Saturday, 8 May 2021

ತರಣಿ ತರುಣಿ vijaya vittala ankita suladi ಛಾಯಾ ಕ್ಷೇತ್ರ ಸುಳಾದಿ TARANI TARUNI CHAYA KSHETRA SULADI


  Audio by Vidwan Sumukh Moudgalya


ಶ್ರೀ ವಿಜಯದಾಸಾರ್ಯ ವಿರಚಿತ ಛಾಯಾ ಕ್ಷೇತ್ರ ಸುಳಾದಿ 

(ಈ ಸುಳಾದಿಯನ್ನು ದಾಸರಾಯರು ಶಾಲಿವಾಹನಶಕ 1666 ವಿಭವನಾಮ ಸಂವತ್ಸರ ವೈಶಾಖ ಶುದ್ಧ ಅಕ್ಷಯ ತೃತೀಯಾಕ್ಕೆ ಛಾಯಾಭಗವತಿಯ ಯಾತ್ರೆ ಮಾಡಿದಾಗ್ಯೆ ರಚಿಸಿದ್ದು.)


 ರಾಗ : ಚಂದ್ರಕೌನ್ಸ್ 


 ಧ್ರುವತಾಳ 

ತರಣಿ ತರುಣಿ ತನ್ನ ತವರಮನಿಗೆ ಪೋಪ 

ಭರದಿಂದ ಸ್ವಚ್ಛಾಯಾವಾ ನಿರ್ಮಾಣವನ್ನೆ ಮಾಡಿ 

ಸರಿಸಾದಲ್ಲಿ ಇಟ್ಟು ಗುಪ್ತ ಮಾರ್ಗದಲಿಂದ 

ತೆರಳಿ ಪೋಗಲು ಇತ್ತ ಛಾಯಾವೆಂಬೊ ನಾಮದಲಿ 

ಕರಿಸಿಕೊಳುತಲಿಪ್ಪ ಪ್ರಮದ ಮಲಮಕ್ಕಳೊಡನೆ 

ನಿರುತ ಮೆಲ್ಲಮೆಲ್ಲನೆ ಮತ್ಸರ ಮಾಡಲಾಗೆ 

ಅರಿತು ಆದಿತ್ಯದೇವ ನುಡಿದವಳ ಕೂಡ 

ಪರಿ ಏನೆಂದು ಪೂರ್ವೋತ್ತರ ತಿಳಪಲಾಗಿ ಕೇಳಿ 

ಇರದೆ ಕೋಪವ ತಾಳಿ ಶಾಪವನಿತ್ತು ನಿನಗೆ 

ನರಯೋನಿ ಬರಲಿ ಎಂದು ಗಹಗಹಿಸುತ್ತ ಬಂದು 

ಮರಳೆ ಮಾತಾಡಿದಳು ಗಂಡನ್ನ ಪ್ರಾರ್ಥಿಸಿ 

ಕರುಣಿಸು ವಿಶಾಪವಾಗುವಂತೆ ಎನಲು 

ಹರಿ ನಾರಿರೂಪ ಧರಿಸಿ ಬರಲಾಗಾ ಕಂಡ ಮಾ 

ತುರದಿಂದಾ ಮೋಕ್ಷಾವೆಂದು ಅಭಯಾಕೊಡಲು, ಛಾಯಾ 

ಪರಿಯಾಳಾಗಿ ಸಂಜ್ಞಾದೇವಿಗೆ ವಿಸ್ತರಿಸಿ

ಪೊರಟು ಬಂದಳು ನಾನಾ ದೇಶಗಳ ಚರಿಸುತ್ತ 

ಸರಿಯಿಲ್ಲ ಇಲ್ಲಿ ಎಂದು ಪೂರ್ವದಲ್ಲಿ ಬಂದು 

