತಾರ ವ್ಯಾಪ್ತಿ ಗೊಪ್ತಾ

ಧಾರುಣಿಯೊಳಗಿದನೆ ಧರಿಸಿ ಹೃದಯದಲ್ಲಿ 

ಸಾರಿಸಾರಿಗೆ ಸಾರಿ ಪೇಳಿದ ಮನುಜನ್ನ 

ಭಾರವೈಸಿ ಹರಿ ಪೊರೆವನು ಪ್ರೀತಿಯಿಂದ 

ಶಾರೀರದಲ್ಲಿ ಇಪ್ಪ ವಿಜಯವಿಠ್ಠಲ ರೇಯ 

ಕಾರಣ ಕಾರ್ಯದಲ್ಲಿ ಒಂದಾನಂತವಾಗಿಹಾ ॥೯॥


 ಜತೆ


ಈ ಪರಿ ತಾರತಮ್ಯವೆ ತಿಳಿದರೆ ಗತಿಗೆ 

ಸೋಪಾನ ಸಿದ್ಧವು ವಿಜಯವಿಠ್ಠಲ ಪೊಳೆವಾ ॥೧೦॥

*****


No comments:

Post a Comment