ನರನಾರಾಯಣಾಶ್ರಮ ಸೇರಿ ಬಹುಕಾಲ 

ತರಗೆಲೆ ಮೆದ್ದು ಬಲು ತಪವನೆ ಮಾಡಿದಳು 

ಸುರರಾ ವರ್ಷ ನೂರಾರು ಹಿಂದಾದವಯ್ಯ 

ಪರಮಪುರುಷ ನಮ್ಮ ವಿಜಯವಿಠಲರೇಯ 

ಶರಣಳ ಮನೋರಥ ಈ ಕ್ಷೇತ್ರದಲಿ ಮಾಳ್ಪ ॥೧॥


 ಮಟ್ಟತಾಳ 


ಶನೇಶ್ವರನ ಜನನಿ ತಪವನೆ ಮಾಡುತಿರೆ 

ಮುನಿನಾರದನು ಬಂದು ವೃತ್ತಾಂತವ ತಿಳಿದು 

ನಿನಗೆ ಬದರಿಯಲ್ಲಿ ಶಾಪವಾದದು ಮೋ -

ಚನವಾಗದಿಪ್ಪದು ಸಿದ್ಧಾಂತವ ಪೇಳುವೆನು, ದ -

ಕ್ಷಿಣ ದಿಕ್ಕಿನಲ್ಲಿ ಒಂದು ಉತ್ತುಮ ಸ್ಥಾನ 

ಗಣನೆ ಗಾಣೆನೊ ಅದಕೆ ಅಲ್ಲಿಗೆ ನೀ ಪೋಗಿ 

ಸನುಮತದಿಂದಲಿ ಹರಿಯನು ಒಲಿಸುವುದು 

ವನಧಿಶಯನ ನಮ್ಮ ವಿಜಯವಿಠಲರೇಯಾ 

ನಿನಗೆ ಪೊಳೆವ ವೇಗ ಮುಂದೆ ಬಂದು ನಿಂದೂ ॥೨॥


 ರೂಪಕತಾಳ 


ದೇವ ಹೃದಯವೆಂಬೊ ತೀರ್ಥಕ್ಕೆ ಬಂದಳಾ 

ದೇವಿ ವಿನೋದದಲಿ ಭಕ್ತಿ ಉದ್ರೇಕವ 

ಆವಾಗ ತಾಳಿ ಈ ರಮ್ಯವಾದದು ನೋಡಿ 

ಭಾವ ಶುದ್ಧದಲಿ ತಪವನೆ ಮಾಡಿದಳು ಅಂದು 

ದೇವತ ವರುಷ ಅರವತ್ತು ಸಾವಿರವಾಗೆ 

ಕಾವನಯ್ಯನು ಮೆಚ್ಚಿ ಬಯಕೆ ಸಲ್ಲಿಪೆನೆಂದು 

ಧಾವಂತಗೊಳಿಸಿ ಮಹರುದ್ರ ನೋಡ್ಯಾಡಿಸಿ 

ತಾ ವಧುರೂಪದಲಿ ಒಂದು ಪಾದವನಿಟ್ಟು 

ಜೀವನ ಮುಕ್ತರಿಗೆ ಸಾಧ್ಯಮಾಡಿಕೊಟ್ಟು 

ಕಾವ ಕರುಣದಿಂದ ಒಂದು ದಿನ ನೋಡಿದರೆ 

ದೇವದೇವೇಶ ಸಿರಿ ವಿಜಯವಿಠಲರೇಯಾ 

ಈ ವಸುಧಿಯೊಳು ಅಧಿಕಾವಾಗಿಲ್ಲಿಪ್ಪ ॥೩॥


 ಝಂಪೆತಾಳ 


ವರವಕೊಟ್ಟನು ದೇವ ಛಾಯಾದೇವಿಗೆ ಒಲಿದು 

ಧರಿಯೊಳಗೆ ಈ ಕ್ಷೇತ್ರ ನಿನ್ನ ಪೆಸರಿನಲಿ 

ಕರಸಿಕೊಳ್ಳಲಿ ಎಂದು ಪೇಳಿ ಅಂತರ್ಧಾನ 

ಹರಿಪೋಗಲು ಇತ್ತ ತನ್ನ ನಿಜಸ್ವರೂಪ 

ಹರುಷದಿಂದಲಿ ಐದಿ ನರಜನ್ಮವನೆ ಬಿಟ್ಟು 

ಪರಮಸೌಖ್ಯದಲಿ ಗಂಡನಕೂಡ ನಲಿದು 

ಇರುತಿರೆ ಇಲ್ಲಿಗೆ ಸರ್ವದೇವತೆಗಳು 

ಪರಿಪರಿಯಿಂದಲಿ ಪೊಗಳಿ ಪೂಮಳೆಗರೆದು 

ಮರಳೆ ಈ ಕ್ಷೇತ್ರದಲಿ ವಾಸವಾದರು ಬ್ರಹ್ಮ 

ಗಿರಿ ಇದು ಎಂದು ಸಾಧನ ಮಾಡುತ್ತ 

ಸರಿಗಾಣೆ ನಾನೆಲ್ಲಿ ಛಾಯ ಭಗವತಿಯೆ ಶ್ರೀ 

ಹರಿ ನಾರಾಯಣೀ ರೂಪವೆನ್ನಿ ಜನರೂ 

ಸುರರೊಡಿಯ ರಾಮ ಶ್ರೀ ವಿಜಯವಿಠಲರೇಯಾ 

ತರತಮ್ಯ ತಿಳದವಗೆ ಗತಿ ಕೊಡುವನು ಇಲ್ಲಿ ॥೪॥


 ತ್ರಿವಿಡಿತಾಳ 


ಅನಘ ದೇವ ಸೂರ್ಯ ಚಂದ್ರ ಕನ್ಯ ಬ್ರಹ್ಮ 

ವನಜ ಸಂಭವ ವಿಷ್ಣುಯೋನಿ ಮತ್ತೆ 

ಮುನಿವಶಿಷ್ಠ ವಿಶ್ವಾಮಿತ್ರ ಸಾಲಿಗ್ರಾಮ 

ವನಜ ಸ್ವರ್ಗದ್ವಾರ ನರಕದ್ವಾರ 

ಧನಸ್ಸುಕೋಟಿ ಕಪಿಲಾ ಗದಾರಾಮ ಸುದರು 

ಶನ ಮೊದಲಾದ ತೀರ್ಥಂಗಳುಂಟೂ 

ಇನಿತು ತಿಳಿದು ಇಲ್ಲಿ ಜ್ಞಾನಪೂರ್ವಕದಿಂದ 

ಕ್ಷಣ ಮಾತುರ ಅನುಷ್ಠಾನಮಾಡೆ 

ಮನುಜನ್ನ ದುರಿತಗಳು ಜನುಮಾ ಜನುಮದಿಂದ 

ಘನವಾಗಿ ಇದಕ್ಕಿಲ್ಲಾ ಕೇಳಿ ಅಕ್ಷಯ ತೃತೀಯಾ 

ದಿನದಲ್ಲಿ ಪ್ರತ್ಯಕ್ಷ ಹರಿಛಾಯೆಗೆ 

ಮುನಿ ವಿಶ್ವಾಮಿತ್ರನು ಕೋಪಾ ಪೋಗಾಡಿ ವಂ-

ದನೆ ಮಾಡಿದ ಅರುಂಧತಿಯ ಪತಿಗೆ 

ಪ್ರಣವ ಮೂರುತಿ ನಮ್ಮ ವಿಜಯವಿಠಲರೇಯನ 

ನೆನಸಿದವಗೆ ಸೂರ್ಯಲೋಕದಲ್ಲಿ ಮಾರ್ಗ ॥೫॥


 ಅಟ್ಟತಾಳ 


ಚಿತ್ರಕೂಟದಿಂದ ರಾಮಚಂದ್ರನು ಬಂದು 

ಪುತ್ರನಾದದಕೆ ದಶರಥರಾಯಗೆ 

ನಿತ್ಯ ನೈಮಿತ್ಯಕ ಮಾಡಿದ ಜನರಂತೆ 

ಸತ್ಯ ಸಂಕಲ್ಪ ತನ್ನ ಪತ್ನಿಯ ಕೂಡ 

ಸುತ್ತ ಯೋಜನ ಒಂದು ಕ್ರೋಶ ಪರಿಯಂತ 

ಕ್ಷೇತ್ರವೆನಿಸುತಿದೆ ಛಾಯಾವಿಡಿದು ಮುನಿ 

ಪೋತ್ತುಮ ಮಯೂರ ತೀರ್ಥವೆ ಕಡೆಮಾಡಿ 

ಇತ್ತಂದ ಇತ್ತಂಡವಾದ ಕೃಷ್ಣವೇಣಿ 

ಚಿತ್ರ ಮಾರ್ಕಂಡೆಯ ಜಾತಿ ಸ್ಮೃತಿ ಅಗಸ್ತ್ಯ 

ತತ್ತಳಿಸುವ ಈ ಮಧ್ಯದಲ್ಲಿ ವಿ-

ಚಿತ್ರ ತೀರ್ಥಂಗಳುಂಟು ನಾಮ ನಾಮಂಗಳು 

ಪ್ರತ್ಯೇಕವಾಗಿ ಕರೆಸಿಕೊಳ್ಳುತಲಿದ್ದು 

ಸ್ತುತಿಸಿದವರಿಗೆ ಮನ ನಿರ್ಮಳವಕ್ಕು 

ಉತ್ತರವಾಹಿನಿ ಸಂಗಮದಲಿ ಇದ್ದು 

ಸೋತ್ತುಮ ಜನಸೇವೆಮಾಡಿ ಧನ್ಯರಾಗಿ 

ಉತ್ತಮೋತ್ತಮ ನಮ್ಮ ವಿಜಯವಿಠಲರೇಯಾ 

ಹತ್ತಿಲಿ ಇರುತಿಪ್ಪ ಇಲ್ಲಿ ಬಂದವನಿಗೆ ॥೬॥


 ಆದಿತಾಳ 


ಒಂದು ತೀರ್ಥದಲ್ಲಿ ಸ್ನಾನಮಾಡುವಾಗನುಸಂ-

ಧಾನವಿರಬೇಕು ಈ ಪರಿ ಇರಬೇಕು 

ಮಂದರಧರ ಶಿರಿ ಮುಕ್ತರು ದ್ರವರೂಪ 

ವೆಂದು ತಿಳಿಯಬೇಕು ಅಪ್ರಾಕೃತವಾಗಿ 

ಪೊಂದಿ ಕೊಂಡಿಪ್ಪಾರು ಪರಿಚ್ಛಿನ್ನಪರಿಚ್ಛಿನ್ನ 

ದಿಂದಲಿ ಎಂತೆಂತು ನೋಡಿದರದರಂತೆ 

ಮುಂದೆ ಬೊಮ್ಮಾದಿಗಳು ಸಪರಿವಾರ ಸಮೇತ 

ಕುಂದದಲ್ಲಿಪ್ಪರು ಅಂಶ ಅಂಶಗಳಾಗಿ 

ಒಂದಾನಂತರೂಪ ಧರಿಸಿ ಅಧಿಷ್ಠಾನ 

ಸಂಧಿಸಿಕೊಂಡಿಹರು ಚತುರವಿಂಶತಿಯಲ್ಲಿ

ಒಂದೆ ಪ್ರಾಕೃತ ದ್ರವರೂಪವಾದರು ನೋಡೆ 

ಅಂದವಾಗಿದೆ ಸರ್ವತತ್ವ ಮಿಳಿತವೆನ್ನಿ 

ತಂದುಕೊಂಡು ಚಿತ್ತಕ್ಕೆ ಅಲ್ಲೆಲ್ಲಿ ಅಲ್ಲಿ ಇದ್ದ 

ವೃಂದಾರಕರ ಚಿಂತೆಮಾಡಿ ಏಕವಾಗಿ 

ಸಂದೇಹ ತೊರೆದು ಸರ್ವದಲಿ ಸಂಚರಿಸಿದ 

ಮಂದಿಯ ಪುಣ್ಯಕ್ಕೆ ಕಡೆ ಮೊದಲು ಇಲ್ಲ 

ನಿಂದಕಗೆ ಗತಿ ಇಲ್ಲ ವಿಜಯವಿಠಲ ಬಲ್ಲ 

ಸಂದೋಹದೊಡನೆ ಇಲ್ಲಿಗೆ ಬಂದವ ಯೋಗ್ಯ ॥೭॥


 ಜತೆ 


ಛಾಯವಾಗಿಪ್ಪ ಛಾಯಾಕ್ಷೇತ್ರ ನಿತ್ಯ 

ತಾಯಿ ನಮಗೆ ಎನ್ನಿ ವಿಜಯವಿಠಲ ಒಲಿವಾ ॥೮॥

******


[7:04 PM, 5/5/2021] Nandini Sripad Blog: ಛಾಯಾ ಕ್ಷೇತ್ರದ ಪುರಾಣ : 


ಸೂರ್ಯದೇವನ ಪತ್ನಿ ಸಂಜ್ಞೆಯ ಪ್ರತಿರೂಪವೇ ಛಾಯಾ ದೇವಿ. ಈಕೆಯನ್ನು ಪೂಜಿಸುವ ವಿರಳಾತಿವಿರಳ ದೇವಾಲಯವೊಂದು ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ನಾರಾಯಣಪುರದಲ್ಲಿ ಕೃಷ್ಣಾ ನದಿಯ ದಂಡೆ ಮೇಲಿದೆ. ಇದೇ, ಸುಕ್ಷೇತ್ರ ಛಾಯಾ ಭಗವತಿ.


ಹಾಗೆಂದು ಇಲ್ಲೇನೂ ಭಾರೀ ದೊಡ್ಡ ದೇವಸ್ಥಾನವೇನೂ ಇಲ್ಲ. ಕಲ್ಲು ಬಂಡೆ ಬುಡದಲ್ಲಿ ಪುಟ್ಟ ಮಂದಿರ, ಅದರಲ್ಲೊಂದು ಕಲ್ಲಿಗೆ ದೇವಿಯ ಮುಖವಾಡ. ವರ್ಷದ ನಿರ್ದಿಷ್ಟ ದಿನಗಳಂದು ಮಾತ್ರ ದೇವಿಯ ಮೇಲೆ ಸೂರ್ಯಾಸ್ತದ ಕಿರಣಗಳು ಬೀಳುವುದು ಇಲ್ಲಿನ ವಿಶೇಷ. ಮುಂದಿರುವ ಕೃಷ್ಣಾ ನದಿಯ ನೀರಿನ ಮಟ್ಟ ಹೆಚ್ಚಾದ ಸಂದರ್ಭದಲ್ಲಿ ಕೆಲವೊಮ್ಮೆ ದೇಗುಲವು ನೀರಿನಲ್ಲಿ ಮುಳುಗುತ್ತದೆ.


ಅಲ್ಲದೆ ಇಲ್ಲಿ ನದಿಯ ಮಧ್ಯದಲ್ಲಿ ಉತ್ತರ ವಾಹಿನಿ, ಸೂರ್ಯತೀರ್ಥ, ಚಂದ್ರ, ಬ್ರಹ್ಮವೇಣಿ, ವಿಷ್ಣುವೇಣಿ, ರುದ್ರವೇಣಿ, ಗೋಮುಖ, ಬ್ರಹ್ಮತೀರ್ಥ, ಸ್ವರ್ಗ, ನರಕ, ವಶಿಷ್ಠ, ಗದಾ, ಪದ್ಮಾ, ರಾಮಗಯಾ, ಕಪಿಲ, ಧನುಷ್ಕೋಟಿ, ಕನ್ಯಾ ಹೃದಯ, ಇಂದ್ರಪ್ರಸ್ಥವೆಂಬ 18 ಪುಣ್ಯತೀರ್ಥಗಳಿವೆ.


ಬೇಸಿಗೆಯಲ್ಲಿ ನದಿ ನೀರು ಕಡಿಮೆ ಇದ್ದಾಗ ಇವನ್ನು ಸ್ಪಷ್ಟವಾಗಿ ಗುರುತಿಸಬಹುದು. ಶ್ರೀ ರಾಮಚಂದ್ರ ವನವಾಸ ಸಂದರ್ಭದಲ್ಲಿ ಇಲ್ಲಿ ಪವಿತ್ರ ಸ್ನಾನ ಮಾಡಿದ್ದ ಎಂಬ ಪ್ರತೀತಿ. ಹೀಗಾಗಿ ಅಕ್ಷಯ ತೃತೀಯಾ ದಿನದಂದು ಸಹಸ್ರಾರು ಭಕ್ತರು ಇಲ್ಲಿ ಬಂದು 18 ತೀರ್ಥಗಳಲ್ಲಿ ಮಿಂದೆದ್ದು ಪುನೀತರಾಗುತ್ತಾರೆ.


ಸೂರ್ಯನಿಂದ ಶಾಪಗ್ರಸ್ಥಳಾದ ಛಾಯೆ ಮನುಷ್ಯ ರೂಪ ಪಡೆಯುತ್ತಾಳೆ. ವಿಷ್ಣುವನ್ನು ಮೋಹಿನಿ ರೂಪದಲ್ಲಿ ಕಂಡಾಗ ಮಾತ್ರ ನಿನಗೆ ಮುಕ್ತಿ ಎಂದು ಸೂರ್ಯ ಹೇಳುತ್ತಾನೆ. ತಪಸ್ಸಿಗೆ ಅಣಿಯಾದ ಛಾಯೆಗೆ ಎಲ್ಲಿಯೂ ಏಕಾಗ್ರತೆ ದೊರಕದಿದ್ದಾಗ, ನಾರದ ಮಹರ್ಷಿಗಳ ಸಲಹೆಯಂತೆ ಕೃಷ್ಣಾ ನದಿ ತೀರಕ್ಕೆ ಬಂದು ತಪಸ್ಸನ್ನು ಆಚರಿಸುತ್ತಾಳೆ.

ಈಕೆಯ ತಪಸ್ಸಿಗೆ ಸಂತುಷ್ಟನಾದ ವಿಷ್ಣು, ಮೋಹಿನಿ ರೂಪದಲ್ಲಿ ದರ್ಶನ ನೀಡಿ ಶಾಪ ವಿಮುಕ್ತಿಗೊಳಿಸುತ್ತಾನೆ. ವಿಷ್ಣು  ಸ್ತ್ರೀ ರೂಪ  ದರ್ಶನ ನೀಡಿದ್ದರಿಂದಲೇ ಈ ಕ್ಷೇತ್ರ ಛಾಯಾ ಭಗವತಿ ಎಂದು ಹೆಸರಾಯಿತು ಎನ್ನುತ್ತದೆ ಸ್ಥಳ ಮಹಾತ್ಮೆ.


ಇಲ್ಲಿ ನಿರ್ದಿಷ್ಟವಾದ ಸೇವೆಗಳಿಲ್ಲ. ಭಕ್ತರು ತಾವೇ ಸ್ವತಃ ಪೂಜಿಸಬಹುದಾಗಿದೆ. ಅದಕ್ಕೇನೂ ಸೇವಾ ಶುಲ್ಕ ಇಲ್ಲ. ವಿಶೇಷ ದಿನಗಳಲ್ಲಿ ಮಾತ್ರ ಅರ್ಚಕರು ಬಂದು ಪೂಜೆ ಸಲ್ಲಿಸುತ್ತಾರೆ. ಈ ಪುಣ್ಯ ಕ್ಷೇತ್ರವು ನಾರಾಯಣಪುರದಿಂದ 3 ಕಿಮೀ ಅಂತರದಲ್ಲಿದೆ.


🙏 ಶ್ರೀ ಕೃಷ್ಣಾರ್ಪಣಮಸ್ತು 🙏

******

No comments:

Post a Comment